Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್

Quinton de Kock: ಅತೀ ಹೆಚ್ಚು ಶತಕ ಸಿಡಿಸಿದ ವಿಕೆಟ್ ಕೀಪರ್ ಬ್ಯಾಟರ್​ಗಳ ಪಟ್ಟಿಯಲ್ಲೂ ಡಿಕಾಕ್ ಆಸ್ಟ್ರೇಲಿಯಾದ ಆ್ಯಡಂ ಗಿಲ್​ಕ್ರಿಸ್ಟ್ ಅವರನ್ನು ಹಿಂದಿಕ್ಕಿದರು.

Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್
Quinton de Kock
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 23, 2022 | 5:47 PM

ಭಾನುವಾರ ನಡೆದ ಭಾರತ ವಿರುದ್ಧದ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್​ ಕ್ವಿಂಟನ್ ಡಿ ಕಾಕ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದ ಡಿಕಾಕ್ 124 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. 108 ಎಸೆತಗಳಲ್ಲಿ ಶತಕ ಪೂರೈಸಿದ ಡಿಕಾಕ್ ತಮ್ಮ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೆ, ಏಕದಿನ ಮಾದರಿಯಲ್ಲಿ ಭಾರತದ ವಿರುದ್ಧ 1000 ರನ್ ಪೂರೈಸಿದ್ದಾರೆ. ಅಂದಹಾಗೆ ಇದು ಭಾರತದ ವಿರುದ್ದ ಡಿಕಾಕ್ ಅವರ 6ನೇ ಶತಕ ಎಂಬುದು ವಿಶೇಷ.

ಭಾರತ-ದಕ್ಷಿಣ ಆಫ್ರಿಕಾ ಮುಖಾಮುಖಿಯಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ 5 ಶತಕಗಳನ್ನು ಬಾರಿಸಿ ಈ ದಾಖಲೆ ಬರೆದಿದ್ದರು. ಇದೀಗ 6 ಸೆಂಚುರಿ ಸಿಡಿಸುವ ಮೂಲಕ ಡಿಕಾಕ್ ಹೊಸ ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲದೆ ಈ ಒಂದು ಶತಕದೊಂದಿಗೆ ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಮತ್ತು ಆಸ್ಟ್ರೇಲಿಯಾದ ಮಾಜಿ ದಂತಕಥೆ ಆ್ಯಡಂ ಗಿಲ್‌ಕ್ರಿಸ್ಟ್ ಅವರ ದಾಖಲೆಯನ್ನು ಮುರಿದರು.

ಒಂದೇ ತಂಡದ ವಿರುದ್ದ ಅತೀ ಕಡಿಮೆ ಇನಿಂಗ್ಸ್​ನಲ್ಲಿ ಅತ್ಯಧಿಕ ಶತಕ ಸಿಡಿಸಿದ ವಿಶ್ವ ದಾಖಲೆ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿತ್ತು. ಸೆಹ್ವಾಗ್ ನ್ಯೂಜಿಲೆಂಡ್ ವಿರುದ್ದ 23 ಇನಿಂಗ್ಸ್​ಗಳಲ್ಲಿ 6 ಶತಕ ಬಾರಿಸಿದ್ದರು. ಆದರೀಗ ಡಿಕಾಕ್ ಭಾರತದ ವಿರುದ್ದ ಕೇವಲ 16 ಇನಿಂಗ್ಸ್​ಗಳಲ್ಲಿ 6 ಶತಕ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಹಾಗೆಯೇ ಅತೀ ಹೆಚ್ಚು ಶತಕ ಸಿಡಿಸಿದ ವಿಕೆಟ್ ಕೀಪರ್ ಬ್ಯಾಟರ್​ಗಳ ಪಟ್ಟಿಯಲ್ಲೂ ಡಿಕಾಕ್ ಆಸ್ಟ್ರೇಲಿಯಾದ ಆ್ಯಡಂ ಗಿಲ್​ಕ್ರಿಸ್ಟ್ ಅವರನ್ನು ಹಿಂದಿಕ್ಕಿದರು. ಗಿಲ್​ಕ್ರಿಸ್ಟ್​ 16 ಶತಕಗಳನ್ನು ಬಾರಿಸುವ ಮೂಲಕ ದಾಖಲೆ ಬರೆದಿದ್ದರು. ಇದೀಗ ಡಿಕಾಕ್ ಅವರು ಏಕದಿನ ಕ್ರಿಕೆಟ್​ನಲ್ಲಿ 17 ಶತಕ ಸಿಡಿಸಿದ್ದಾರೆ. ಸದ್ಯ ಈ ಪಟ್ಟಿಯಲ್ಲಿ ಶ್ರೀಲಂಕಾದ ಕುಮಾರ ಸಂಗಾಕ್ಕರ ಅಗ್ರಸ್ಥಾನದಲ್ಲಿದ್ದು, ಸಂಗಾಕ್ಕರ ಒಟ್ಟು 23 ಶತಕ ಬಾರಿಸಿದ್ದಾರೆ. ಸದ್ಯ 17 ಶತಕಗಳೊಂದಿಗೆ ಡಿಕಾಕ್ 2ನೇ ಸ್ಥಾನಕ್ಕೇರಿದ್ದಾರೆ.

ಇನ್ನು 29 ವರ್ಷದ ಡಿ ಕಾಕ್ ಭಾರತದ ವಿರುದ್ಧ ಕೇವಲ 16ನೇ ಏಕದಿನ ಪಂದ್ಯದಲ್ಲಿ 1000 ರನ್ ಪೂರೈಸಿದ ಸಾಧನೆ ಮಾಡಿದರು. ಈ ಮೂಲಕ ಭಾರತದ ವಿರುದ್ದ 16 ಇನಿಂಗ್ಸ್​ನಲ್ಲಿ ಸಾವಿರ ರನ್ ಪೂರೈಸಿದ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ದಾಖಲೆಯನ್ನು ಸರಿಗಟ್ಟಿದರು. ಇನ್ನು ಟೀಮ್ ಇಂಡಿಯಾ ವಿರುದ್ದ ವೇಗವಾಗಿ ಏಕದಿನ ಕ್ರಿಕೆಟ್​ ಸಾವಿರ ರನ್ ಪೂರೈಸಿದ ದಾಖಲೆ ಸೌತ್ ಆಫ್ರಿಕಾದ ಹಾಶಿಮ್ ಆಮ್ಲಾ ಹೆಸರಿನಲ್ಲಿದೆ. ಹಾಶಿಮ್ ಆಮ್ಲಾ 14 ಇನಿಂಗ್ಸ್​ಗಳಲ್ಲಿ ಈ ದಾಖಲೆ ಬರೆದಿದ್ದರು.

ಒಟ್ಟಿನಲ್ಲಿ ಟೀಮ್ ಇಂಡಿಯಾ ವಿರುದ್ದ 130 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 12 ಬೌಂಡರಿಯೊಂದಿಗೆ ಕ್ವಿಂಟನ್ ಡಿಕಾಕ್ 124 ರನ್ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!

(Ind vs SA: Quinton de Kock breaks long-standing Virender Sehwag record)