Rohit Sharma: ಟೀಮ್ ಇಂಡಿಯಾ ಸೋಲಿಗೆ ಯಾರು ಕಾರಣ? ರೋಹಿತ್ ಶರ್ಮಾ ಹೇಳಿದ್ದೇನು?
India vs Australia: ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಮೊದಲು ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಸ್ಪೋಟಕ ಆರಂಭ ಒದಗಿಸಿದ್ದರು.
India vs Australia 1st T20: ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಹೀನಾಯವಾಗಿ ಸೋತಿದೆ. 209 ರನ್ಗಳ ಬೃಹತ್ ಟಾರ್ಗೆಟ್ ನೀಡಿದರೂ ಈ ಮೊತ್ತವನ್ನು ಆಸ್ಟ್ರೇಲಿಯಾ ತಂಡವು ಸುಲಭವಾಗಿ ಚೇಸ್ ಮಾಡಿತು. ಈ ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ತಂಡದ ಹೀನಾಯ ಸೋಲಿಗೆ ಬೌಲರ್ಗಳೇ ಕಾರಣ ಎಂದರು. ನಮ್ಮ ಬೌಲಿಂಗ್ ತುಂಬಾ ಕೆಟ್ಟದ್ದಾಗಿತ್ತು. ಅಲ್ಲದೆ ಮೈದಾನದಲ್ಲಿ ಸಿಕ್ಕ ಕೆಲ ಅವಕಾಶಗಳನ್ನೂ ಕೂಡ ನಾವು ಬಳಸಿಕೊಂಡಿಲ್ಲ. ಇದರ ಸಂಪೂರ್ಣ ಲಾಭ ಪಡೆದ ಆಸ್ಟ್ರೇಲಿಯಾ ತಂಡವು ಸುಲಭವಾಗಿ ಜಯ ಸಾಧಿಸಿದೆ ಎಂದು ರೋಹಿತ್ ಶರ್ಮಾ ಹೇಳಿದರು.
ಇನ್ನು ತಂಡದ ಕಳಪೆ ಪ್ರದರ್ಶನಕ್ಕೆ ಬೌಲರ್ಗಳನ್ನೇ ದೂರಿದ ಹಿಟ್ಮ್ಯಾನ್ ನಾವು ಅಷ್ಟು ಚೆನ್ನಾಗಿ ಬೌಲಿಂಗ್ ಮಾಡಿದ್ದೇವೆ ಎಂದು ನಾನು ಭಾವಿಸುವುದಿಲ್ಲ. 200 ಸ್ಕೋರ್ ಡಿಫೆಂಡ್ ಮಾಡಲು ಸಾಧ್ಯವಾಗಿಲ್ಲ ಎಂದರೆ ಅದು ಅತ್ಯಂತ ಕೆಟ್ಟ ಬೌಲಿಂಗ್ ಪ್ರದರ್ಶನವಾಗಿರುತ್ತದೆ. ಏಕೆಂದರೆ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದೇವೆ. ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎಂಬುದನ್ನು ತಿಳಿಯಲು ಇದು ಉತ್ತಮ ವೇದಿಕೆಯಾಗಿತ್ತು. ಹೀಗಾಗಿ ಮುಂಬರುವ ಪಂದ್ಯದಲ್ಲಿ ತಪ್ಪನ್ನು ಸರಿಪಡಿಸಿ ಕಂಬ್ಯಾಕ್ ಮಾಡಲಿದ್ದೇವೆ ಎಂದು ರೋಹಿತ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದರು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಮೊದಲು ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಸ್ಪೋಟಕ ಆರಂಭ ಒದಗಿಸಿದ್ದರು. ಆದರೆ 11 ರನ್ಗಳಿಸಿದ್ದ ವೇಳೆ ಹಿಟ್ಮ್ಯಾನ್ ಕ್ಯಾಚ್ ನೀಡಿ ಹೊರನಡೆಯಬೇಕಾಯಿತು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (2) ಕೂಡ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದೆಡೆ ಸಿಡಿಲಬ್ಬರದ ಪ್ರದರ್ಶಿಸಿದ ಟೀಮ್ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದರು. ಪರಿಣಾಮ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಕೆಎಲ್ ರಾಹುಲ್ಗೆ ಉತ್ತಮ ಸಾಥ್ ನೀಡಿದ ಸೂರ್ಯ ಕುಮಾರ್ ಯಾದವ್ ಕೂಡ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.
ಆದರೆ ಅರ್ಧಶತಕದ ಬೆನ್ನಲ್ಲೇ ಕೆಎಲ್ ರಾಹುಲ್ (55) ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು. 35 ಎಸೆತಗಳನ್ನು ಎದುರಿಸಿದ್ದ ರಾಹುಲ್ 3 ಸಿಕ್ಸ್ ಹಾಗೂ 4 ಫೋರ್ ಬಾರಿಸಿ ಗಮನ ಸೆಳೆದರು. ಇದಾಗ್ಯೂ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ್ದ ಸೂರ್ಯಕುಮಾರ್ ಯಾದವ್ 4 ಸಿಕ್ಸ್ನೊಂದಿಗೆ 25 ಎಸೆತಗಳಲ್ಲಿ 45 ರನ್ ಬಾರಿಸಿದರು. ಆದರೆ ಹಾಫ್ ಸೆಂಚುರಿ ಹೊಸ್ತಿಲ್ಲಲಿ ಕೀಪರ್ಗೆ ಕ್ಯಾಚ್ ನೀಡಿದರು.
5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ ಅಕ್ಷರಶಃ ಅಬ್ಬರಿಸಿದರು. ಆಸೀಸ್ ಬೌಲರ್ಗಳ ಬೆಂಡೆತ್ತಿದ ಪಾಂಡ್ಯ ಕೇವಲ 25 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ಅಷ್ಟೇ ಅಲ್ಲದೆ 5 ಸಿಕ್ಸ್ ಹಾಗೂ 7 ಫೋರ್ನೊಂದಿಗೆ ಕೇವಲ 30 ಎಸೆತಗಳಲ್ಲಿ ಅಜೇಯ 71 ರನ್ ಬಾರಿಸುವ ಮೂಲಕ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಟೀಮ್ ಇಂಡಿಯಾ ಮೊತ್ತವನ್ನು 208 ಕ್ಕೆ ತಂದು ನಿಲ್ಲಿಸಿದರು.
ಆದರೆ ಟೀಮ್ ಇಂಡಿಯಾ ಪರ ಅಕ್ಷರ್ ಪಟೇಲ್ 4 ಓವರ್ಗಳಲ್ಲಿ 17 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದ್ದು ಬಿಟ್ಟರೆ ಉಳಿದ ಬೌಲರ್ಗಳಿಂದ ಉತ್ತಮ ಪ್ರದರ್ಶನ ಮೂಡಿಬಂದಿರಲಿಲ್ಲ. ವೇಗಿ ಭುವನೇಶ್ವರ್ ಕುಮಾರ್ ಯಾವುದೇ ವಿಕೆಟ್ ಪಡೆಯದೇ 4 ಓವರ್ಗಳಲ್ಲಿ 52 ರನ್ ನೀಡಿದರು. ಮತ್ತೊಂದೆಡೆ ಹರ್ಷಲ್ ಪಟೇಲ್ ಕೂಡ 4 ಓವರ್ಗಳಲ್ಲಿ 49 ರನ್ ಬಿಟ್ಟುಕೊಟ್ಟರು. ಹಾಗೆಯೇ ಚಹಾಲ್ 3.2 ಓವರ್ಗಳಲ್ಲಿ 42 ರನ್ ನೀಡಿದರು. ಇನ್ನು ಉಮೇಶ್ ಯಾದವ್ 2 ವಿಕೆಟ್ ಪಡೆದರೂ 2 ಓವರ್ಗಳಲ್ಲಿ 27 ರನ್ ಚಚ್ಚಿಸಿಕೊಂಡಿದ್ದರು. ಪರಿಣಾಮ 19.2 ಓವರ್ಗಳಲ್ಲಿ ಆಸ್ಟ್ರೇಲಿಯಾ ತಂಡವು 6 ವಿಕೆಟ್ ನಷ್ಟಕ್ಕೆ 211 ರನ್ ಬಾರಿಸಿ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.