90 ಓವರ್​, 5 ವಿಕೆಟ್​, 281 ರನ್​ಗಳ ಟಾರ್ಗೆಟ್: ರೋಚಕ ಘಟ್ಟದಲ್ಲಿ ENG vs NZ ಟೆಸ್ಟ್

England vs New Zealand, 2nd Test: ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್​ನಲ್ಲಿ ಇಂಗ್ಲೆಂಡ್ ತಂಡವು 115 ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಇದೀಗ ದ್ವಿತೀಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸುವ ಇರಾದೆಯಲ್ಲಿದೆ ಕಿವೀಸ್ ಪಡೆ.

90 ಓವರ್​, 5 ವಿಕೆಟ್​, 281 ರನ್​ಗಳ ಟಾರ್ಗೆಟ್: ರೋಚಕ ಘಟ್ಟದಲ್ಲಿ ENG vs NZ ಟೆಸ್ಟ್
Eng Vs Nz
Image Credit source: GettyImages

Updated on: Jun 21, 2026 | 8:04 AM

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ರೋಚಕ ಘಟ್ಟದತ್ತ ತಲುಪಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ಹಂಗಾಮಿ ನಾಯಕ ಜೋ ರೂಟ್ ಬೌಲಿಂಗ್ ಆಯ್ದುಕೊಂಡಿದ್ದರು.

  • ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 391 ರನ್​ ಕಲೆಹಾಕಿತು.
  • ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡವು 291 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.
  • ಮೊದಲ ಇನಿಂಗ್ಸ್​ನಲ್ಲಿನ 100 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆಡಿದ ನ್ಯೂಝಿಲೆಂಡ್ ತಂಡವು 362 ರನ್​ ಪೇರಿಸಿತು.
  • ಮೊದಲ ಇನಿಂಗ್ಸ್​ನಲ್ಲಿನ 100 ರನ್​ಗಳ ಹಿನ್ನಡೆಯೊಂದಿಗೆ ಇಂಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 463 ರನ್​ಗಳ ಗುರಿ ಪಡೆದುಕೊಂಡಿದೆ.

463 ರನ್​ಗಳ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿದೆ. ಆರಂಭಿಕರಾದ ಬೆನ್ ಡಕೆಟ್ (9) ಹಾಗೂ ಎಮಿಲಿಯೊ ಗೇ (11) ಬೇಗನೆ ವಿಕೆಟ್ ಒಪ್ಪಿಸಿದರೆ, ಆ ಬಳಿಕ ಬಂದ ಜೇಕಬ್ ಬೆಥೆಲ್ (0) ಶೂನ್ಯಕ್ಕೆ ಔಟಾಗಿದ್ದಾರೆ.

ಈ ಹಂತದಲ್ಲಿ ಜೊತೆಗೂಡಿದ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ ಅದು ರಕ್ಷಣಾತ್ಮಕ ಆಟದೊಂದಿಗೆ ಅಲ್ಲ ಎಂಬುದು ವಿಶೇಷ. ಮೂರು ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್​ಗಿಳಿದ ಬ್ರೂಕ್ ಬಿರುಸಿನ ಬ್ಯಾಟಿಂಗ್​ನೊಂದಿಗೆ ಕೌಂಟರ್ ಅಟ್ಯಾಕ್ ಮಾಡಿದರು.

ಈ ಮೂಲಕ ಕೇವಲ 54 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 10 ಫೋರ್​ಗಳೊಂದಿಗೆ 58 ರನ್ ಬಾರಿಸಿದರು. ಈ ಬಿರುಸಿನ ಬ್ಯಾಟಿಂಗ್​ ಮುಂದುವರೆಸಲು ಮುಂದಾದ ಪರಿಣಾಮ ಬ್ರೂಕ್ ಔಟಾದರು. ಆ ಬಳಿಕ ಬಂದ ಜೇಮ್ಸ್ ರಿವ್ (15) ಕೂಡ ಬಂದ ವೇಗದಲ್ಲೇ ಹಿಂತಿರುಗಿದರು.

ಇದಾಗ್ಯೂ ಮತ್ತೊಂದೆಡೆ ಕ್ಲಾಸಿಕಲ್ ಟೆಸ್ಟ್ ಆಡಿದ ಜೋ ರೂಟ್ ಏಕಾಂಗಿ ಹೋರಾಟ ಮುಂದುವರೆಸಿದ್ದಾರೆ. ಅದರಂತೆ 4ನೇ ದಿನದಾಟದ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡವು 5 ವಿಕೆಟ್ ಕಳೆದುಕೊಂಡು 182 ರನ್​ ಕಲೆಹಾಕಿದೆ.

ಸದ್ಯ ಕ್ರೀಸ್​ನಲ್ಲಿ 137 ಎಸೆತಗಳಲ್ಲಿ 8 ಫೋರ್​ಗಳೊಂದಿಗೆ ಅಜೇಯ 75 ರನ್ ಬಾರಿಸಿರುವ ಜೋ ರೂಟ್ ಹಾಗೂ ಜೋರ್ಡನ್ ಕಾಕ್ಸ್ 5ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

90 ಓವರ್​, 5 ವಿಕೆಟ್​, 281 ರನ್​ಗಳ ಟಾರ್ಗೆಟ್:

  • ಕೊನೆಯ ದಿನದಾಟದ 90 ಓವರ್​ಗಳಲ್ಲಿ ಇಂಗ್ಲೆಂಡ್ ತಂಡವು ಗೆಲ್ಲಲು 281 ರನ್​ ಕಲೆಹಾಕಬೇಕಿದೆ.
  • ನ್ಯೂಝಿಲೆಂಡ್ ತಂಡವು ಈ ಪಂದ್ಯದಲ್ಲಿ ಜಯ ಸಾಧಿಸಬೇಕಿದ್ದರೆ 5 ವಿಕೆಟ್ ಪಡೆದರೆ ಸಾಕು.

ಅಂದರೆ ಅಂತಿಮ ದಿನದಾಟದಲ್ಲಿ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು. ಅದರಲ್ಲೂ ಕ್ರೀಸ್​ನಲ್ಲಿ ಜೋ ರೂಟ್ ಇರುವುದರಿಂದ ಇಂಗ್ಲೆಂಡ್ ಕಡೆಯಿಂದ ದಿಟ್ಟ ಹೋರಾಟವನ್ನು ಎದುರು ನೋಡಬಹುದು. ಅದರಂತೆ ಈ ಪಂದ್ಯವು ಡ್ರಾ ಆಗಲಿದೆಯಾ? ನ್ಯೂಝಿಲೆಂಡ್ ಗೆಲ್ಲಲಿದೆಯಾ? ಅಥವಾ ಇಂಗ್ಲೆಂಡ್ ಜಯಭೇರಿ ಬಾರಿಸಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಇಂಗ್ಲೆಂಡ್ ಪ್ಲೇಯಿಂಗ್ 11: ಬೆನ್ ಡಕೆಟ್ , ಎಮಿಲಿಯೊ ಗೇ , ಜೇಕಬ್ ಬೆಥೆಲ್ , ಜೋ ರೂಟ್ (ನಾಯಕ) , ಹ್ಯಾರಿ ಬ್ರೂಕ್ ,
ಜೇಮ್ಸ್ ರೆವ್ (ವಿಕೆಟ್ ಕೀಪರ್) , ಜೋರ್ಡನ್ ಕಾಕ್ಸ್ , ಜೋಫ್ರಾ ಆರ್ಚರ್ , ಜೋಶ್ ಟಂಗ್ , ಮ್ಯಾಥ್ಯೂ ಫಿಶರ್ , ಸೋನಿ ಬೇಕರ್.

ಇದನ್ನೂ ಓದಿ: 12 ಕೋಟಿ ರೂ. ಮೈನಸ್… ಡೆಲ್ಲಿ ಕ್ಯಾಪಿಟಲ್ಸ್​ಗೆ ರಿಷಭ್ ರಿಎಂಟ್ರಿ!

ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ) , ಡೆವೊನ್ ಕಾನ್ವೇ , ಹೆನ್ರಿ ನಿಕೋಲ್ಸ್ , ರಚಿನ್ ರವೀಂದ್ರ , ಡೆರಿಲ್ ಮಿಚೆಲ್ , ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ನಾಥನ್ ಸ್ಮಿತ್ , ಕೈಲ್ ಜೇಮಿಸನ್ , ಮ್ಯಾಟ್ ಹೆನ್ರಿ , ವಿಲಿಯಂ ಒರೋಕ್.

 

Follow Us