IND vs ENG: ಉಚಿತವಾಗಿ 63 ರನ್ ನೀಡಿದ ಭಾರತ; 22 ರನ್‌ಗಳಿಂದ ಗೆದ್ದ ಇಂಗ್ಲೆಂಡ್
India vs England Lords Test Match: ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭಾರತವನ್ನು 22 ರನ್‌ಗಳಿಂದ ಸೋಲಿಸಿದೆ. ಭಾರತದ ಬ್ಯಾಟ್ಸ್‌ಮನ್‌ಗಳ ತಪ್ಪುಗಳು ಮತ್ತು ಬೌಲರ್‌ಗಳಿಂದ ಹೆಚ್ಚುವರಿ ರನ್‌ಗಳು ನೀಡಿದ್ದು ಸೋಲಿಗೆ ಪ್ರಮುಖ ಕಾರಣವಾಗಿದೆ. ಇಂಗ್ಲೆಂಡ್ ತನ್ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಕಡಿಮೆ ಹೆಚ್ಚುವರಿ ರನ್‌ಗಳನ್ನು ನೀಡಿದೆ, ಆದರೆ ಭಾರತವು ಗಮನಾರ್ಹ ಪ್ರಮಾಣದ ಹೆಚ್ಚುವರಿ ರನ್‌ಗಳನ್ನು ನೀಡಿದೆ. ಶಿಸ್ತಿನ ಬೌಲಿಂಗ್ ಇದ್ದಿದ್ದರೆ ಭಾರತ ಗೆಲ್ಲಬಹುದಿತ್ತು.

ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ (Lords Test) ನಡೆದ ಮೂರನೇ ಟೆಸ್ಟ್ ಪಂದ್ಯವನ್ನು ಆತಿಥೇಯ ಇಂಗ್ಲೆಂಡ್ ಗೆದ್ದುಕೊಂಡಿದೆ. ಜುಲೈ 14 ರಂದು ನಡೆದ ಪಂದ್ಯದ ಐದನೇ ದಿನದಂದು ಇಂಗ್ಲೆಂಡ್ ತಂಡವು ಟೀಂ ಇಂಡಿಯಾವನ್ನು (Team India) 170 ರನ್ಗಳಿಗೆ ಆಲೌಟ್ ಮಾಡಿ 22 ರನ್‌ಗಳಿಂದ ಗೆಲುವು ದಾಖಲಿಸಿತು. ಇಂಗ್ಲೆಂಡ್ ನೀಡಿದ 193 ರನ್‌ಗಳ ಗುರಿ ಟೀಂ ಇಂಡಿಯಾದ ಬಲಿಷ್ಠ ಬ್ಯಾಟಿಂಗ್ಗೆ ಅಷ್ಟು ಕಷ್ಟಕರವಾಗಿರಲಿಲ್ಲ. ಆದರೆ ಬ್ಯಾಟಿಂಗ್ ವಿಭಾಗ ಮಾಡಿದ ತಪ್ಪುಗಳು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ತಂಡದ ಸೋಲಿಗೆ ಬ್ಯಾಟರ್ಗಳಾದ ಯಶಸ್ವಿ ಜೈಸ್ವಾಲ್, ಕರುಣ್ ನಾಯರ್, ನಾಯಕ ಶುಭ್ಮನ್ ಗಿಲ್ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಇದರ ಜೊತೆಗೆ ಟೀಂ ಇಂಡಿಯಾ ವೇಗಿಗಳು ಕೂಡ ಈ ಸೋಲಿಗೆ ಕಾರಣ ಎನ್ನಬಹುದು.
ದುಬಾರಿಯಾದವು ಹೆಚ್ಚುವರಿ ರನ್
ಹೌದು.. ಇದು ಸ್ವಲ್ಪ ವಿಚಿತ್ರವಾದರೂ ಸತ್ಯ, ಏಕೆಂದರೆ ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡದ ಆಟಗಾರರು ತಮ್ಮ ಬ್ಯಾಟ್ನಿಂದ ಕಲೆಹಾಕಿದ್ದು, ಕೇವಲ 160 ರನ್ ಮಾತ್ರ ಅಂದರೆ, ಈಗ ಭಾರತ ಹೊಡಿದಿರುವ ರನ್ಗಳಿಗಿಂತ 10 ರನ್ ಕಡಿಮೆ. ಆದಾಗ್ಯೂ ಇಂಗ್ಲೆಂಡ್ ತಂಡ 192 ರನ್ ಕಲೆಹಾಕಲು ಟೀಂ ಇಂಡಿಯಾ ವೇಗಿಗಳು ವೈಡ್, ನೋ ಬಾಲ್, ಬೈಸ್, ಲೆಗ್ ಬೈಸ್ಗಳ ಮೂಲಕ ಉಚಿತವಾಗಿ ನೀಡಿದ 32 ರನ್‌ಗಳು ಕಾರಣವಾದವು. ಟೆಸ್ಟ್ ಕ್ರಿಕೆಟ್ನಲ್ಲಿ ಈ ರೀತಿಯಾಗಿ ರನ್ ಹರಿಯುವುದು ಸರ್ವೆ ಸಾಮಾನ್ಯ. ಆದರೆ, ಲಾರ್ಡ್ಸ್ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡಕ್ಕೆ ಹೋಲಿಸಿದರೆ, ಟೀಂ ಇಂಡಿಯಾ ದುಪ್ಪಟ್ಟು ರನ್‌ಗಳನ್ನು ಬಿಟ್ಟುಕೊಟ್ಟಿತು.
ಮೊದಲ ಇನ್ನಿಂಗ್ಸ್ನಲ್ಲಿ 31 ರನ್
ನಾವು ಮೊದಲ ಇನ್ನಿಂಗ್ಸ್ನಿಂದಲೂ ನೋಡುತ್ತಾ ಬಂದರೆ, ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ 387 ರನ್ ಕಲೆಹಾಕಿತು. ಇಲ್ಲಿ ಇಂಗ್ಲೆಂಡ್ ಆಟಗಾರರು 356 ರನ್‌ಗಳನ್ನು ಬಾರಿಸಿದರೆ, ಟೀಂ ಇಂಡಿಯಾ ಬೌಲರ್ಗಳು ಮೊದಲ ಇನ್ನಿಂಗ್ಸ್ನಲ್ಲಿ ಹೆಚ್ಚುವರಿಯಾಗಿ 31 ರನ್‌ಗಳನ್ನು ಬಿಟ್ಟುಕೊಟ್ಟರು. ಇತ್ತ ಭಾರತ ಕೂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 387 ರನ್‌ಗಳನ್ನು ಕಲೆಹಾಕಿತು. ಇದರಲ್ಲಿ ಭಾರತ 375 ರನ್‌ಗಳನ್ನು ಬಾರಿಸಿದರೆ, ಇತ್ತ ಇಂಗ್ಲೆಂಡ್ ಬೌಲರ್ಗಳು ಕೇವಲ 12 ರನ್‌ಗಳನ್ನು ಹೆಚ್ಚುವರಿಯಾಗಿ ಬಿಟ್ಟುಕೊಟ್ಟರು.
IND vs ENG: ಜಡೇಜಾ ಏಕಾಂಗಿ ಹೋರಾಟ ವ್ಯರ್ಥ; ಲಾರ್ಡ್ಸ್ ಟೆಸ್ಟ್ ಸೋತ ಟೀಂ ಇಂಡಿಯಾ
ಎರಡನೇ ಇನ್ನಿಂಗ್ಸ್ನಲ್ಲಿ 32 ರನ್
ಇನ್ನು ಎರಡನೇ ಇನ್ನಿಂಗ್ಸ್ಗೆ ಬರುವುದಾದರೆ.. ಎರಡನೇ ಇನ್ನಿಂಗ್ಸ್ನಲ್ಲಿ ಯಾವುದೇ ಮುನ್ನಡೆ ಇಲ್ಲದೆ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, ಮೇಲೆ ಹೇಳಿದಂತೆ 160 ರನ್‌ಗಳನ್ನು ಕಲೆಹಾಕಿದರೆ, ಇತ್ತ ಟೀಂ ಇಂಡಿಯಾ ಬೌಲರ್ಗಳು 32 ರನ್‌ಗಳನ್ನು ಹೆಚ್ಚುವರಿಯಾಗಿ ಬಿಟ್ಟುಕೊಟ್ಟರು. ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 170 ರನ್ಗಳಿಗೆ ಆಲೌಟ್ ಆಯಿತು. ಇದರಲ್ಲಿ ಟೀಂ ಇಂಡಿಯಾ 152 ರನ್‌ಗಳನ್ನು ಬಾರಿಸಿದರೆ, ಇಂಗ್ಲೆಂಡ್ ಬೌಲರ್ಗಳು ಕೇವಲ 18 ರನ್ ಮಾತ್ರ ಬಿಟ್ಟುಕೊಟ್ಟರು. ಅಂದರೆ ಎರಡೂ ಇನ್ನಿಂಗ್ಸ್ಗಳಿಂದ ಭಾರತ ತಂಡ ಹೆಚ್ಚುವರಿಯಾಗಿ ಬರೋಬ್ಬರಿ 63 ರನ್‌ಗಳನ್ನು ಉಚಿತವಾಗಿ ನೀಡಿತು. ಇತ್ತ ಇಂಗ್ಲೆಂಡ್ ತಂಡ ಕೇವಲ 30 ರನ್‌ಗಳನ್ನು ಹೆಚ್ಚುವರಿಯಾಗಿ ನೀಡಿತು. ಒಂದು ವೇಳೆ ಟೀಂ ಇಂಡಿಯಾ ಬೌಲರ್ಗಳು ಶಿಸ್ತುಬದ್ಧ ದಾಳಿಯನ್ನು ಸಂಘಟಿಸಿದ್ದರೆ, ಇವತ್ತಿನ ಫಲಿತಾಂಶ ಟೀಂ ಇಂಡಿಯಾ ಪರ ಇರುತ್ತಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
