ODI World Cup 2023: ಅದೇ 9 ಆಟಗಾರರು…ಈ ಬಾರಿ ಇಂಗ್ಲೆಂಡ್ ಮತ್ತಷ್ಟು ಬಲಿಷ್ಠ

| Updated By: ಝಾಹಿರ್ ಯೂಸುಫ್

Updated on: Aug 17, 2023 | 6:55 PM

ODI World Cup 2023: ಈ ಬಾರಿಯ ಏಕದಿನ ವಿಶ್ವಕಪ್​ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಕಳೆದ ಬಾರಿಯ ರನ್ನರ್ ಅಪ್ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.

ODI World Cup 2023: ಅದೇ 9 ಆಟಗಾರರು...ಈ ಬಾರಿ ಇಂಗ್ಲೆಂಡ್ ಮತ್ತಷ್ಟು ಬಲಿಷ್ಠ
England Team
Follow us on

ಏಕದಿನ ವಿಶ್ವಕಪ್​ಗಾಗಿ ಇಂಗ್ಲೆಂಡ್ (England) ಸಂಭವನೀಯ ತಂಡವನ್ನು ಪ್ರಕಟಿಸಿದೆ. 15 ಸದಸ್ಯರ ಈ ತಂಡವು ನ್ಯೂಝಿಲೆಂಡ್ ವಿರುದ್ದದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದೆ. ವಿಶೇಷ ಎಂದರೆ ಈ 15 ಸದಸ್ಯರಲ್ಲಿ 9 ಆಟಗಾರರು ಕಳೆದ ಬಾರಿಯ ಏಕದಿನ ವಿಶ್ವಕಪ್​ ತಂಡದಲ್ಲಿ ಕಾಣಿಸಿಕೊಂಡಿದ್ದರು.

2019 ರಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಇಂಗ್ಲೆಂಡ್​ನ ಪ್ಲೇಯಿಂಗ್ ಇಲೆವೆನ್​ನ 9 ಆಟಗಾರರು ಈ ಬಾರಿಯ ವಿಶ್ವಕಪ್​ನಲ್ಲೂ ಕಣಕ್ಕಿಳಿಯುವುದು ಖಚಿತ.

ಈ ಪ್ಲೇಯಿಂಗ್ ಇಲೆವೆನ್​ನಿಂದ ಹೊರಬಿದ್ದಿರುವುದು ಕೇವಲ ಇಬ್ಬರು ಆಟಗಾರರು ಮಾತ್ರ. ಇವರಲ್ಲಿ 2019ರ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮೋರ್ಗನ್ ನಿವೃತ್ತಿ ಘೋಷಿಸಿದ್ದಾರೆ. ಇನ್ನು ವೇಗಿ ಜೋಫ್ರಾ ಆರ್ಚರ್ ಗಾಯದ ಕಾರಣ ಹೊರಗುಳಿದಿದ್ದಾರೆ.

ಒಂದು ವೇಳೆ ವಿಶ್ವಕಪ್ ಆರಂಭಕ್ಕೂ ಮುನ್ನ ಜೋಫ್ರಾ ಆರ್ಚರ್ ಸಂಪೂರ್ಣ ಫಿಟ್​ನೆಸ್ ಸಾಧಿಸಿದರೆ ಇಂಗ್ಲೆಂಡ್ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

ಮತ್ತಿಬ್ಬರು ಆಲ್​ರೌಂಡರ್​ಗಳ ಎಂಟ್ರಿ:

2019 ರ ವಿಶ್ವಕಪ್​ನಲ್ಲಿ ಕಾಣಿಸಿಕೊಂಡಿದ್ದ 9 ಆಟಗಾರರ ಜೊತೆ ಈ ಬಾರಿ ಮತ್ತಿಬ್ಬರು ಸ್ಟಾರ್ ಆಲ್​ರೌಂಡರ್​ಗಳು ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಲ್ಲಿ ಟಾಮ್ ಕರನ್ ಬದಲು ಈ ಬಾರಿ ಸ್ಯಾಮ್ ಕರನ್ ಸ್ಥಾನ ಪಡೆದರೆ, ಲಿಯಾಮ್ ಪ್ಲಂಕೆಟ್ ಬದಲಿಗೆ ಲಿಯಾಮ್ ಲಿವಿಂಗ್​ಸ್ಟೋನ್ ಆಯ್ಕೆಯಾಗಿದ್ದಾರೆ.

ಹಾಗೆಯೇ ಜೋಫ್ರಾ ಆರ್ಚರ್ ತಂಡದಿಂದ ಹೊರಗುಳಿದಿದ್ದರೆ ಈ ಬಾರಿ ಟೀಮ್​​ಗೆ ಎಡಗೈ ವೇಗಿ ರೀಸ್ ಟೋಪ್ಲಿಯ ಆಗಮನವಾಗಿದೆ. ಅಂದರೆ ಕಳೆದ ಬಾರಿಗಿಂತ ಈ ಬಾರಿ ಇಂಗ್ಲೆಂಡ್ ತಂಡ ಮತ್ತಷ್ಟು ಬಲಿಷ್ಠವಾಗಿದೆ ಎಂದರೆ ತಪ್ಪಾಗಲಾರದು.

ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿ ವಿಶ್ವಕಪ್ ಗೆಲ್ಲುವ ಫೇವರೇಟ್ ತಂಡಗಳ ಪಟ್ಟಿಯಲ್ಲಿ ಇಂಗ್ಲೆಂಡ್ ಕೂಡ ಕಾಣಿಸಿಕೊಂಡಿದೆ. ಹೀಗಾಗಿ ಭಾರತೀಯ ಪಿಚ್​ನಲ್ಲಿ ವಿಶ್ವಕಪ್​ ಕಿರೀಟ ಉಳಿಸಿಕೊಳ್ಳಲು ಇಂಗ್ಲೆಂಡ್​ ತಂಡದಿಂದ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

2019 ರ ಇಂಗ್ಲೆಂಡ್ ತಂಡ: ಇಯಾನ್ ಮೋರ್ಗನ್ (ನಾಯಕ), ಮೊಯೀನ್ ಅಲಿ, ಜೋಫ್ರಾ ಆರ್ಚರ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಟಾಮ್ ಕರನ್, ಲಿಯಾಮ್ ಡಾಸನ್, ಲಿಯಾಮ್ ಪ್ಲಂಕೆಟ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ಜೇಮ್ಸ್ ವಿನ್ಸ್, ಕ್ರಿಸ್ ವೋಕ್ಸ್ , ಮಾರ್ಕ್ ವುಡ್.

2023ರ ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ಮೊಯೀನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್ ಮತ್ತು ಕ್ರಿಸ್ ವೋಕ್ಸ್.

ಏಕದಿನ ವಿಶ್ವಕಪ್​ ವೇಳಾಪಟ್ಟಿ:

ಈ ಬಾರಿಯ ಏಕದಿನ ವಿಶ್ವಕಪ್​ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಕಳೆದ ಬಾರಿಯ ರನ್ನರ್ ಅಪ್ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.

ಇದನ್ನೂ ಓದಿ: ಭಾರತ ವಿಶ್ವಕಪ್ ತಂಡದಿಂದ 7 ಆಟಗಾರರು ಔಟ್..!

ಇನ್ನು ಟೀಮ್ ಇಂಡಿಯಾ ಮೊದಲ ಪಂದ್ಯವನ್ನು ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಹಾಗೆಯೇ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯವು ಅಕ್ಟೋಬರ್ 14 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ.

 

 

Published On - 6:54 pm, Thu, 17 August 23