ENG vs SA: ಆಫ್ರಿಕಾ ವಿರುದ್ಧ 342 ರನ್​ಗಳಿಂದ ಗೆದ್ದು ಭಾರತದ ವಿಶ್ವ ದಾಖಲೆ ಮುರಿದ ಇಂಗ್ಲೆಂಡ್‌

England Thrashes South Africa by 342 Runs: ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭರ್ಜರಿ 342 ರನ್‌ಗಳ ಗೆಲುವು ಸಾಧಿಸಿತು. ಜಾಕೋಬ್ ಬೆಥೆಲ್ ಮತ್ತು ಜೋ ರೂಟ್ ಅವರ ಶತಕಗಳ ನೆರವಿನಿಂದ ಇಂಗ್ಲೆಂಡ್ 414 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ದಕ್ಷಿಣ ಆಫ್ರಿಕಾ ಕೇವಲ 72 ರನ್‌ಗಳಿಗೆ ಆಲೌಟ್ ಆಯಿತು.

ENG vs SA: ಆಫ್ರಿಕಾ ವಿರುದ್ಧ 342 ರನ್​ಗಳಿಂದ ಗೆದ್ದು ಭಾರತದ ವಿಶ್ವ ದಾಖಲೆ ಮುರಿದ ಇಂಗ್ಲೆಂಡ್‌
Sa Vs Eng

Updated on: Sep 07, 2025 | 10:49 PM

ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ (England vs South Africa) ನಡುವೆ ನಡೆದ ಮೂರು ಪಂದ್ಯಗಳ ಏಕದಿನ ಸರಣಿ ಮೂರನೇ ಪಂದ್ಯವನ್ನು ಆತಿಥೇಯ ಇಂಗ್ಲೆಂಡ್‌ ತಂಡ ಬರೋಬ್ಬರಿ 342 ರನ್​ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ ವೈಟ್ ವಾಶ್ ಮುಖಭಂಗದಿಂದ ಪಾರಾಗಿದೆ. ಇತ್ತ ಈ ಪಂದ್ಯದಲ್ಲಿ ಹೀನಾಯವಾಗಿ ಸೋತರೂ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿದ್ದರ ಪರಿಣಾಮವಾಗಿ ದಕ್ಷಿಣ ಆಫ್ರಿಕಾ ತಂಡ ಏಕದಿನ ಸರಣಿಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಸೌತಾಂಪ್ಟನ್‌ನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್‌ ಜಾಕೋಬ್ ಬೆಥೆಲ್ (Jacob Bethel) ಮತ್ತು ಜೋ ರೂಟ್ ಅವರ ಶತಕಗಳ ಆಧಾರದ ಮೇಲೆ 414 ರನ್‌ಗಳ ಬೃಹತ್ ಸ್ಕೋರ್ ದಾಖಲಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ದಕ್ಷಿಣ ಆಫ್ರಿಕಾ ತಂಡವು ಕೇವಲ 72 ರನ್​ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿತು.

414 ರನ್ ಕಲೆಹಾಕಿದ ಇಂಗ್ಲೆಂಡ್

ವಾಸ್ತವವಾಗಿ ದಕ್ಷಿಣ ಆಫ್ರಿಕಾ ತಂಡವು ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ವಿಕೆಟ್‌ಗಳಿಂದ ಮತ್ತು ಎರಡನೇ ಪಂದ್ಯದ 5 ವಿಕೆಟ್‌ಗಳಿಂದ ಸೋಲಿಸಿ ಸರಣಿಯನ್ನು ಗೆದ್ದುಕೊಂಡಿತು. ಹೀಗಾಗಿ ಮೂರನೇ ಪಂದ್ಯದಲ್ಲಿ ತಂಡವನ್ನು ಕ್ಲೀನ್ ಸ್ವೀಪ್ ಮಾಡುವ ಅವಕಾಶವಿತ್ತು ಆದರೆ ಅದು ಆಗಲಿಲ್ಲ. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಆರಂಭಿಕರಾದ ಜೇಮೀ ಸ್ಮಿತ್ ಮತ್ತು ಬೆನ್ ಡಕೆಟ್ ಜೋಡಿ ಕೇವಲ 16 ಓವರ್‌ಗಳಲ್ಲಿ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ನಂತರ ರೂಟ್ ಮತ್ತು ಬೆಥೆಲ್ 182 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದೇ ವೇಳೆ ಬೆಥೆಲ್ ತಮ್ಮ ಮೊದಲ ಅಂತರರಾಷ್ಟ್ರೀಯ ಶತಕವನ್ನು ಗಳಿಸಿದರೆ, ರೂಟ್ ತಮ್ಮ 19 ನೇ ಏಕದಿನ ಶತಕವನ್ನು ಪೂರ್ಣಗೊಳಿದರು. ಕೊನೆಯಲ್ಲಿ, ಜೋಸ್ ಬಟ್ಲರ್ ಕೇವಲ 32 ಎಸೆತಗಳಲ್ಲಿ 62 ರನ್ ಗಳಿಸಿ ತಂಡವನ್ನು 400 ರನ್‌ಗಳ ಗಡಿ ದಾಟಿಸಿದರು.

7 ರನ್​ಗಳಿಗೆ 4 ವಿಕೆಟ್ ಪತನ

ವಾಸ್ತವವಾಗಿ ಈ ಪಂದ್ಯಕ್ಕೆ ಕೆಲವೇ ದಿನಗಳ ಮೊದಲು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧ 431 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ ಕೇವಲ 155 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೆ ಈ ಬಾರಿ ಅವರು ಅರ್ಧ ರನ್‌ಗಳನ್ನು ಸಹ ಗಳಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಬಿರುಗಾಳಿಯ ವೇಗಿ ಆರ್ಚರ್. ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ, ಆರ್ಚರ್ ಆರಂಭಿಕ ಬ್ಯಾಟ್ಸ್‌ಮನ್ ಐಡೆನ್ ಮಾರ್ಕ್ರಾಮ್ ಅವರನ್ನು ಔಟ್ ಮಾಡಿದರು. ಇದಾದ ಸ್ವಲ್ಪ ಸಮಯದೊಳಗೆ ದಕ್ಷಿಣ ಆಫ್ರಿಕಾ ಕೇವಲ 7 ರನ್‌ಗಳಿಗೆ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಲ್ಲಿ, ಆರ್ಚರ್ 3 ಓವರ್‌ಗಳಲ್ಲಿ ಕೇವಲ 1 ರನ್ ನೀಡುವ ಮೂಲಕ 3 ವಿಕೆಟ್‌ಗಳನ್ನು ಪಡೆದರು.

72 ರನ್​ಗಳಿಗೆ ಇಡೀ ತಂಡ ಆಲೌಟ್

ನಂತರ 9 ನೇ ಓವರ್‌ನಲ್ಲಿ 5 ನೇ ವಿಕೆಟ್ ಕೂಡ 18 ರನ್‌ಗಳಿಗೆ ಪತನವಾಯಿತು. ಈ ರೀತಿಯಾಗಿ, ಆರ್ಚರ್ ತಮ್ಮ 5 ಓವರ್‌ಗಳಲ್ಲಿ ಕೇವಲ 5 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆಯುವ ಮೂಲಕ ದಕ್ಷಿಣ ಆಫ್ರಿಕಾದ ಸೋಲನ್ನು ದೃಢಪಡಿಸಿದರು. ಇದರ ನಂತರ, ಬ್ರಿಯಾಂಡನ್ ಕಾರ್ಸೆ ಮತ್ತು ಆದಿಲ್ ರಶೀದ್ ದಕ್ಷಿಣ ಆಫ್ರಿಕಾದ ಮುಂದಿನ 5 ವಿಕೆಟ್‌ಗಳನ್ನು ಪಡೆದರು. ಗಾಯದಿಂದಾಗಿ, ನಾಯಕ ಟೆಂಬಾ ಬವುಮಾ ಬ್ಯಾಟಿಂಗ್‌ಗೆ ಹೊರಬರಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಇಡೀ ದಕ್ಷಿಣ ಆಫ್ರಿಕಾ 20.5 ಓವರ್‌ಗಳಲ್ಲಿ ಕೇವಲ 72 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಆರ್ಚರ್ 9 ಓವರ್‌ಗಳಲ್ಲಿ 18 ರನ್‌ ನೀಡಿ 4 ವಿಕೆಟ್‌ಗಳನ್ನು ಪಡೆದರು.

ಭಾರತದ ದಾಖಲೆ ಮುರಿದ ಇಂಗ್ಲೆಂಡ್

ಈ ಮೂಲಕ ಇಂಗ್ಲೆಂಡ್ ತಂಡವು 342 ರನ್‌ಗಳ ಭಾರಿ ಅಂತರದಿಂದ ಪಂದ್ಯವನ್ನು ಗೆದ್ದು ಸರಣಿಯನ್ನು 1-2 ಅಂತರದಿಂದ ಕೊನೆಗೊಳಿಸಿತು. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಗೆಲುವು. 2023 ರಲ್ಲಿ ಶ್ರೀಲಂಕಾವನ್ನು 317 ರನ್‌ಗಳಿಂದ ಸೋಲಿಸುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದ ಟೀಂ ಇಂಡಿಯಾದ ದಾಖಲೆಯನ್ನು ಇದೀಗ ಹ್ಯಾರಿ ಬ್ರೂಕ್ ನೇತೃತ್ವದ ಇಂಗ್ಲೆಂಡ್‌ ತಂಡವು ಮುರಿದಿದೆ. ಅದೇ ಸಮಯದಲ್ಲಿ, ಮೊದಲ ಬಾರಿಗೆ ತಂಡವೊಂದು ದಕ್ಷಿಣ ಆಫ್ರಿಕಾವನ್ನು 300 ಕ್ಕೂ ಹೆಚ್ಚು ರನ್‌ಗಳ ಅಂತರದಿಂದ ಸೋಲಿಸಿದ ದಾಖಲೆ ಕೂಡ ಆಂಗ್ಲರ ಪಾಲಾಗಿದೆ. ಇದರೊಂದಿಗೆ, ಈಗ ಅತ್ಯಧಿಕ ಸ್ಕೋರ್ (498 ರನ್‌ಗಳು) ಮತ್ತು ಏಕದಿನ ಪಂದ್ಯಗಳಲ್ಲಿ ಅತಿದೊಡ್ಡ ಗೆಲುವಿನ ದಾಖಲೆಗಳು ಇಂಗ್ಲೆಂಡ್ ಹೆಸರಿನಲ್ಲಿ ದಾಖಲಾಗಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ