SA vs WI: ವಿಂಡೀಸ್ ಮಣಿಸಿ ಸೆಮಿಫೈನಲ್ಗೇರಿದ ಆಫ್ರಿಕಾ; ನಿಟ್ಟುಸಿರು ಬಿಟ್ಟ ಟೀಂ ಇಂಡಿಯಾ
T20 World Cup 2026 Super 8: 2026ರ ಟಿ20 ವಿಶ್ವಕಪ್ ಸೂಪರ್ 8 ಸುತ್ತಿನಲ್ಲಿ ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಯಾಗಿದ್ದವು. ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಳ್ಳಲು ಎರಡೂ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿತ್ತು. ವೆಸ್ಟ್ ಇಂಡೀಸ್ ನೀಡಿದ 176 ರನ್‌ಗಳ ಗುರಿಯನ್ನು ದಕ್ಷಿಣ ಆಫ್ರಿಕಾ ಕೇವಲ ಒಂದು ವಿಕೆಟ್ ನಷ್ಟಕ್ಕೆ 16.1 ಓವರ್‌ಗಳಲ್ಲಿ ಬೆನ್ನಟ್ಟಿ ಭರ್ಜರಿ ಗೆಲುವು ಸಾಧಿಸಿತು. ಈ ಜಯದೊಂದಿಗೆ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ಗೆ ಪ್ರವೇಶಿಸಿತು.

ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ 2026 ರ ಟಿ20 ವಿಶ್ವಕಪ್ನ ಸೂಪರ್ 8 (T20 World Cup 2026 Super 8) ಸುತ್ತಿನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ( South Africa vs West Indies) ತಂಡಗಳು ಮುಖಾಮುಖಿಯಾಗಿದ್ದವು. ಈ ಸುತ್ತಿನಲ್ಲಿ ಎರಡೂ ತಂಡಗಳಿಗೆ ಇದು ಎರಡನೇ ಪಂದ್ಯವಾಗಿತ್ತು. ಮೊದಲ ಪಂದ್ಯದಲ್ಲಿ ಎರಡು ತಂಡಗಳು ಗೆಲುವು ಸಾಧಿಸಿದ್ದರಿಂದ ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಸೆಮಿಫೈನಲ್ನಲ್ಲಿ ಸ್ಥಾನ ಖಚಿತವಾಗುತ್ತಿತ್ತು. ಹೀಗಾಗಿ ಉಭಯ ತಂಡಗಳ ನಡುವೆ ನಡೆದ ಈ ಪಂದ್ಯವನ್ನು ದಕ್ಷಿಣ ಆಫ್ರಿಕಾ ತಂಡ ಏಕಪಕ್ಷೀಯವಾಗಿ ಗೆದ್ದುಕೊಳ್ಳುವ ಮೂಲಕ ಸೆಮಿಫೈನಲ್ ಟಿಕೆಟ್ ಪಡೆದುಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ 176 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 16.1 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಜಯದ ನಗೆಬೀರಿತು.
ವಿಂಡೀಸ್ ಬ್ಯಾಟಿಂಗ್ ವೈಫಲ್ಯ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಮೊದಲೆರಡು ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿತು. ಆದರೆ ತಂಡದ ಮೊತ್ತ 29 ರನ್‌ಗಳಿದ್ದಾಗ ಶೈ ಹೋಪ್ 16 ರನ್‌ಗಳಿಗೆ ಔಟಾದರು. ಈ ವಿಕೆಟ್ ಪತನದ ನಂತರ ವಿಂಡೀಸ್ ಪೆವಿಲಿಯನ್ ಪರೇಡ್ ಶುರುವಾಯಿತು. ಶಿಮ್ರಾನ್ ಹೆಟ್ಮೈಯರ್ ಜೀವದಾನದ ಲಾಭ ಪಡೆಯಲು ಸಾಧ್ಯವಾಗದೆ ಕೇವಲ 2 ರನ್‌ಗಳಿಗೆ ಔಟಾದರು. ಬ್ರಾಂಡನ್ ಕಿಂಗ್ ಇನ್ನಿಂಗ್ಸ್ 21 ರನ್‌ಗಳಿಗೆ ಅಂತ್ಯವಾಯಿತು. ಆ ನಂತರ ಬಂದ ರೋಸ್ಟನ್ ಚೇಸ್ 2, ಶೆರ್ಫಾನ್ ರುದರ್ಫೋರ್ಡ್ 12, ರೋವ್‌ಮನ್ ಪೊವೆಲ್ 9 ಮತ್ತು ಮ್ಯಾಥ್ಯೂ ಫೋರ್ಡ್ 11 ರನ್ ಗಳಿಸಿ ಔಟಾದರು.
ಶೆಫರ್ಡ್- ಹೋಲ್ಡರ್ ಜೊತೆಯಾಟ
ಈ ಹಂತದಲ್ಲಿ ಜೊತೆಯಾದ ರೊಮಾರಿಯೊ ಶೆಫರ್ಡ್ ಮತ್ತು ಜೇಸನ್ ಹೋಲ್ಡರ್ ಜೋಡಿ ಎಂಟನೇ ವಿಕೆಟ್‌ಗೆ 57 ಎಸೆತಗಳಲ್ಲಿ 89 ರನ್ ಕಲೆಹಾಕಿದರು. ಜೇಸನ್ ಹೋಲ್ಡರ್ 31 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 49 ರನ್ ಗಳಿಸಿ ಔಟಾದರೆ, ರೊಮಾರಿಯೊ ಶೆಫರ್ಡ್ 37 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ಅಜೇಯ 52 ರನ್ ಗಳಿಸಿದರು. ಈ ಜೋಡಿಯ ಇನ್ನಿಂಗ್ಸ್‌ನಿಂದಾಗಿ, ವೆಸ್ಟ್ ಇಂಡೀಸ್ ಗೌರವಾನ್ವಿತ ಸ್ಕೋರ್ ಕಲೆಹಾಕಿತು.
ಆಫ್ರಿಕಾಗೆ ಸ್ಫೋಟಕ ಆರಂಭ
ಗೆಲುವಿಗೆ 177 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಸ್ಫೋಟಕ ಆರಂಭ ಕಂಡಿತು. ಪವರ್ ಪ್ಲೇನಲ್ಲ್ಲಿಯೇ ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಮತ್ತು ಐಡೆನ್ ಮಾರ್ಕ್ರಾಮ್ 69 ರನ್ ಕಲೆಹಾಕಿದರು. ಈ ಜೋಡಿ ತಮ್ಮ ಆಕ್ರಮಣಕಾರಿ ಆರಂಭವನ್ನು ಮುಂದುವರಿಸಿ 48 ಎಸೆತಗಳಲ್ಲಿ 95 ರನ್ ಪೇರಿಸಿತು. ಆದಾಗ್ಯೂ ಕ್ವಿಂಟನ್ ಡಿ ಕಾಕ್ 24 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 47 ರನ್ ಗಳಿಸಿ ಔಟಾಗುವುದರೊಂದಿಗೆ ಈ ಜೊತೆಯಾಟ ಮುರಿದುಬಿತ್ತು.
9 ವಿಕೆಟ್ಗಳ ಜಯ
ಎಂದಿನಂತೆ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದ ನಾಯಕ ಐಡೆನ್ ಮಾರ್ಕ್ರಾಮ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅದರ ನಂತರ, ದಕ್ಷಿಣ ಆಫ್ರಿಕಾದ ಯಾವುದೇ ವಿಕೆಟ್ ಪಡೆಯಲು ವಿಂಡೀಸ್ ಬೌಲರ್ಗಳಿಗೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಐಡೆನ್ ಮಾರ್ಕ್ರಾಮ್ ಔಟಾಗದೆ 46 ಎಸೆತಗಳಲ್ಲಿ 82 ಬಾರಿಸಿದರೆ, ರಯಾನ್ ರಿಕಲ್ಟನ್ 28 ಎಸೆತಗಳಲ್ಲಿ 45 ರನ್ ಬಾರಿಸಿ ಅಜೇಯರಾಗಿ ಉಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Thu, 26 February 26




