Fact Check: ತೆಲಂಗಾಣದಲ್ಲಿ ರೈಲ್ವೆ ಹಳಿಗಳ ಮೇಲೆ ಕಾರು ಚಲಾಯಿಸಿದ್ದು ಮುಸ್ಲಿಂ ಮಹಿಳೆಯೇ?: ಸತ್ಯ ಇಲ್ಲಿದೆ ನೋಡಿ
ಟಿವಿ9 ಕನ್ನಡ ನಡೆಸಿದ ತನಿಖೆಯಲ್ಲಿ ವೈರಲ್ ದೃಶ್ಯದಲ್ಲಿರುವ ಮಹಿಳೆ ಮುಸ್ಲಿಂ ಮಹಿಳೆಯಲ್ಲ ಎಂದು ಕಂಡುಬಂದಿದೆ. ತೆಲಂಗಾಣದಲ್ಲಿ ರೈಲ್ವೆ ಹಳಿಗಳ ಮೇಲೆ ತನ್ನ ಕಾರನ್ನು ಚಲಾಯಿಸಿದ ಮಹಿಳೆಯ ಹೆಸರು ವೊಮಿಕಾ ಸೋನಿ. ನಿಜಾಂಶವನ್ನು ತಿಳಿಯಲು ನಾವು ಕೀವರ್ಡ್ ಹುಡುಕಾಟದೊಂದಿಗೆ ನಮ್ಮ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಈ ಸಂದರ್ಭ ಈ ಘಟನೆಯ ಕುರಿತು ಹಲವಾರು ಸುದ್ದಿ ವರದಿಗಳು ನಮಗೆ ಸಿಕ್ಕಿವೆ.

ಬೆಂಗಳೂರು (ಜು. 03): ಇತ್ತೀಚೆಗೆ ತೆಲಂಗಾಣದಲ್ಲಿ (Telangana) ನಡೆದ ಘಟನೆಯೊಂದು, ಮಹಿಳೆಯೊಬ್ಬರು ರೈಲ್ವೆ ಹಳಿ ಮೇಲೆ ಕಾರು ಚಲಾಯಿಸುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈಗ, ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದ್ದು, ಇದರಲ್ಲಿ ಭಾಗಿಯಾಗಿರುವ ಮಹಿಳೆ ಮುಸ್ಲಿಂ ಮತ್ತು ಆಕೆಯ ಹೆಸರು ಫಾತಿಮಾ ಎಂದು ಹೇಳಲಾಗುತ್ತಿದೆ. ಈ ವಿಡಿಯೋದಲ್ಲಿ, ಕಾರಿನ ಸುತ್ತಲಿನಲ್ಲಿ ಜನರು ಮಾಸ್ಕ್ ಧರಿಸಿಕೊಂಡಿದ್ದ ಮಹಿಳೆಯ ಮೇಲೆ ಕೋಪಗೊಂಡಿರುವುದು ಮತ್ತು ಪ್ರತಿಯಾಗಿ ಜನರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಅಬ್ದುಲ್ಲನನ್ನು ಪಕ್ಕಕ್ಕೆ ಬಿಡಿ, ಫಾತಿಮಾ ಕೂಡ ತನ್ನ ಉದ್ದೇಶವನ್ನು ಮರೆಯುತ್ತಿಲ್ಲ. ಅವಳು ಇಲ್ಲಿಗೆ ಹೇಗೆ ಬಂದಳು….. ಈ ವಿಡಿಯೋ ತೆಲಂಗಾಣದ್ದು, ನೀವು ಏನಾದರೂ ಹೇಳಲು ಬಯಸುವಿರಾ?’’ ಎಂದು ಬರೆದುಕೊಂಡಿದ್ದಾರೆ.
ಕಾರು ಚಲಾಯಿಸಿದ್ದು ಮುಸ್ಲಿಂ ಮಹಿಳೆ ಅಲ್ಲ:
ಟಿವಿ9 ಕನ್ನಡ ನಡೆಸಿದ ತನಿಖೆಯಲ್ಲಿ ವೈರಲ್ ದೃಶ್ಯದಲ್ಲಿರುವ ಮಹಿಳೆ ಮುಸ್ಲಿಂ ಮಹಿಳೆಯಲ್ಲ ಎಂದು ಕಂಡುಬಂದಿದೆ. ತೆಲಂಗಾಣದಲ್ಲಿ ರೈಲ್ವೆ ಹಳಿಗಳ ಮೇಲೆ ತನ್ನ ಕಾರನ್ನು ಚಲಾಯಿಸಿದ ಮಹಿಳೆಯ ಹೆಸರು ವೊಮಿಕಾ ಸೋನಿ. ನಿಜಾಂಶವನ್ನು ತಿಳಿಯಲು ನಾವು ಕೀವರ್ಡ್ ಹುಡುಕಾಟದೊಂದಿಗೆ ನಮ್ಮ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಈ ಸಂದರ್ಭ ಈ ಘಟನೆಯ ಕುರಿತು ಹಲವಾರು ಸುದ್ದಿ ವರದಿಗಳು ನಮಗೆ ಸಿಕ್ಕಿವೆ.
“ನಗುಲಾಪಲ್ಲಿ ರೈಲು ನಿಲ್ದಾಣದ ಬಳಿಯ ರೈಲ್ವೆ ಹಳಿಗೆ ತನ್ನ ಕಾರನ್ನು ಚಲಾಯಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಲಕ್ನೋದ 34 ವರ್ಷದ ಮಹಿಳೆಯನ್ನು ಅಧಿಕಾರಿಗಳು ರಕ್ಷಿಸಿದ್ದಾರೆ ಎಂದು ವಿಕಾರಾಬಾದ್ ಪೊಲೀಸರು ತಿಳಿಸಿದ್ದಾರೆ. ವೊಮಿಕಾ ಸೋನಿ ಎಂದು ಗುರುತಿಸಲಾದ ಮಹಿಳೆಯನ್ನು ನಂತರ ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು 2025 ರ ಜೂನ್ 28 ರ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
Fact Check: ಆಗ್ರಾ ವಿಮಾನ ನಿಲ್ದಾಣದಲ್ಲಿ ಯಾವುದೇ ವಿಮಾನ ಅಪಘಾತಕ್ಕೀಡಾಗಿಲ್ಲ: ವೈರಲ್ ಆಗುತ್ತಿರುವುದು ನಕಲಿ ವಿಡಿಯೋ
ಹಾಗೆಯೆ ಮತ್ತೊಂದು ವರದಿಯಲ್ಲಿ, “ಗುರುವಾರ ಬೆಳಿಗ್ಗೆ ರಂಗಾರೆಡ್ಡಿ ಜಿಲ್ಲೆಯ ಶಂಕರಪಲ್ಲಿ ಬಳಿ ರೈಲ್ವೆ ಹಳಿಗಳ ಮೇಲೆ ಸುಮಾರು 7 ಕಿ.ಮೀ. ದೂರ ತನ್ನ ಕಾರನ್ನು ಚಲಾಯಿಸಿಕೊಂಡು ಬಂದು, ಕನಿಷ್ಠ ಒಂದು ಗಂಟೆ ರೈಲು ಸೇವೆಗೆ ಅಡ್ಡಿಪಡಿಸಿದ ನಂತರ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಕ್ಕಾಗಿ ತೆಲಂಗಾಣ ಪೊಲೀಸರು 34 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಗುಲಾಪಲ್ಲಿ ಮತ್ತು ಶಂಕರಪಲ್ಲಿ ನಿಲ್ದಾಣಗಳ ನಡುವೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಉತ್ತರ ಪ್ರದೇಶದ ಲಕ್ನೋದ ವೊಮಿಕಾ ಸೋನಿ ಎಂದು ಗುರುತಿಸಲ್ಪಟ್ಟ ಮಹಿಳೆ ಶಂಕರಪಲ್ಲಿ-ನಾಗುಲಾಪಲ್ಲಿ ನಿಲ್ದಾಣಗಳ ನಡುವಿನ ಲೆವೆಲ್-ಕ್ರಾಸಿಂಗ್ ಗೇಟ್‌ನಲ್ಲಿ ಇದ್ದಕ್ಕಿದ್ದಂತೆ ರೈಲ್ವೆ ಹಳಿಗಳಿಗೆ ಪ್ರವೇಶಿಸಿ, ರೈಲ್ವೆ ಸಿಬ್ಬಂದಿ ಅವಳನ್ನು ತಡೆಯಲು ಪ್ರಯತ್ನಿಸಿದರೂ, ಕಿಯಾ ಸೋನೆಟ್ ಎಂಬ ತನ್ನ ಕಾರನ್ನು ಚಲಾಯಿಸುವುದನ್ನು ಮುಂದುವರೆಸಿದರು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.” ಎಂದು ವರದಿಯಲ್ಲಿದೆ.
ಈ ಘಟನೆಯ ಕುರಿತು ಟಿವಿ9 ಕನ್ನಡ ಕೂಡ ವರದಿ ಮಾಡಿದ್ದು, ಯುವತಿಯೊಬ್ಬಳು ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿರುವ ಘಟನೆ ತೆಲಂಗಾಣದ ಕೊಂಡಕಲ್ ರೈಲ್ವೆ ಗೇಟ್ ಬಳಿ ನಡೆದಿದೆ. ಈ ಮಾರ್ಗದಲ್ಲಿ ರೈಲು ಸೇವೆಗೆ ಗಮನಾರ್ಹ ಅಡಚಣೆ ಉಂಟಾಗಿತ್ತು. ರೈಲ್ವೆ ಅಧಿಕಾರಿಗಳ ಪ್ರಕಾರ, ಯುವತಿ ಶಂಕರ್‌ಪಲ್ಲಿಯಿಂದ ಹೈದರಾಬಾದ್ ಕಡೆಗೆ ನೇರವಾಗಿ ಹಳಿಗಳ ಮೇಲೆ ಕಾರನ್ನು ಚಲಾಯಿಸುತ್ತಿರುವುದು ಕಂಡುಬಂದಿದೆ. ರೈಲ್ವೆ ಸಿಬ್ಬಂದಿ ಆಕೆಯನ್ನು ತಡೆಯಲು ಯತ್ನಿಸಿದಾಗ ಇನ್ನೂ ವೇಗವಾಗಿ ಚಾಲನೆ ಮಾಡಿದ್ದಾಳೆ. ಈ ಘಟನೆಯಿಂದ ಸಾಕಷ್ಟು ವಿಳಂಬವಾಗಿದ್ದು, ಬೆಂಗಳೂರಿನಿಂದ ಹೈದರಾಬಾದ್‌ಗೆ ಬರುವ ರೈಲುಗಳು ಪರಿಣಾಮ ಬೀರಿದೆ ಎಂದು ಬರೆಯಲಾಗಿದೆ.
ಹೀಗಾಗಿ ಟಿವಿ9 ಕನ್ನಡ ತನ್ನ ತನಿಖೆಯಲ್ಲಿ, ತೆಲಂಗಾಣದಲ್ಲಿ ರೈಲ್ವೆ ಹಳಿ ಮೇಲೆ ವಾಹನ ಚಲಾಯಿಸುತ್ತಿದ್ದ ಮಹಿಳೆ ಫಾತಿಮಾ ಹಾಗೂ ಆಕೆ ಮುಸ್ಲಿಂ ಅಲ್ಲ, ಈ ವೈರಲ್ ಹೇಳಿಕೆ ಸುಳ್ಳು ಎಂದು ಕಂಡುಹಿಡಿದಿದೆ. ಆಕೆಯ ನಿಜವಾದ ಹೆಸರು ವೊಮಿಕಾ ಸೋನಿ ಆಗಿದೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:55 pm, Thu, 3 July 25








