ಗೆಲ್ಲಲು ಮಾತ್ರ ಹೊರಟ ಇಂಗ್ಲೆಂಡ್ಗೆ ಟೆಸ್ಟ್ನ ಟೇಸ್ಟ್ ತೋರಿಸಿದ ಟೀಮ್ ಇಂಡಿಯಾ
Bazball: ನ್ಯೂಝಿಲೆಂಡ್ ತಂಡದ ಮಾಜಿ ನಾಯಕ, ಇಂಗ್ಲೆಂಡ್ ತಂಡದ ಪ್ರಸ್ತುತ ಕೋಚ್ ಬ್ರೆಂಡನ್ ಮೆಕಲಂ ಅವರ ಅಡ್ಡಹೆಸರು ಬಾಝ್. ಕ್ರಿಕೆಟ್ ಅಂಗಳದಲ್ಲಿ ಬಾಝ್ ಎಂದೇ ಚಿರಪರಿಚಿತರಾಗಿರುವ ಮೆಕಲಂ ಅವರ ಆಕ್ರಮಣಕಾರಿ ಟೆಸ್ಟ್ ವಿಧಾನವನ್ನು ಇದೀಗ ಬಾಝ್ಬಾಲ್ (BazBall) ಕ್ರಿಕೆಟ್ ಎಂದು ಕರೆಯಲಾಗುತ್ತಿದೆ.

ಇಂಗ್ಲೆಂಡ್ ಬಾಝ್ಬಾಲ್ ಆಟ ಶುರು ಮಾಡಿ 3 ವರ್ಷಗಳಾಗಿವೆ. ಈ ಮೂರು ವರ್ಷಗಳಲ್ಲಿ ಆಂಗ್ಲರು ಟೆಸ್ಟ್ ಆಡಿದ್ದು ಗೆಲ್ಲಲು ಮಾತ್ರ. ಅಂದರೆ ಡ್ರಾ ಎಂಬ ಆಯ್ಕೆಯನ್ನೇ ಸಂಪೂರ್ಣವಾಗಿ ಮರೆತಿದ್ದರು. ಹೀಗೆ ಮೈ ಮರೆತಿದ್ದ ಇಂಗ್ಲೆಂಡ್ ತಂಡಕ್ಕೆ ಟೆಸ್ಟ್ನ ಅಸಲಿ ಟೇಸ್ಟ್ ತೋರಿಸುವಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು ಯಶಸ್ವಿಯಾಗಿದ್ದಾರೆ.
ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಭಾರತ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 358 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಇಂಗ್ಲೆಂಡ್ ಕಲೆಹಾಕಿದ್ದು ಬರೋಬ್ಬರಿ 669 ರನ್ಗಳು.
ಅಂದರೆ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವು ಬರೋಬ್ಬರಿ 311 ರನ್ಗಳ ಮುನ್ನಡೆ ಪಡೆದುಕೊಂಡಿದ್ದರು. ಹೀಗಾಗಿಯೇ 4ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಾಗಿತ್ತು. ಇದನ್ನು ಪುಷ್ಠೀಕರಿಸುವಂತೆ ಭಾರತ ತಂಡವು ದ್ವಿತೀಯ ಇನಿಂಗ್ಸ್ ಶುರು ಮಾಡಿ ಖಾತೆ ತೆರೆಯುವ ಮುನ್ನವೇ ಎರಡು ವಿಕೆಟ್ ಕಳೆದುಕೊಂಡಿದ್ದರು.
ಆದರೆ ಆ ಬಳಿಕ ಶುರುವಾಗಿದ್ದೇ ಅಸಲಿ ಟೆಸ್ಟ್. 3ನೇ ವಿಕೆಟ್ಗೆ ಜೊತೆಯಾದ ಕೆಎಲ್ ರಾಹುಲ್ ಹಾಗೂ ಶುಭ್ಮನ್ ಗಿಲ್ ಕ್ರೀಸ್ ಕಚ್ಚಿ ನಿಂತರು. ಪರಿಣಾಮ ಇಂಗ್ಲೆಂಡ್ ಬೌಲರ್ಗಳ ತೋಳ್ಬಲವೇ ಹುದುಗಿ ಹೋಯಿತು. ರಕ್ಷಣಾತ್ಮಕ ಆಟದೊಂದಿಗೆ ಆಂಗ್ಲ ವೇಗಿಗಳನ್ನು ಎದುರಿಸಿದ ರಾಹುಲ್ ಹಾಗೂ ಗಿಲ್ ಜೋಡಿ 3ನೇ ವಿಕೆಟ್ಗೆ ಬರೋಬ್ಬರಿ 188 ರನ್ ಪೇರಿಸಿದರು.
ಇದರ ಬೆನ್ನಲ್ಲೇ 90 ರನ್ಗಳಿಸಿ ರಾಹುಲ್ ಔಟಾದರು. ಈ ತೊಂಬತ್ತು ರನ್ಗಳಿಸಲು ಕೆಎಲ್ಆರ್ ಎದುರಿಸಿದ್ದು ಬರೋಬ್ಬರಿ 230 ಎಸೆತಗಳನ್ನು. ಅಂದರೆ ರನ್ಗಳಿಸುವುದಕ್ಕಿಂತ ಪಂದ್ಯವನ್ನು ಡ್ರಾ ಗೊಳಿಸಲು ಎಲ್ಲಾ ರೀತಿಯಲ್ಲೂ ರಾಹುಲ್ ಸೆಟೆದು ನಿಂತಿದ್ದರು.
ಮತ್ತೊಂದೆಡೆ ಇಂಗ್ಲೆಂಡ್ ಪಾಲಿಗೆ ಶುಭ್ಮನ್ ಗಿಲ್ ಕೂಡ ಮಹಾ ಗೋಡೆಯಾಗಿ ಪರಿಣಮಿಸಿತು. ಗಿಲ್ ಕೂಡ 238 ಎಸೆತಗಳನ್ನು ಎದುರಿಸಿ 103 ರನ್ಗಳಿಸಿದರು. ಆ ಬಳಿಕ ಬಂದ ವಾಷಿಂಗ್ಟನ್ ಸುಂದರ್ 206 ಎಸೆತಗಳೊಂದಿಗೆ 101 ರನ್ಗಳಿಸಿದರು. ಇದರ ಜೊತೆಗೆ ರವೀಂದ್ರ ಜಡೇಜಾ 185 ಎಸೆತಗಳನ್ನು ಎದುರಿಸಿ 107 ರನ್ ಬಾರಿಸಿದರು.
4ನೇ ದಿನದಾಟದ ಕೊನೆಯ ಸೆಷನ್ನಲ್ಲಿ ಶುರುವಾದ ಟೀಮ್ ಇಂಡಿಯಾ ಬ್ಯಾಟರ್ಗಳ ಅಸಲಿ ಟೆಸ್ಟ್ ಆಟ ಕೊನೆಗೊಂಡಿದ್ದು ಐದನೇ ದಿನದಾಟದ ಮೂರನೇ ಸೆಷನ್ನಲ್ಲಿ. ಅದು ಕೂಡ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರ ಶೇಕ್ ಹ್ಯಾಂಡ್ನೊಂದಿಗೆ..!
ಅಲ್ಲೇ ಡ್ರಾ:
ಹೌದು, ಟೆಸ್ಟ್ನಲ್ಲಿ ಡ್ರಾವನ್ನೇ ಮರೆತಿದ್ದ ಇಂಗ್ಲೆಂಡ್ ತಂಡಕ್ಕೆ ಬಾಝ್ಬಾಲ್ ಯುಗದಲ್ಲಿ 2ನೇ ಬಾರಿ ಡ್ರಾ ರುಚಿ ತೋರಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಅಂದರೆ 2022 ರಿಂದ ಈವರೆಗೆ 36 ಟೆಸ್ಟ್ ಪಂದ್ಯಗಳನ್ನಾಡಿರುವ ಇಂಗ್ಲೆಂಡ್ ತಂಡವು ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಿದ್ದು ಕೇವಲ 2 ಬಾರಿ ಮಾತ್ರ.
2023 ರಲ್ಲಿ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಆ್ಯಶಸ್ ಸರಣಿಯ 4ನೇ ಟೆಸ್ಟ್ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸುವಲ್ಲಿ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿತ್ತು. ಇದಾದ ಬಳಿಕ ಇಂಗ್ಲೆಂಡ್ ಒಂದೇ ಒಂದು ಮ್ಯಾಚ್ನಲ್ಲಿ ಡ್ರಾ ಸಾಧಿಸಿರಲಿಲ್ಲ. ಡ್ರಾ ಸಾಧಿಸಿಲ್ಲ ಅನ್ನುವುದಕ್ಕಿಂತ, ಇಂಗ್ಲೆಂಡ್ ಪಂದ್ಯ ಗೆಲ್ಲಬೇಕು ಇಲ್ಲ ಸೋಲಬೇಕೆಂಬ ಧ್ಯೇಯವಾಕ್ಯದೊಂದಿಗೆ ಕಣಕ್ಕಿಳಿಯುತ್ತಿದ್ದರು.
ಹೀಗೆ ಗೆಲುವೊಂದೇ ಮಂತ್ರ ಎಂಬ ಧ್ಯೇಯವಾಕ್ಯದೊಂದಿಗೆ ಸಾಗಿದ್ದ ಇಂಗ್ಲೆಂಡ್ಗೆ ಮತ್ತೆ ಡ್ರಾ ಫಲಿತಾಂಶ ಎದುರಾಗಿದೆ. ಅದು ಸಹ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲೇ ಎಂಬುದು ವಿಶೇಷ. ಅಂದರೆ 2023 ರಲ್ಲಿ ಇದೇ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಿದ್ದರು. ಇದು ಬಾಝ್ಬಾಲ್ ಯುಗದ ಇಂಗ್ಲೆಂಡ್ ತಂಡದ ಮೊದಲ ಡ್ರಾ ಪಂದ್ಯವಾಗಿತ್ತು.
ಇದೀಗ 2 ವರ್ಷಗಳ ಬಳಿಕ ಇದೇ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಈ ಮೂಲಕ ಆಂಗ್ಲರ ಪಡೆಗೆ ಭಾರತೀಯರು ಟೆಸ್ಟ್ನ ಅಸಲಿ ಟೇಸ್ಟ್ ತೋರಿಸಿದ್ದಾರೆ.
ಇದನ್ನೂ ಓದಿ: WTC ಅಂಕ ಪಟ್ಟಿಯಲ್ಲಿ ಮೇಲೇರಿದ ಟೀಮ್ ಇಂಡಿಯಾ
ಬಾಝ್ಬಾಲ್ ಯುಗದಲ್ಲಿ ಇಂಗ್ಲೆಂಡ್ ಅಂಕಿ ಅಂಶಗಳು:
ಬ್ರೆಂಡನ್ ಮೆಕಲಂ ಕೋಚಿಂಗ್ನಲ್ಲಿ, ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು ಈವರೆಗೆ 36 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಆಂಗ್ಲರು 21 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, 13 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಇನ್ನು 2 ಮ್ಯಾಚ್ಗಳು ಡ್ರಾನಲ್ಲಿ ಅಂತ್ಯವಾಗಿದೆ. ಹೀಗೆ ಬಾಝ್ಬಾಲ್ ಯುಗದಲ್ಲಿ ಡ್ರಾ ಸಾಧಿಸಿದ ಹೆಗ್ಗಳಿಕೆ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ಪಾಲಾಗಿದೆ.
Published On - 11:05 am, Mon, 28 July 25
