ಭಾರತ-ಆಸ್ಟ್ರೇಲಿಯಾ ಪಂದ್ಯದ ವೇಳೆ ಯುವರಾಜ್ ಸಿಂಗ್ಗೆ ವಿಶೇಷ ಗೌರವ: ಭಾವುಕರಾದ ಸಿಕ್ಸರ್ ಕಿಂಗ್
Yuvraj Singh: ಟೀಮ್ ಇಂಡಿಯಾ ಪರ 40 ಟೆಸ್ಟ್, 304 ಏಕದಿನ ಮತ್ತು 58 ಟಿ20 ಪಂದ್ಯಗಳನ್ನಾಡಿರುವ ಯುವರಾಜ್ ಸಿಂಗ್ ಒಟ್ಟು 11,778 ರನ್ ಕಲೆಹಾಕಿದ್ದಾರೆ. ಹಾಗೆಯೇ 148 ವಿಕೆಟ್ ಉರುಳಿಸುವ ಮೂಲಕ ಮಿಂಚಿದ್ದರು.
ಮೊಹಾಲಿಯಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಣ ಪಂದ್ಯದ ವೇಳೆ ಟೀಮ್ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ಪಂಜಾಬ್ ಮೂಲದ ಕ್ರಿಕೆಟಿಗನಾಗಿರುವ ಯುವಿಯ ಸಾಧನೆಯನ್ನು ಗೌರವಿಸುವ ಸಲುವಾಗಿ ಇದೀಗ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (ಪಿಸಿಎ) ಮೊಹಾಲಿ ಸ್ಟೇಡಿಯಂನ ಸ್ಟ್ಯಾಂಡ್ಗೆ ಯುವರಾಜ್ ಸಿಂಗ್ ಹೆಸರು ನೀಡಲಾಗಿದೆ. ಹಾಗೆಯೇ ಮತ್ತೋರ್ವ ಪಂಜಾಬಿ ಕ್ರಿಕೆಟಿಗ ಹರ್ಭಜನ್ ಸಿಂಗ್ಗೂ ಗೌರವ ಸಲ್ಲಿಸಲಾಗಿದ್ದು, ಸ್ಟೇಡಿಯಂನ ಮತ್ತೊಂದು ಸ್ಟ್ಯಾಂಡ್ಗೆ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ನ ಹೆಸರಿಡಲಾಗಿದೆ. ಅದರಂತೆ ಮುಂಬುರುವ ದಿನಗಳಲ್ಲಿ ಮೊಹಾಲಿ ಸ್ಟೇಡಿಯಂನ ಎರಡು ಗ್ಯಾಲರಿಗಳು ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಹೆಸರಿನಲ್ಲಿ ರಾರಾಜಿಸಲಿದೆ.
ಈ ವಿಶೇಷ ಗೌರವದ ಬಳಿಕ ಮಾತನಾಡಿದ ಯುವರಾಜ್ ಸಿಂಗ್, ರಾಜ್ಯ ಘಟಕಗಳು ಅಂತರರಾಷ್ಟ್ರೀಯ ಕ್ರಿಕೆಟಿಗರ ಸಾಧನೆಗಳನ್ನು ಗೌರವಿಸುವ ಜೊತೆಗೆ ಮಾಜಿ ದೇಶೀಯ ಕ್ರಿಕೆಟಿಗರ ಸಾಧನೆಗಳನ್ನು ಸಹ ಪ್ರಶಂಸಿಸಬೇಕು ಎಂದು ಹೇಳಿದರು. ಈ ಮೂಲಕ ದೇಶೀಯ ಅಂಗಳದಲ್ಲಿ ಮಿಂಚಿದ್ದ ಕ್ರಿಕೆಟಿಗರಿಗೂ ಇಂತಹ ಗೌರವ ನೀಡಬೇಕೆಂದು ಪರೋಕ್ಷವಾಗಿ ತಿಳಿಸಿದರು. 40 ವರ್ಷದ ಅನುಭವಿ ಆಲ್‌ರೌಂಡರ್ ಸುಮಾರು ಎರಡು ದಶಕಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ನಂತರ 2019 ರಲ್ಲಿ ನಿವೃತ್ತರಾದರು.
ಭಾವುಕರಾದ ಯುವರಾಜ್ ಸಿಂಗ್:
2011ರ ವಿಶ್ವಕಪ್ ಹೀರೋಗಳಲ್ಲಿ ಒಬ್ಬರಾಗಿರುವ ಯುವರಾಜ್ ಸಿಂಗ್ ಬಿಸಿಸಿಐನ ‘ಬ್ಲೇಜರ್’ ಧರಿಸಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷ. ಈ ‘ಬ್ಲೇಜರ್’ ಬಗ್ಗೆ ಕೇಳಿದಾಗ ಭಾವುಕರಾದ ಯುವಿ, ಪಿಸಿಎ ಸ್ಟೇಡಿಯಂನಲ್ಲಿ ಈ ರೀತಿ ಮರಳಿರುವುದು ಸಂತಸ ತಂದಿದೆ ಎಂದರು.
ನಾನು ಮೊದಲ ಬಾರಿಗೆ ನನ್ನ ಕ್ರೀಡಾಂಗಣದಲ್ಲಿ ಬಿಸಿಸಿಐ ಬ್ಲೇಜರ್ ಧರಿಸುತ್ತಿದ್ದೇನೆ. ಅದು ಕೂಡ ನನ್ನ ರಾಜ್ಯ ಕ್ರಿಕೆಟ್ ಅಸೋಷಿಯೇಷನ್ನಿಂದ ಈ ಗೌರವಕ್ಕೆ ಪಾತ್ರರಾಗುತ್ತಿರುವುದಕ್ಕೆ ತುಂಬಾ ಖುಷಿಯಿದೆ ಎಂದು ಭಾವುಕರಾದರು. ಟೀಮ್ ಇಂಡಿಯಾ ಪರ 40 ಟೆಸ್ಟ್, 304 ಏಕದಿನ ಮತ್ತು 58 ಟಿ20 ಪಂದ್ಯಗಳನ್ನಾಡಿರುವ ಯುವರಾಜ್ ಸಿಂಗ್ ಒಟ್ಟು 11,778 ರನ್ ಕಲೆಹಾಕಿದ್ದಾರೆ. ಹಾಗೆಯೇ 148 ವಿಕೆಟ್ ಉರುಳಿಸುವ ಮೂಲಕ ಮಿಂಚಿದ್ದರು.
Published On - 3:55 pm, Wed, 21 September 22