IND vs AUS: ಅರ್ಧಶತಕ ವಂಚಿತರಾದ ಟೀಮ್ ಇಂಡಿಯಾ ಬೌಲರ್ಗಳು: ಫುಲ್ ಟ್ರೋಲ್
India vs Austraila: 209 ರನ್ಗಳ ಕಠಿಣ ಗುರಿ ನೀಡಿದ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಸುಲಭ ಜಯ ಸಾಧಿಸಲಿದೆ ಎಂದೇ ಎಲ್ಲರೂ ಭಾವಿಸಿದ್ದರು.
India vs Australia 1st T20: ಭಾರತ-ಆಸ್ಟ್ರೇಲಿಯಾ ನಡುವಣ ಮೊದಲ ಟಿ20 ಪಂದ್ಯದಲ್ಲಿ ಆರೋನ್ ಫಿಂಚ್ ಪಡೆ 4 ವಿಕೆಟ್ಗಳಿಂದ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ. ವಿಶೇಷ ಎಂದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಭರ್ಜರಿ ಪ್ರದರ್ಶನವನ್ನೇ ನೀಡಿದ್ದರು. ಆಸೀಸ್ ಬೌಲರ್ಗಳ ಬೆಂಡೆತ್ತಿದ್ದ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಬೃಹತ್ ಮೊತ್ತ ಪೇರಿಸಿದ್ದರು. ಆರಂಭಿಕ ಆಟಗಾರ ಕೆಎಲ್ ರಾಹುಲ್ 35 ಎಸೆತಗಳಲ್ಲಿ 55 ರನ್ ಬಾರಿಸಿದರೆ, ಸೂರ್ಯಕುಮಾರ್ ಯಾದವ್ ಕೇವಲ 24 ಎಸೆತಗಳಲ್ಲಿ 45 ರನ್ ಚಚ್ಚಿದ್ದರು. ಇನ್ನು ಅಂತಿಮ ಹಂತದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ ಹಾರ್ದಿಕ್ ಪಾಂಡ್ಯ 30 ಎಸೆತಗಳಲ್ಲಿ ಅಜೇಯ 71 ರನ್ ಬಾರಿಸಿದ್ದರು. ಪರಿಣಾಮ 20 ಓವರ್ಗಳಲ್ಲಿ ಟೀಮ್ ಇಂಡಿಯಾ ಮೊತ್ತ 208 ಕ್ಕೆ ಬಂದು ನಿಂತಿತು.
209 ರನ್ಗಳ ಕಠಿಣ ಗುರಿ ನೀಡಿದ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಸುಲಭ ಜಯ ಸಾಧಿಸಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಪಂದ್ಯದ ಆರಂಭದಲ್ಲೇ ಟೀಮ್ ಇಂಡಿಯಾ ಬೌಲರ್ಗಳು ಲಯ ತಪ್ಪಿರುವುದು ಸ್ಪಷ್ಟವಾಗಿತ್ತು. ಏಕೆಂದರೆ ಪವರ್ಪ್ಲೇನಲ್ಲಿ ಆಸ್ಟ್ರೇಲಿಯಾ ಆಟಗಾರರು 60 ರನ್ ಚಚ್ಚಿದ್ದರು.
ಈ ಅಬ್ಬರವನ್ನು ಮುಂದುವರೆಸಿದ ಆಸೀಸ್ ಬ್ಯಾಟ್ಸ್ಮನ್ಗಳು ಟೀಮ್ ಇಂಡಿಯಾ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ತಂಡದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ 4 ಓವರ್ನಲ್ಲಿ ನೀಡಿದ್ದು ಬರೋಬ್ಬರಿ 52 ರನ್ಗಳು. ಅಂದರೆ ಯಾವುದೇ ವಿಕೆಟ್ ಪಡೆಯದೇ ಭುವಿ 24 ಎಸೆತಗಳಲ್ಲಿ 52 ರನ್ ನೀಡಿದ್ದರು. ಇದೀಗ ಭುವನೇಶ್ವರ್ ಕುಮಾರ್ ಅವರನ್ನು 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬೌಲರ್ ಎಂದು ಟ್ರೋಲ್ ಮಾಡಲಾಗುತ್ತಿದೆ.
ಮತ್ತೊಂದೆಡೆ ಮತ್ತೋರ್ವ ಪ್ರಮುಖ ಹರ್ಷಲ್ ಪಟೇಲ್ ಕೂಡ 4 ಓವರ್ಗಳಲ್ಲಿ 49 ರನ್ ಬಿಟ್ಟುಕೊಟ್ಟರು. ಅಂದರೆ ಹರ್ಷಲ್ ಪಟೇಲ್ 1 ರನ್ನಿಂದ ಅರ್ಧಶತಕ ವಂಚಿತರಾಗಿದ್ದಾರೆ ಎಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕಿಚಾಯಿಸುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಟೀಮ್ ಇಂಡಿಯಾದ ಇಬ್ಬರು ಪ್ರಮುಖ ವೇಗಿಗಳು ಬರೋಬ್ಬರಿ 101 ರನ್ ಬಿಟ್ಟುಕೊಟ್ಟಿದ್ದರು ಎಂಬುದು. ಹಾಗೆಯೇ ಯುಜ್ವೇಂದ್ರ ಚಹಾಲ್ 3.2 ಓವರ್ಗಳಲ್ಲಿ 42 ರನ್ ನೀಡಿ 8 ರನ್ಗಳಿಂದ ಹಾಫ್ ಸೆಂಚುರಿ ತಪ್ಪಿಸಿಕೊಂಡರು.
ಇನ್ನು ಉಮೇಶ್ ಯಾದವ್ 2 ವಿಕೆಟ್ ಪಡೆದರೂ 2 ಓವರ್ಗಳಲ್ಲಿ 27 ರನ್ ಚಚ್ಚಿಸಿಕೊಂಡಿದ್ದರು. ಈ ಮೂಲಕ ರನ್ ಮಿಷಿನ್ ಉಮೇಶ್ ಯಾದವ್ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಬೃಹತ್ ಮೊತ್ತ ಪೇರಿಸಿದರೂ ಕಳಪೆ ಬೌಲಿಂಗ್ ಮೂಲಕ ಭಾರತ ತಂಡ ಸೋತಿದೆ.
ಇದಾಗ್ಯೂ ಟೀಮ್ ಇಂಡಿಯಾ ಪರ ಅಕ್ಷರ್ ಪಟೇಲ್ 4 ಓವರ್ಗಳಲ್ಲಿ 17 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಆದರೆ ಉಳಿದ ಬೌಲರ್ಗಳಿಂದ ಉತ್ತಮ ಪ್ರದರ್ಶನ ಮಾತ್ರ ಮೂಡಿಬಂದಿರಲಿಲ್ಲ. ಹೀಗಾಗಿಯೇ ಟೀಮ್ ಇಂಡಿಯಾ ಬೌಲಿಂಗ್ ಸಾಮರ್ಥ್ಯದ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಏಕೆಂದರೆ ಇತ್ತೀಚೆಗೆ ಏಷ್ಯಾಕಪ್ನಲ್ಲೂ ಟೀಮ್ ಇಂಡಿಯಾ ಕಳಪೆ ಬೌಲಿಂಗ್ನಿಂದಲೇ ಸೋಲನುಭವಿಸಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ. ಇದೀಗ ಟಿ20 ವಿಶ್ವಕಪ್ಗೂ ಮುನ್ನ ಆಡುತ್ತಿರುವ ಸರಣಿಯಲ್ಲೂ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದ ಹುಳುಕು ಎದ್ದು ಕಾಣಿಸಿದೆ.