- Kannada News Photo gallery Cricket photos 'Jaisball' Rising: Yashasvi Jaiswal hits counter-attack vs Bazball
Yashasvi Jaiswal: ಬಾಝ್ಬಾಲ್ ಬೆಂಡೆತ್ತಿದ ಜೈಸ್ಬಾಲ್
Yashasvi Jaiswal Records: ಈ ಸರಣಿಯಲ್ಲಿ 712 ರನ್ ಕಲೆಹಾಕುವ ಮೂಲಕ ಅತೀ ಕಡಿಮೆ ಟೆಸ್ಟ್ ಪಂದ್ಯಗಳ ಮೂಲಕ 1000 ರನ್ ಪೂರೈಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಯಶಸ್ವಿ ಜೈಸ್ವಾಲ್ (Yashasvi Jaiswal) ಕೇವಲ 9 ಟೆಸ್ಟ್ ಪಂದ್ಯಗಳ ಮೂಲಕ ಈ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ಇನ್ನೂ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
Updated on: Mar 10, 2024 | 10:31 AM

ಬಾಝ್ಬಾಲ್ ರಣತಂತ್ರದೊಂದಿಗೆ ಭಾರತಕ್ಕೆ ಬಂದ ಇಂಗ್ಲೆಂಡ್ ತಂಡವು 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮಕಾಡೆ ಮಲಗಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಆಂಗ್ಲರು ಗೆದ್ದಿದ್ದು ಬಿಟ್ಟರೆ, ಇಡೀ ಟೂರ್ನಿಯಲ್ಲಿ ಟೀಮ್ ಇಂಡಿಯಾ (Team India) ಪಾರುಪತ್ಯ ಮೆರೆದಿದೆ. ಅದರಲ್ಲೂ ಇಂಗ್ಲೆಂಡ್ ತಂಡದ ಬಾಝ್ಬಾಲ್ಗೆ ಕೌಂಟರ್ ಅಟ್ಯಾಕ್ ನೀಡಿದ್ದು ಯಶಸ್ವಿ ಜೈಸ್ವಾಲ್ (Yashasvi Jaiswal) ಎಂದರೆ ತಪ್ಪಾಗಲಾರದು. ಇದಕ್ಕೆ ಸಾಕ್ಷಿಯೇ ಜೈಸ್ವಾಲ್ ಅವರ ಈ ಅಂಕಿ ಅಂಶಗಳು...

ಈ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ್ದು 22 ವರ್ಷದ ಯಶಸ್ವಿ ಜೈಸ್ವಾಲ್. 5 ಪಂದ್ಯಗಳಿಂದ ಬರೋಬ್ಬರಿ 712 ರನ್ ಕಲೆಹಾಕುವ ಮೂಲಕ ಯುವ ಎಡಗೈ ದಾಂಡಿಗ ಇತಿಹಾಸ ನಿರ್ಮಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಜೈಸ್ವಾಲ್ ಅವರನ್ನು ಹೊರತುಪಡಿಸಿದರೆ ಯಾವುದೇ ಬ್ಯಾಟರ್ 500 ರನ್ಗಳನ್ನು ಕಲೆಹಾಕಿಲ್ಲ ಎಂಬುದು.

ಹಾಗೆಯೇ ಈ ಸರಣಿಯಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ಗಳಿಸಿದ್ದು ಕೂಡ ಯಶಸ್ವಿ ಜೈಸ್ವಾಲ್. ರಾಜ್ಕೋಟ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ ಅಜೇಯ 214 ರನ್ ಬಾರಿಸಿ ಮಿಂಚಿದ್ದರು.

ಇದಲ್ಲದೆ, ಈ ಸರಣಿಯಲ್ಲಿ ಅತೀ ಹೆಚ್ಚು ಬೌಂಡರಿಗಳನ್ನು ಸಿಡಿಸಿದ್ದು ಕೂಡ 22ರ ಹರೆಯದ ಯಶಸ್ವಿ ಜೈಸ್ವಾಲ್. 5 ಪಂದ್ಯಗಳಲ್ಲಿ ಜೈಸ್ವಾಲ್ ಬ್ಯಾಟ್ನಿಂದ ಮೂಡಿಬಂದಿರುವುದು ಬರೋಬ್ಬರಿ 26 ಸಿಕ್ಸ್ ಹಾಗೂ 68 ಫೋರ್ಗಳು.

ಈ ಸರಣಿಯಲ್ಲಿ 89 ಸರಾಸರಿಯಲ್ಲಿ ರನ್ ಕಲೆಹಾಕಿರುವ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ 700+ ರನ್ ಕಲೆಹಾಕಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಹಾಗೆಯೇ ತಂಡವೊಂದರ ವಿರುದ್ಧ ಟೆಸ್ಟ್ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡರು.

ಹೀಗೆ ಪ್ರತಿ ಹಂತದಲ್ಲೂ ಇಂಗ್ಲೆಂಡ್ ಬೌಲರ್ಗಳನ್ನು ಬೆಂಡೆತ್ತುವ ಮೂಲಕ ಯಶಸ್ವಿ ಜೈಸ್ವಾಲ್ ಬಾಝ್ಬಾಲ್ ಕಲಿಗಳಿಗೆ ಜೈಸ್ಬಾಲ್ ಆಟ ಹೇಗಿರುತ್ತೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಮೂಲಕ 22ರ ಹರೆಯದಲ್ಲೇ ಅತಿರಥ ಮಹಾರಥರನ್ನು ಹಿಂದಿಕ್ಕಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.



















