ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಮಹಿಳಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು.
ಈ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ರೇಣುಕಾ ಸಿಂಗ್ ಮೊದಲ ಓವರ್ನ 4ನೇ ಎಸೆತದಲ್ಲಿ ಸೋಫಿಯಾ ಡಂಕ್ಲಿ (1) ವಿಕೆಟ್ ಪಡೆದರು. ಇದರ ಬೆನ್ನಲ್ಲೇ ಅಲೀಸ್ ಕ್ಯಾಪ್ಸಿ (0) ಗೂ ಪೆವಿಲಿಯನ್ ಹಾದಿ ತೋರಿಸಿದರು. ಆದರೆ ಮತ್ತೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಡೇನಿಯಲ್ ವ್ಯಾಟ್ ಇಂಗ್ಲೆಂಡ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.
ಕೇವಲ 2 ರನ್ಗಳಿಗೆ 2 ವಿಕೆಟ್ ಕಬಳಿಸಿದ ಟೀಮ್ ಇಂಡಿಯಾ ಬೌಲರ್ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ವ್ಯಾಟ್ 47 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 75 ರನ್ ಬಾರಿಸಿ ಔಟಾದರು. ಈ ವೇಳೆಗೆ ಇಂಗ್ಲೆಂಡ್ ತಂಡದ ಮೊತ್ತ 140 ಕ್ಕೆ ತಲುಪಿತ್ತು.
ಆ ಬಳಿಕ ನ್ಯಾಟ್ ಸ್ಕಿವರ್-ಬ್ರಂಟ್ ಬಿರುಸಿನ ಬ್ಯಾಟಿಂಗ್ ಶುರು ಮಾಡಿದರು. 53 ಎಸೆತಗಳನ್ನು ಎದುರಿಸಿದ ಬ್ರಂಟ್ 13 ಫೋರ್ಗಳೊಂದಿಗೆ 77 ರನ್ ಬಾರಿಸಿದರು. ಪರಿಣಾಮ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ತಂಡವು 197 ರನ್ ಕಲೆಹಾಕಿತು.
198 ರನ್ಗಳ ಕಠಿಣ ಗುರಿ ಪಡೆದ ಟೀಮ್ ಇಂಡಿಯಾಗೆ ಉತ್ತಮ ಆರಂಭ ಒದಗಿಸುವಲ್ಲಿ ಸ್ಮೃತಿ ಮಂಧಾನ ವಿಫಲರಾದರು. ಕೇವಲ 6 ರನ್ಗಳಿಸಿದ ಮಂಧಾನ ಮೊದಲಿಗರಾಗಿ ಹೊರನಡೆದರೆ, ಆ ಬಳಿಕ ಬಂದ ಜೆಮಿಮಾ ರೊಡ್ರಿಗಸ್ 4 ರನ್ಗಳಿಸಲಷ್ಟೇ ಶಕ್ತರಾದರು.
ಇನ್ನು ನಾಯಕಿ ಹರ್ಮನ್‌ಪ್ರೀತ್ ಕೌರ್ 26 ರನ್ಗಳಿಸಿ ಕ್ಲೀನ್ ಬೌಲ್ಡ್ ಆದರು. ಇದಾಗ್ಯೂ ಮತ್ತೊಂದೆಡೆ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಉತ್ತಮ ಬ್ಯಾಟಿಂಗ್ ಮುಂದುವರೆಸಿದರು. ಎಚ್ಚರಿಕೆಯೊಂದಿಗೆ ಇನಿಂಗ್ಸ್ ಕಟ್ಟಿದ ಶಫಾಲಿ 37 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಇನ್ನೊಂದೆಡೆ ರಿಚಾ ಘೋಷ್ 16 ಎಸೆತಗಳಲ್ಲಿ 21 ರನ್ ಬಾರಿಸಿದರು. ಪರಿಣಾಮ ಕೊನೆಯ 5 ಓವರ್ಗಳಲ್ಲಿ ಟೀಮ್ ಇಂಡಿಯಾಗೆ 74 ರನ್ಗಳ ಅವಶ್ಯಕತೆಯಿತ್ತು. ಆದರೆ ಈ ಹಂತದಲ್ಲಿ 52 ರನ್ ಬಾರಿಸಿದ್ದ ಶಫಾಲಿ ವರ್ಮಾ ಎಕ್ಲೆಸ್ಟೋನ್ ಎಸೆತದಲ್ಲಿ ಕ್ಯಾಚ್ ನೀಡಿದರು.
ಇದರೊಂದಿಗೆ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಇಂಗ್ಲೆಂಡ್ ಬೌಲರ್ಗಳು ಅಂತಿಮ ಓವರ್ಗಳಲ್ಲಿ ರನ್ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾ 159 ರನ್ಗಳಿಸಿ 38 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಮಹಿಳಾ ತಂಡ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಜೆಮಿಮಾ ರೊಡ್ರಿಗಸ್ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ದೀಪ್ತಿ ಶರ್ಮಾ , ರಿಚಾ ಘೋಷ್ ( ವಿಕೆಟ್ ಕೀಪರ್ ) , ಶ್ರೇಯಾಂಕಾ ಪಾಟೀಲ್ , ಕನಿಕಾ ಅಹುಜಾ , ಪೂಜಾ ವಸ್ತ್ರಾಕರ್ , ರೇಣುಕಾ ಠಾಕೂರ್ ಸಿಂಗ್ , ಸೈಕಾ ಇಶಾಕ್.
ಇದನ್ನೂ ಓದಿ: 4,4,4,4,4,4,4: ಟಿ20 ಕ್ರಿಕೆಟ್ನಲ್ಲಿ ದಾಖಲೆ ಬರೆದ ಹರ್ಮನ್‌ಪ್ರೀತ್ ಕೌರ್
ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್: ಡೇನಿಯಲ್ ವ್ಯಾಟ್ , ಸೋಫಿಯಾ ಡಂಕ್ಲಿ , ಆಲಿಸ್ ಕ್ಯಾಪ್ಸೆ , ನ್ಯಾಟ್ ಸ್ಕೈವರ್-ಬ್ರಂಟ್ , ಹೀದರ್ ನೈಟ್ (ನಾಯಕಿ) , ಆಮಿ ಜೋನ್ಸ್ (ವಿಕೆಟ್ ಕೀಪರ್) , ಫ್ರೇಯಾ ಕೆಂಪ್ , ಸೋಫಿ ಎಕ್ಲೆಸ್ಟೋನ್ , ಸಾರಾ ಗ್ಲೆನ್ , ಲಾರೆನ್ ಬೆಲ್ , ಮಹಿಕಾ ಗೌರ್.