ಜೀವಭಯ… ಪಾಕಿಸ್ತಾನದಿಂದ ತವರಿಗೆ ಮರಳಲಿರುವ ಶ್ರೀಲಂಕಾ ಆಟಗಾರರು..!
Pakistan vs Sri Lanka: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ನ್ಯಾಯಾಲಯದ ಹೊರಗೆ ಮಂಗಳವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದರು. ಅಲ್ಲದೆ 27 ಜನರು ಗಾಯಗೊಂಡಿದ್ದಾರೆ. ಈ ದಾಳಿಯ ಬೆನ್ನಲ್ಲೇ ಶ್ರೀಲಂಕಾ ಆಟಗಾರರು ತವರಿಗೆ ಮರಳಲು ಇಚ್ಛಿಸಿದ್ದಾರೆ. ಇದಾಗ್ಯೂ ಪಾಕ್ ವಿರುದ್ಧದ ಸರಣಿ ಮುಂದುವರೆಸಲು ಲಂಕಾ ಕ್ರಿಕೆಟ್ ಬೋರ್ಡ್ ಮುಂದಾಗಿದೆ.

ಮಂಗಳವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ನಂತರ ಪ್ರವಾಸಿ ಶ್ರೀಲಂಕಾ ತಂಡದ 8 ಆಟಗಾರರು ತವರಿಗೆ ಮರಳಲು ಮುಂದಾಗಿದ್ದಾರೆ. ಪಾಕಿಸ್ತಾನ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಕೆಲ ಆಟಗಾರರು ತಮ್ಮ ಸುರಕ್ಷತಾ ಕಾಳಜಿಯನ್ನು ಉಲ್ಲೇಖಿಸಿ ತವರಿಗೆ ಮರಳಲು ವಿನಂತಿಸಿದ್ದಾರೆ. ಹೀಗಾಗಿ ಈ ಆಟಗಾರರನ್ನು ತವರಿಗೆ ಕರೆಸಿಕೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.
ಶ್ರೀಲಂಕಾ ತಂಡದ ಕೆಲ ಸದಸ್ಯರು ಸ್ವದೇಶಕ್ಕೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದರೂ, ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಉಳಿದ ಆಟಗಾರರಿಗೆ ಮತ್ತು ಸಹಾಯಕ ಸಿಬ್ಬಂದಿಗೆ ಪಾಕಿಸ್ತಾನದಲ್ಲಿ ತಮ್ಮ ಪಂದ್ಯಗಳನ್ನು ಮುಂದುವರಿಸಲು ಸೂಚನೆ ನೀಡಿದೆ.
ಪ್ರವಾಸಿ ತಂಡದ ಪ್ರತಿಯೊಬ್ಬ ಸದಸ್ಯರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಅಲ್ಲದೆ ಎಲ್ಲಾ ಕಳವಳಗಳನ್ನು ಸರಿಯಾಗಿ ಪರಿಹರಿಸಲಾಗುತ್ತಿದೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತನ್ನ ಆಟಗಾರರಿಗೆ ಆಶ್ವಾಸನೆ ನೀಡಿದೆ.
ಇನ್ನು ತವರಿಗೆ ಮರಳಲಿರುವ ಆಟಗಾರರಿಗೆ ಬದಲಿಯಾಗಿ ಶ್ರೀಲಂಕಾದಿಂದ ಕೆಲ ಆಟಗಾರರು ಪಾಕಿಸ್ತಾನಕ್ಕೆ ತೆರಳಲಿದ್ದಾರೆ. ಈ ಮೂಲಕ ಸರಣಿಯನ್ನು ಪೂರ್ಣಗೊಳಿಸಲು ಲಂಕಾ ಕ್ರಿಕೆಟ್ ಮಂಡಳಿ ಯೋಜನೆ ರೂಪಿಸಿದೆ. ಇದಾಗ್ಯೂ ಗುರುವಾರಕ್ಕೆ ನಿಗದಿಯಾಗಿರುವ 2ನೇ ಏಕದಿನ ಪಂದ್ಯ ನಡೆಯಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ಶ್ರೀಲಂಕಾ ಮತ್ತು ಪಾಕಿಸ್ತಾನ್ ನಡುವಣ 2ನೇ ಏಕದಿನ ಪಂದ್ಯ ಗುರುವಾರ ನಡೆಯಬೇಕಿದ್ದು, ಅದಕ್ಕೂ ಮುನ್ನ ಲಂಕಾ ಆಟಗಾರರು ಪಾಕಿಸ್ತಾನದಿಂದ ಹಿಂತಿರುಗಲು ನಿರ್ಧರಿಸಿದ್ದಾರೆ. ಹೀಗಾಗಿ ಈ ಪಂದ್ಯಕ್ಕೆ ಶ್ರೀಲಂಕಾ ತಂಡದ 8 ಆಟಗಾರರು ಅಲಭ್ಯರಾಗುವ ಸಾಧ್ಯತೆಯಿದೆ. ಇತ್ತ ಲಂಕಾ ತಂಡದ ಪ್ರಮುಖ ಆಟಗಾರರು ಅಲಭ್ಯರಾದರೆ ಇಂದಿನ ಪಂದ್ಯ ನಡೆಯುವುದು ಅನುಮಾನ.
ಹೀಗಾಗಿ ಪಾಕಿಸ್ತಾನ್ ಹಾಗೂ ಶ್ರೀಲಂಕಾ ನಡುವಣ 2ನೇ ಏಕದಿನ ಪಂದ್ಯವನ್ನು ಮರು ನಿಗದಿ ಮಾಡುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ.
ಶ್ರೀಲಂಕಾ ಆಟಗಾರರಿಗೆ ಜೀವಭಯ:
ಇಸ್ಲಾಮಾಬಾದ್‌ನ ನ್ಯಾಯಾಲಯದ ಹೊರಗೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದರು. ಅಲ್ಲದೆ 27 ಜನರು ಗಾಯಗೊಂಡಿದ್ದಾರೆ. ಈ ದಾಳಿಯು ಶ್ರೀಲಂಕಾ ಆಟಗಾರರಿಗೆ 2009ರ ಕಹಿ ಘಟನೆಯನ್ನು ನೆನಪಿಸಿದೆ.
2009 ರಲ್ಲಿ ಶ್ರೀಲಂಕಾ ತಂಡವು ಪಾಕ್ ಪ್ರವಾಸ ಕೈಗೊಂಡಿದ್ದಾಗ ಲಂಕಾ ತಂಡದ ಬಸ್ ಮೇಲೆ ಭಯೋತ್ಪಾದಕ ಬಂದೂಕುಧಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಶ್ರೀಲಂಕಾ ತಂಡದ ಆರು ಆಟಗಾರರು ಗಾಯಗೊಂಡಿದ್ದರು. ಈ ಅಹಿತಕರ ಘಟನೆಯಿಂದ ಸುಮಾರು ಒಂದು ದಶಕದ ಕಾಲ ಪಾಕಿಸ್ತಾನದಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ದೂರವಿಡಲಾಗಿತ್ತು.
ಇದನ್ನೂ ಓದಿ: IPL 2026: 2 ದಿನಗಳ ಮುಂಚೆ ಆಯ್ಕೆ… RCB ಆಟಗಾರನಿಗೆ ಖುಲಾಯಿಸಲಿದೆಯಾ ಅದೃಷ್ಟ
ಇದೀಗ ರಾವಲ್ಪಿಂಡಿಗೆ ಹತ್ತಿರವಿರುವ ಇಸ್ಮಾಮಾಬಾದ್ನ ನ್ಯಾಯಾಲಯದ ಬಳಿಯೇ ಬಾಂಬ್ ಸ್ಫೋಟವಾಗಿದೆ. ಈ ದಾಳಿಯಿಂದಾಗಿ ಶ್ರೀಲಂಕಾ ಆಟಗಾರರು ಭಯಭೀತರಾಗಿದ್ದು, ಹೀಗಾಗಿ 8 ಆಟಗಾರರು ತವರಿಗೆ ಹಿಂತಿರುಗಲು ಆಗ್ರಹಿಸಿದ್ದಾರೆ. ಅದರಂತೆ ಗುರುವಾರ ಲಂಕಾ ತಂಡದ ಕೆಲ ಆಟಗಾರರು ಕೊಲಂಬೊಗೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.
Published On - 8:24 am, Thu, 13 November 25
