
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಪ್ರತಿಷ್ಠಿತ ಆ್ಯಶಸ್ ಸರಣಿಗೆ ದಿನಗಣನೆ ಶುರುವಾಗಿದೆ. ಕಾಂಗರೂನಾಡಿನಲ್ಲಿ ನಡೆಯಲಿರುವ ಈ ಸರಣಿಯು ನವೆಂಬರ್ 21 ರಿಂದ ಆರಂಭವಾಗಲಿದ್ದು, ಉಭಯ ತಂಡಗಳು ಒಟ್ಟು 5 ಪಂದ್ಯಗಳನ್ನಾಡಲಿದೆ. ಇನ್ನು ಈ ಸರಣಿಯ ಮೊದಲ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅಲಭ್ಯರಾಗಿದ್ದಾರೆ. ಹೀಗಾಗಿ ಆಸೀಸ್ ಪಡೆಯನ್ನು ಸ್ಟೀವ್ ಸ್ಮಿತ್ ಮುನ್ನಡೆಸಲಿದ್ದಾರೆ. ಅತ್ತ ಇಂಗ್ಲೆಂಡ್ ತಂಡದ ನಾಯಕನಾಗಿ ಬೆನ್ ಸ್ಟೋಕ್ಸ್ ಕಾಣಿಸಿಕೊಳ್ಳಲಿದ್ದಾರೆ.
ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಸೊಂಟದ ಮೂಳೆಯ ನೋವಿನಿಂದ ಬಳಲುತ್ತಿದ್ದು, ಹೀಗಾಗಿ ನವೆಂಬರ್ 21 ರಂದು ಆರಂಭವಾಗಲಿರುವ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಪರ್ತ್ ಟೆಸ್ಟ್ನಲ್ಲಿ ಸ್ಮಿತ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಉಳಿದ ಪಂದ್ಯಗಳಿಂದಲೂ ಕಮಿನ್ಸ್ ಹೊರಗುಳಿದರೆ ಸ್ಮಿತ್ ನಾಯಕನಾಗಿ ಮುಂದುವರೆಯುವ ಸಾಧ್ಯತೆಯಿದೆ.
ಆಸ್ಟ್ರೇಲಿಯಾ ತಂಡದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಆಗಿ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲಾಬುಶೇನ್ ಕಾಣಿಸಿಕೊಂಡರೆ, ಇಂಗ್ಲೆಂಡ್ ತಂಡದಲ್ಲಿ ಟೆಸ್ಟ್ ಪರಿಣಿತನಾಗಿ ಜೋ ರೂಟ್ ಹಾಗೂ ಒಲೀ ಪೋಪ್ ಇದ್ದಾರೆ. ಇನ್ನು ಸ್ಫೋಟಕ ಆಟಕ್ಕೆ ಆಸೀಸ್ ಪಡೆಯಲ್ಲಿ ಟ್ರಾವಿಸ್ ಹೆಡ್ ಇದ್ದರೆ, ಇಂಗ್ಲೆಂಡ್ ತಂಡಕ್ಕೆ ಬಾಝ್ ಬಾಲ್ ಝಲಕ್ ತೋರಿಸಲು ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ ಹಾಗು ಬೆನ್ ಡಕೆಟ್ ಇದ್ದಾರೆ.
ಇಂಗ್ಲೆಂಡ್ ತಂಡದಲ್ಲಿ ಆಲ್ರೌಂಡರ್ಗಳಾಗಿ ಬೆನ್ ಸ್ಟೋಕ್ಸ್ ಹಾಗೂ ಜೇಕಬ್ ಬೆಥೆಲ್ ಇದ್ದರೆ, ಅತ್ತ ಆಸ್ಟ್ರೇಲಿಯಾದಲ್ಲಿ ಕ್ಯಾಮರೋನ್ ಗ್ರೀನ್ ಹಾಗೂ ಬ್ಯೂ ವೆಬ್‌ಸ್ಟರ್ ಇದ್ದಾರೆ. ಹಾಗೆಯೇ ವೇಗಿಗಳಾಗಿ ಆಸೀಸ್ ಪಡೆಯಲ್ಲಿ ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹೇಝಲ್‌ವುಡ್ ಕಾಣಿಸಿಕೊಂಡರೆ, ಇಂಗ್ಲೆಂಡ್ ತಂಡದ ವೇಗಾಸ್ತ್ರವಾಗಿ ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್ ಹಾಗೂ ಮಾರ್ಕ್ ವುಡ್ ಕಣಕ್ಕಿಳಿಯಲಿದ್ದಾರೆ.
ಹೀಗಾಗಿ ಈ ಬಾರಿಯ ಆ್ಯಶಸ್ ಸರಣಿಯಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಈ ಪೈಪೋಟಿಯಲ್ಲಿ ಯಾರು ಗೆದ್ದು ಬೀಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಆಸ್ಟ್ರೇಲಿಯಾ ಟೆಸ್ಟ್ ತಂಡ (ಮೊದಲ ಪಂದ್ಯಕ್ಕೆ): ಸ್ಟೀವ್ ಸ್ಮಿತ್ (ನಾಯಕ), ಶಾನ್ ಅಬಾಟ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಬ್ರೆಂಡನ್ ಡಾಗೆಟ್, ಕ್ಯಾಮರೋನ್ ಗ್ರೀನ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಮಿಚೆಲ್ ಸ್ಟಾರ್ಕ್, ಜೇಕ್ ವೆದರಾಲ್ಡ್, ಬ್ಯೂ ವೆಬ್‌ಸ್ಟರ್.
ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್ (ಉಪನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಜೇಕಬ್ ಬೆಥೆಲ್, ಬ್ರೈಡನ್ ಕಾರ್ಸೆ, ಝಾಕ್ ಕ್ರಾಲಿ, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಓಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮಿ ಸ್ಮಿತ್, ಜೋಶ್ ಟಂಗ್, ಮಾರ್ಕ್ ವುಡ್.
ಇದನ್ನೂ ಓದಿ: ಮಿಲಿಂದ್ ಆರ್ಭಟಕ್ಕೆ ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಉಡೀಸ್