IND vs ENG: ವಿರಾಟ್ ಕೊಹ್ಲಿ ಬದಲಿಗೆ RCB ಆಟಗಾರ ಆಯ್ಕೆ
India vs England Test: ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜನವರಿ 25 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಒಟ್ಟು ಐದು ಪಂದ್ಯಗಳನ್ನಾಡಲಾಗುತ್ತದೆ. ಈ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಭಾಗವಾಗಿರುವುದರಿಂದ ಉಭಯ ತಂಡಗಳ ಪಾಲಿಗೂ ಮಹತ್ವದ ಸರಣಿ ಎನಿಸಿಕೊಂಡಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಂದ ವಿರಾಟ್ ಕೊಹ್ಲಿ (Virat Kohli) ಹೊರಗುಳಿದಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ಕೊಹ್ಲಿ ಮೊದಲ ಎರಡು ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ. ಇದೀಗ ಅವರ ಬದಲಿ ಆಟಗಾರನಾಗಿ ರಜತ್ ಪಾಟಿದಾರ್ (Rajat Patidar) ಆಯ್ಕೆಯಾಗಿದ್ದಾರೆ. ಐಪಿಎಲ್ನಲ್ಲಿ RCB ತಂಡದಲ್ಲಿರುವ ರಜತ್ ಪ್ರಸ್ತುತ ಭಾರತ ಎ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಇದೀಗ ಕಿಂಗ್ ಕೊಹ್ಲಿ ಸ್ಥಾನದಲ್ಲಿ ಚೊಚ್ಚಲ ಬಾರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕಳೆದ ವಾರ ನಡೆದ ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ‘ಎ’ ಪಂದ್ಯದಲ್ಲಿ ರಜತ್ ಪಾಟಿದಾರ್ 151 ರನ್ ಬಾರಿಸಿ ಮಿಂಚಿದ್ದರು. ಈ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಫಲವಾಗಿ ಇದೀಗ ಟೀಮ್ ಇಂಡಿಯಾದಿಂದ ಬುಲಾವ್ ಸಿಕ್ಕಿದೆ. ಅದರಂತೆ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ರಜತ್ ಪಾಟಿದಾರ್ ಟೀಮ್ ಇಂಡಿಯಾದ ಭಾಗವಾಗಲಿದ್ದಾರೆ.
ರಜತ್ ಪಾಟಿದಾರ್ ಅಂಕಿ ಅಂಶಗಳು:
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ರಜತ್ ಪಾಟಿದಾರ್ ಒಟ್ಟು 93 ಇನಿಂಗ್ಸ್ಗಳನ್ನು ಆಡಿದ್ದಾರೆ. ಈ ವೇಳೆ 12 ಶತಕ ಹಾಗೂ 22 ಅರ್ಧಶತಕಗಳೊಂದಿಗೆ 4000 ರನ್ ಕಲೆಹಾಕಿದ್ದಾರೆ. ಅಂದರೆ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಪಾಟಿದಾರ್ 45.97 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಇದೇ ಕಾರಣದಿಂದಾಗಿ ಇದೀಗ ಭಾರತ ತಂಡದಲ್ಲೂ ಅವಕಾಶ ಸಿಕ್ಕಿದೆ.
ಟೆಸ್ಟ್ ಸರಣಿಗೆ ಉಭಯ ತಂಡಗಳ ಹೀಗಿವೆ:
ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಅ್ಯಂರ್ಸನ್, ಗಸ್ ಅಟ್ಕಿನ್ಸನ್ , ಜಾನಿ ಬೈರ್‌ಸ್ಟೋವ್, ಶೋಯೆಬ್ ಬಶೀರ್, ಡ್ಯಾನ್ ಲಾರೆನ್ಸ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಒಲ್ಲಿ ಪೋಪ್, ಆಲಿ ರಾಬಿನ್ಸನ್ , ಜೋ ರೂಟ್ , ಮಾರ್ಕ್ ವುಡ್.
ಭಾರತ ಟೆಸ್ಟ್ ತಂಡ (ಮೊದಲೆರಡು ಪಂದ್ಯಗಳಿಗೆ): ರೋಹಿತ್ ಶರ್ಮಾ (ನಾಯಕ ), ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೇಟ್ ಕೀಪರ್), ಕೆಎಸ್ ಭರತ್ (ವಿಕೇಟ್ ಕೀಪರ್), ಧ್ರುವ್ ಜುರೇಲ್ (ವಿಕೇಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್.
ಭಾರತ-ಇಂಗ್ಲೆಂಡ್ ಸರಣಿ ಯಾವಾಗ ಶುರು?
ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಯು ಜನವರಿ 25 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು 2ನೇ ಪಂದ್ಯಕ್ಕೆ ವಿಶಾಖಪಟ್ಟಣಂನಲ್ಲಿರುವ ವೈಎಸ್ಆರ್ ಸ್ಟೇಡಿಯಂ ಆತಿಥ್ಯವಹಿಸಿದರೆ, 3ನೇ ಪಂದ್ಯವು
ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ನಾಲ್ಕನೇ ಟೆಸ್ಟ್ ಪಂದವು ರಾಂಚಿಯ ಜೆಎಸ್ಸಿಎ ಸ್ಟೇಡಿಯಂನಲ್ಲಿ ನಡೆಯಲಿದ್ದು, ಕೊನೆಯ ಟೆಸ್ಟ್ ಪಂದ್ಯಕ್ಕೆ ಧರ್ಮಶಾಲಾದ ಹೆಚ್ಪಿಸಿಎ ಸ್ಟೇಡಿಯಂ ಆತಿಥ್ಯವಹಿಸಲಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನ್ ವಿರುದ್ಧ ಗೆದ್ದು ಪಾಕಿಸ್ತಾನ್ ತಂಡದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:
- ಜನವರಿ 25 ರಿಂದ 29- ಮೊದಲ ಟೆಸ್ಟ್ ಪಂದ್ಯ (ಹೈದರಾಬಾದ್)
- ಫೆಬ್ರವರಿ 2 ರಿಂದ 6- ಎರಡನೇ ಟೆಸ್ಟ್ ಪಂದ್ಯ (ವಿಶಾಖಪಟ್ಟಣಂ)
- ಫೆಬ್ರವರಿ 15 ರಿಂದ 19- ಮೂರನೇ ಟೆಸ್ಟ್ ಪಂದ್ಯ (ರಾಜ್ಕೋಟ್)
- ಫೆಬ್ರವರಿ 23 ರಿಂದ 27- ನಾಲ್ಕನೇ ಟೆಸ್ಟ್ ಪಂದ್ಯ (ರಾಂಚಿ)
- ಮಾರ್ಚ್ 7 ರಿಂದ 11- ಐದನೇ ಟೆಸ್ಟ್ ಪಂದ್ಯ (ಧರ್ಮಶಾಲಾ)