
India vs England: ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡ ಪ್ಲೇಯಿಂಗ್ ಇಲೆವೆನ್ ಘೋಷಿಸಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಾಳೆಯಿಂದ (ಜ.25) ಶುರುವಾಗಲಿರುವ ಈ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ಇಂಗ್ಲೆಂಡ್ ಆಡುವ ಬಳಗವನ್ನು (England Playing XI) ಹೆಸರಿಸಿರುವುದು ವಿಶೇಷ.
ಬೆನ್ ಸ್ಟೋಕ್ಸ್ ಸಾರಥ್ಯದಲ್ಲಿ ಕಣಕ್ಕಿಳಿಯಲಿರುವ ಈ ತಂಡದಲ್ಲಿ ಮೂವರು ಸ್ಪಿನ್ನರ್ಗಳಿಗೆ ಸ್ಥಾನ ಕಲ್ಪಿಸಲಾಗಿದೆ. ಅಲ್ಲದೆ ಏಕೈಕ ವೇಗದ ಬೌಲರ್ನೊಂದಿಗೆ ಆಂಗ್ಲ ಪಡೆ ಭಾರತದ ವಿರುದ್ಧ ರಣತಂತ್ರ ರೂಪಿಸಿದೆ.
ಹೈದರಾಬಾದ್ ಪಿಚ್ ಸ್ಪಿನ್ ಬೌಲರ್ಗಳಿಗೆ ಸಹಕಾರಿಯಾಗುವುದರಿಂದ ಇಂಗ್ಲೆಂಡ್ ತಂಡವು ಆಡುವ ಬಳಗದಲ್ಲಿ ಮೂವರು ಸ್ಪಿನ್ನರ್ಗಳಿಗೆ ಮಣೆಹಾಕಿದೆ. ಅದರಂತೆ ಸ್ಪಿನ್ನರ್ಗಳಾಗಿ ಜ್ಯಾಕ್ ಲೀಚ್, ರೆಹಾನ್ ಅಹ್ಮದ್ ಹಾಗೂ ಟಾಮ್ ಹಾರ್ಟ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಟಾಮ್ ಹಾರ್ಟ್ಲಿಗೆ ಇದು ಚೊಚ್ಚಲ ಪಂದ್ಯ ಎಂಬುದು ವಿಶೇಷ.
ವೈಯುಕ್ತಿಕ ಕಾರಣಗಳಿಂದಾಗಿ ಈ ಸರಣಿಯಿಂದ ಹೊರಗುಳಿದಿರುವ ಸ್ಪೋಟಕ ದಾಂಡಿಗ ಹ್ಯಾರಿ ಬ್ರೂಕ್ ಬದಲಿಗೆ ತಂಡದಲ್ಲಿ ಬೆನ್ ಫೋಕ್ಸ್ ಸ್ಥಾನ ಪಡೆದಿದ್ದಾರೆ. ಇಲ್ಲಿ ಫೋಕ್ಸ್ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಾಣಿಸಿಕೊಂಡರೆ, ಮತ್ತೋರ್ವ ವಿಕೆಟ್ ಕೀಪರ್ ಜಾನಿ ಬೈರ್‌ಸ್ಟೋವ್ ಕೇವಲ ಬ್ಯಾಟರ್ ರೂಪದಲ್ಲಿ ಕಣಕ್ಕಿಳಿಯಲಿದ್ದಾರೆ.
ಇಂಗ್ಲೆಂಡ್ ತಂಡವು ನಾಲ್ವರು ಬೌಲರ್ಗಳೊಂದಿಗೆ ಕಣಕ್ಕಿಳಿಯುವ ಮೂಲಕ ಬಲಿಷ್ಠ ಬ್ಯಾಟಿಂಗ್ ಲೈನಪ್ ಅನ್ನು ರೂಪಿಸಿದೆ. ಅದರಂತೆ ಝಾಕ್ ಕ್ರಾಲಿ ಹಾಗೂ ಬೆನ್ ಡಕೆಟ್ ಇನಿಂಗ್ಸ್ ಆರಂಭಿಸಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಒಲಿ ಪೋಪ್ ಕಣಕ್ಕಿಳಿಯಲಿದ್ದು, ನಾಲ್ಕನೇ ಕ್ರಮಾಂಕದಲ್ಲಿ ಜೋ ರೂಟ್ ಬ್ಯಾಟ್ ಬೀಸಲಿದ್ದಾರೆ.
ಐದನೇ ಕ್ರಮಾಂಕದಲ್ಲಿ ಹೊಡಿಬಡಿ ದಾಂಡಿಗ ಜಾನಿ ಬೈರ್‌ಸ್ಟೋವ್ ಕಣಕ್ಕಿಳಿಯಲಿದ್ದು, ಆರನೇ ಸ್ಥಾನದಲ್ಲಿ ಬೆನ್ ಸ್ಟೋಕ್ಸ್ ಆಡಲಿದ್ದಾರೆ. ಹಾಗೆಯೇ ವಿಕೆಟ್ ಕೀಪರ್ ಬ್ಯಾಟರ್ ಆಗಿ ಬೆನ್ ಫೋಕ್ಸ್ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬರಲಿದ್ದಾರೆ. ಅದರಂತೆ ಇಂಗ್ಲೆಂಡ್ ತಂಡದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…
ಇದನ್ನೂ ಓದಿ: Virat Kohli: ಅದ್ಭುತ ಫೀಲ್ಡಿಂಗ್ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದ ವಿರಾಟ್ ಕೊಹ್ಲಿ
ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಅ್ಯಂಡರ್ಸನ್, ಗಸ್ ಅಟ್ಕಿನ್ಸನ್ , ಜಾನಿ ಬೈರ್‌ಸ್ಟೋವ್, ಶೋಯೆಬ್ ಬಶೀರ್, ಡ್ಯಾನ್ ಲಾರೆನ್ಸ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಒಲ್ಲಿ ಪೋಪ್, ಆಲಿ ರಾಬಿನ್ಸನ್ , ಜೋ ರೂಟ್ , ಮಾರ್ಕ್ ವುಡ್.
Published On - 2:29 pm, Wed, 24 January 24