ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವಣ ಟಿ20 ಸರಣಿಯ 2ನೇ ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಮೊದಲ ಪಂದ್ಯದಲ್ಲಿ ಗೆದ್ದಿದ್ದ ವೆಸ್ಟ್ ಇಂಡೀಸ್ 2ನೇ ಪಂದ್ಯದಲ್ಲಿ ವಿರೋಚಿತ ಸೋಲೊಪ್ಪಿಕೊಂಡಿತು. ಇದಕ್ಕೂ ಮುನ್ನ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಕೀರನ್ ಪೊಲಾರ್ಡ್ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ಗೆ ಆರಂಭಿಕರಾದ ಜೇಸನ್ ರಾಯ್ ಹಾಗೂ ಟಾಮ್ ಬಾಂಟನ್ ಸ್ಪೋಟಕ ಆರಂಭ ಒದಗಿಸಿದ್ದರು. ಅದರಂತೆ 45 ರನ್ ಬಾರಿಸಿ ಜೇಸನ್ ರಾಯ್ ವಿಕೆಟ್ ಒಪ್ಪಿಸಿದರು. ಇನ್ನು ಅಂತಿಮ ಹಂತದಲ್ಲಿ ಕ್ರಿಸ್ ಜೋರ್ಡನ್ 15 ಎಸೆತಗಳಲ್ಲಿ 27 ರನ್ ಬಾರಿಸುವ ಮೂಲಕ ನಿಗದಿತ 20 ಓವರ್‌ಗಳಲ್ಲಿ ಇಂಗ್ಲೆಂಡ್ ಮೊತ್ತವನ್ನು 8 ವಿಕೆಟ್ ನಷ್ಟಕ್ಕೆ 171ಕ್ಕೆ ತಂದು ನಿಲ್ಲಿಸಿದರು.
172 ರನ್‌ಗಳ ಕಠಿಣ ಗುರಿ ಪಡೆದ ವೆಸ್ಟ್ ಇಂಡೀಸ್ ಆರಂಭ ಉತ್ತಮವಾಗಿರಲಿಲ್ಲ. 6 ರನ್ಗಳಿಸುವಷ್ಟರಲ್ಲಿ ಆರಂಭಿಕರಾದ ಶಾಯ್ ಹೋಪ್ ಹಾಗೂ ಬ್ರೆಂಡನ್ ಕಿಂಗ್ ವಿಕೆಟ್ ಒಪ್ಪಿಸಿದರು. ಅಷ್ಟೇ ಅಲ್ಲದೆ ತಂಡವು 55 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಪ್ರಮುಖ ವಿಎಕಟ್ ಕಳೆದುಕೊಂಡಿತ್ತು. ನಿಕೋಲಸ್ ಪೂರನ್ 24, ಡ್ಯಾರೆನ್ ಬ್ರಾವೋ 23 ಮತ್ತು ನಾಯಕ ಕೀರನ್ ಪೊಲಾರ್ಡ್ ಕೇವಲ ಒಂದು ರನ್ ಗಳಿಸಿ ಪೆವಿಲಿಯನ್ಗೆ ಮರಳಿದ್ದರು. ಈ ವೇಳೆ ಲೆಗ್ ಸ್ಪಿನ್ ಆದಿಲ್ ರಶೀದ್ 2 ವಿಕೆಟ್ ಪಡೆದರೆ ಮೊಯಿನ್ ಅಲಿ 3 ವಿಕೆಟ್ ಕಬಳಿಸಿದರು.
ಇನ್ನು ವೆಸ್ಟ್ ಇಂಡೀಸ್ 98 ರನ್ಗಳಿಸುಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿತು. ಆದರೆ ಈ ಹಂತದಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ಅಕಿಲ್ ಹುಸೇನ್ ಮತ್ತು ರೊಮಾರಿಯೊ ಶೆಫರ್ಡ್. ಅಂತಿಮ ಓವರ್‌ಗಳಲ್ಲಿ ಹೋರಾಟ ಮುಂದುವರೆಸಿದ ಅಕಿಲ್ ಹಾಗೂ ಶೆಫರ್ಡ್ ಇಂಗ್ಲೆಂಡ್ಗೆ ಸೋಲಿನ ಭಯ ಹುಟ್ಟಿಸಿದರು.
9ನೇ ವಿಕೆಟ್‌ಗೆ ಶೆಫರ್ಡ್-ಅಕಿಲ್ ಜೋಡಿ ಕೇವಲ 4.5 ಓವರ್‌ಗಳಲ್ಲಿ ಅಜೇಯ 72 ರನ್‌ಗಳ ಜೊತೆಯಾಟವಾಡಿದರು. ಅದರಂತೆ ಕೊನೆಯ ಓವರ್ನಲ್ಲಿ ವೆಸ್ಟ್ ಇಂಡೀಸ್ಗೆ ಗೆಲ್ಲಲು 30 ರನ್‌ಗಳ ಅವಶ್ಯಕತೆಯಿತ್ತು. ಸಾಕಿಬ್ ಮಹಮೂದ್ ಅವರ ಮೊದಲ ಎಸೆತ ವೈಡ್ ಆಗಿತ್ತು. ನಂತರದ ಎಸೆತದಲ್ಲಿ ಯಾವುದೇ ರನ್ ಇಲ್ಲ. ಎರಡನೇ ಮತ್ತು ಮೂರನೇ ಎಸೆತಗಳಲ್ಲಿ ಅಕಿಲ್ ಹುಸೇನ್ ಬೌಂಡರಿ ಬಾರಿಸಿದರು. ಮಹಮೂದ್ ಮತ್ತೊಮ್ಮೆ ವೈಡ್ ಬೌಲ್ ಎಸೆದರು. ಈ ಹಂತದಲ್ಲಿ 3 ಎಸೆತಗಳಲ್ಲಿ 20 ರನ್ಗಳು ಬೇಕಿತ್ತು. ಆದರೆ ಸೋಲೊಪ್ಪಿಕೊಳ್ಳಲು ಅಕಿಲ್ ಹುಸೇನ್ ತಯಾರಿರಲಿಲ್ಲ. ಕೊನೆಯ ಮೂರು ಎಸೆತದಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರೂ ಗೆಲುವು ದಕ್ಕಲಿಲ್ಲ. ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡವು 170 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ವಿಂಡೀಸ್ 1 ರನ್ಗಳಿಂದ ವಿರೋಚಿತ ಸೋಲೋಪ್ಪಿಕೊಂಡಿತು.
16 ಎಸೆತಗಳಲ್ಲಿ 44 ರನ್ ಗಳಿಸಿ ಅಕಿಲ್ ಹುಸೇನ್ ಅಜೇಯರಾಗಿ ಉಳಿದರು. ಈ ಭರ್ಜರಿ ಇನಿಂಗ್ಸ್ನಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದರು. ಮತ್ತೊಂದೆಡೆ ಶೆಫರ್ಡ್ 28 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 5 ಸಿಕ್ಸರ್‌ಗಳೊಂದಿಗೆ 44 ರನ್ ಸಿಡಿಸಿದರು. ಈ ಸೋಲಿನೊಂದಿಗೆ ಇದೀಗ ಐದು ಪಂದ್ಯಗಳ ಸರಣಿಯು 1-1 ಅಂತರದಿಂದ ಸಮಬಲಗೊಂಡಿದೆ.
ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
(England Survive Late Scare To Defeat West Indies By 1 Run In 2nd T20I)
Published On - 4:02 pm, Mon, 24 January 22