
ಬೆಂಗಳೂರು (ಜು. 24): ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ (World Championship of Legends) ಜುಲೈ 20 ರಂದು ನಡೆಯಬೇಕಿದ್ದ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳ ನಡುವಣ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಪಾಕಿಸ್ತಾನ್ ವಿರುದ್ಧದ ಈ ಪಂದ್ಯದಿಂದ ಭಾರತೀಯ ಆಟಗಾರರು ಹಿಂದೆ ಸರಿದರು. ಇದರ ಬೆನ್ನಲ್ಲೇ ಪಾಕ್ ಚಾಂಪಿಯನ್ಸ್ ನಾಯಕ ಶಾಹಿದ್ ಅಫ್ರಿದಿ ಭಾರತೀಯ ಆಟಗಾರರ ಮೇಲೆ ಹರಿಹಾಯ್ದರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ವೈರಲ್ ಆಗುತ್ತಿದೆ.
ಬಾಲಿವುಡ್ ನಟ ಅಜಯ್ ದೇವಗನ್ ಅವರು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರೊಂದಿಗೆ ಕ್ರಿಕೆಟ್ ಮೈದಾನದಲ್ಲಿ ಮಾತನಾಡುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿ 2025 ಹಾಗೂ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಈ ಚಿತ್ರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪೋಸ್ಟ್‌ಗಳು ಸೂಚಿಸುತ್ತವೆ.
ಈ ಹೇಳಿಕೆಯನ್ನು ಟಿವಿ9 ಕನ್ನಡ ಫ್ಯಾಕ್ಟ್-ಚೆಕ್ ಮಾಡಿದೆ ಮತ್ತು ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ಕಂಡುಹಿಡಿದಿದೆ. ನಿಜಾಂಶವನ್ನು ತಿಳಿಯಲು ಕೀವರ್ಡ್ ಹುಡುಕಾಟ ನಡೆಸಿದಾಗ ಅಜಯ್ ದೇವಗನ್ ಮತ್ತು ಶಾಹಿದ್ ಅಫ್ರಿದಿ ಅವರನ್ನು ತೋರಿಸುವ ಯಾವುದೇ ಇತ್ತೀಚಿನ ಮಾಧ್ಯಮ ವರದಿ ಅಥವಾ ವಿಶ್ವಾಸಾರ್ಹ ಚಿತ್ರಗಳು ನಮಗೆ ಕಂಡುಬಂದಿಲ್ಲ.
Fact Check: ಉದಯಪುರ ಫೈಲ್ಸ್ ಸಿನಿಮಾ ನಟನ ಮನೆಗೆ ಬೆಂಕಿ ಹಂಚಿದ ಮುಸ್ಲಿಮರು?: ವೈರಲ್ ವಿಡಿಯೋದ ಸತ್ಯ ಇಲ್ಲಿದೆ ನೋಡಿ
ಹೀಗಾಗಿ ಫೋಟೋವನ್ನು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಈ ಸಂದರ್ಭ ಈ ಫೋಟೋಗಳನ್ನು ನಿವೃತ್ತ ಆಟಗಾರರನ್ನು ಒಳಗೊಂಡ ಕ್ರಿಕೆಟ್ ಪಂದ್ಯಾವಳಿಯಾದ 2024 ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) ನ 8 ನೇ ಪಂದ್ಯದ ಸಮಯದಲ್ಲಿ ಸೆರೆಹಿಡಿಯಲಾಗಿದೆ ಎಂದು ತಿಳಿದುಬಂತು. ಭಾರತ ಚಾಂಪಿಯನ್ಸ್ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ನಡುವೆ ಪಂದ್ಯವು ಜುಲೈ 6, 2024 ರಂದು ನಡೆಯಿತು. ಅಜಯ್ ಟೂರ್ನಮೆಂಟ್‌ನ ಸಹ-ಮಾಲೀಕರಾಗಿದ್ದಾರೆ. ಆದ್ದರಿಂದ ಅವರು ಕಳೆದ ವರ್ಷ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಉದ್ಘಾಟನಾ ಋತುವಿನಲ್ಲಿ ಹಾಜರಿದ್ದರು. ಆ ಟೂರ್ನಮೆಂಟ್‌ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಫೈನಲ್ ಅನ್ನು ಗೆದ್ದಿತು. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ನಂತರದ ಆಪರೇಷನ್ ಸಿಂದೂರ್‌ಗೆ ಬಹಳ ಮೊದಲೇ ಈ ಫೋಟೋವನ್ನು ಕ್ಲಿಕ್ಕಿಸಲಾಗಿದೆ.
2025 ರ ಆವೃತ್ತಿಯ ಟೂರ್ನಮೆಂಟ್‌ಗೆ ಸಂಬಂಧಿಸಿದಂತೆ, ಜುಲೈ 20 ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಬೇಕಿದ್ದ ಬಹು ನಿರೀಕ್ಷಿತ ಇಂಡಿಯಾ ಚಾಂಪಿಯನ್ಸ್ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ನಡುವಿನ ಪಂದ್ಯವನ್ನು ಅಂತಿಮವಾಗಿ ರದ್ದುಗೊಳಿಸಲಾಯಿತು. ಶಿಖರ್ ಧವನ್, ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಸೇರಿದಂತೆ ಹಲವಾರು ಭಾರತೀಯ ಆಟಗಾರರು ಈ ಪಂದ್ಯದಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡರು, ಪಹಲ್ಗಾಮ್ ದಾಳಿಯ ನಂತರ ಹೆಚ್ಚುತ್ತಿರುವ ಉದ್ವಿಗ್ನತೆಯೇ ಹಿಂದೆ ಸರಿಯಲು ಕಾರಣ ಎಂದು ಅವರು ಉಲ್ಲೇಖಿಸಿದರು.
ಹೀಗಾಗಿ, ಅಜಯ್ ದೇವಗನ್ ಮತ್ತು ಶಾಹಿದ್ ಅಫ್ರಿದಿ ಅವರ ಫೋಟೋಗಳು ಪಹಲ್ಗಾಮ್ ಭಯೋತ್ಪಾದನಾ ಘಟನೆಗೆ ಮೊದಲು ನಡೆದ ಕ್ರಿಕೆಟ್ ಪಂದ್ಯದವುಗಳಾಗಿದ್ದು, ತಪ್ಪು ಮಾಹಿತಿಯೊಂದಿಗೆ ಈ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ