Faf Duplessis: ಆತನಿಗೋಸ್ಕರ ನಾನು ಔಟಾಗಲು ರೆಡಿಯಿದ್ದೆ: ಪಂದ್ಯದ ಬಳಿಕ ಡುಪ್ಲೆಸಿಸ್ ಅಚ್ಚರಿ ಹೇಳಿಕೆ

SRH vs RCB, IPL 2022: ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ 67 ರನ್​ಗಳ ಬೃಹತ್ ಅಂತರದ ಗೆಲುವಿನಿಂದ ಆರ್‌ಸಿಬಿ 14 ಪಾಯಿಂಟ್ಸ್ ಕಲೆಹಾಕಿ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಫಾಫ್ ಡುಪ್ಲೆಸಿಸ್ (Faf Duplessis) ಏನು ಹೇಳಿದರು ಕೇಳಿ.

Faf Duplessis: ಆತನಿಗೋಸ್ಕರ ನಾನು ಔಟಾಗಲು ರೆಡಿಯಿದ್ದೆ: ಪಂದ್ಯದ ಬಳಿಕ ಡುಪ್ಲೆಸಿಸ್ ಅಚ್ಚರಿ ಹೇಳಿಕೆ
faf du plessis post-match presentation SRH vs RCB
Updated By: Vinay Bhat

Updated on: May 09, 2022 | 8:13 AM

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು (SRH vs RCB) ತಂಡ 67 ರನ್​ಗಳ ಬೃಹತ್ ಅಂತರದ ಗೆಲುವು ಕಂಡು ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಪರಿಸರ ಕಾಳಜಿಯೊಂದಿಗೆ ಹಸಿರು ಉಡುಗೆ ತೊಟ್ಟು ಕಣಕ್ಕಿಳಿದ ಆರ್​ಸಿಬಿ ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಮಿಂಚಿನ ಪ್ರದರ್ಶನ ತೋರಿತು. ನಾಯಕ ಫಾಫ್ ಡುಪ್ಲೆಸಿಸ್, ರಜತ್ ಪಟಿದಾರ್, ಕೊನೆ ಹಂತದಲ್ಲಿ ದಿನೇಶ್ ಕಾರ್ತಿಕ್ (Dinesh Karthik) ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ 3 ವಿಕೆಟ್‌ಗೆ 192 ರನ್‌ಗಳಿಸಿದರೆ, ಸನ್‌ರೈಸರ್ಸ್‌ ಹೈದರಾಬಾದ್ ತಂಡ 19.2 ಓವರ್‌ಗಳಲ್ಲಿ 125 ರನ್‌ಗಳಿಗೆ ಸರ್ವಪತನ ಕಂಡಿತು., ವನಿಂದು ಹಸರಂಗ 5 ವಿಕೆಟ್ ಕಿತ್ತು ಮಾರಕ ದಾಳಿ ನಡೆಸಿದರು. ಈ ಗೆಲುವಿನಿಂದ ಆರ್‌ಸಿಬಿ 14 ಪಾಯಿಂಟ್ಸ್ ಕಲೆಹಾಕಿ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಫಾಫ್ ಡುಪ್ಲೆಸಿಸ್ (Faf Duplessis) ಏನು ಹೇಳಿದರು ಕೇಳಿ.

“ನಾವು ತಂಡದ ಬ್ಯಾಟಿಂಗ್ ಶಕ್ತಿಯನ್ನು ಇನ್ನಷ್ಟು ಉತ್ತಮವಾಗಿಸಲು ಪ್ರಯತ್ನಿಸುತ್ತಿದ್ದೇವೆ. ಟಾಪ್ ನಾಲ್ಕು ಬ್ಯಾಟರ್​ಗಳಲ್ಲಿ ಒಬ್ಬರು ಕ್ರೀಸ್​​ನಲ್ಲಿ ನಿಂತು ಆಡಬೇಕು. ಕೊನೆಯಲ್ಲಿ ನಮ್ಮ ಬಳಿ ಕೆಲ ಅತ್ಯುತ್ತಮ ಹಿಟ್ಟರ್​ಗಳಿದ್ದಾರೆ. ಸರಿಯಾದ ಸಮಯದಲ್ಲಿ ಸರಿಯಾದ ಬೌಲರ್ ಅನ್ನು ಕಣಕ್ಕಿಳಿಸುವುದು ಮುಖ್ಯ. ರಜತ್ ಪಟಿದಾರ್ ಒಬ್ಬ ಅತ್ಯುತ್ತಮ ಕ್ರಿಕೆಟಿಗ. ನಮ್ಮ ತಂಡದಲ್ಲಿ ಕೆಲ ಅದ್ಭುತ ಭಾರತೀಯ ಯುವ ಬ್ಯಾಟರ್​ಗಳಿದ್ದಾರೆ. ಸುಯೇಶ್ ಕೂಡ ಮೂರು ಪಂದ್ಯಗಳನ್ನು ಆಡಿದರು. ಆದರೆ, ಅವರು ಅಂದುಕೊಂಡರೀತಿ ಸಾಗಲಿಲ್ಲ. ಇವರ ಜಾಗದಲ್ಲಿ ಈಗ ಪಟಿದಾರ್​ ಬಂದು ಯಾವುದೇ ಸಂದರ್ಭದಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಅವರು ತಾಳ್ಮೆಯಿಂದ ಆರಾಮವಾಗಿ ಬ್ಯಾಟಿಂಗ್ ನಡೆಸುತ್ತಾರೆ. ಯುವ ಆಟಗಾರರು ಆರೀತಿಯಿಂದ ಇದ್ದರೆ ಒಳ್ಳೆಯದು. ಮಹಿಪಾಲ್ ಮತ್ತೊಬ್ಬ ಪ್ಲೇಯರ್. ಇವರನ್ನು ಪಡೆದುಕೊಂಡಿರುವುದು ನಮ್ಮ ಅದೃಷ್ಟ,” ಎಂದು ಡುಪ್ಲೆಸಿಸ್ ಹೇಳಿದ್ದಾರೆ.

“ದಿನೇಶ್ ಕಾರ್ತಿಕ್ ಆರೀತಿಯಾಗಿ ಸಿಕ್ಸ್ ಸಿಡಿಸುವಾಗ ಅವರನ್ನು ಇನ್ನೂ ಬೇಗ ಕಳುಹಿಸಿ ಇನ್ನಷ್ಟು ಸಮಯ ಬ್ಯಾಟಿಂಗ್​ ಮಾಡಬೇಕಿತ್ತು ಅನಿಸುತ್ತದೆ. ಅವರ ಹೊಡೆತದಲ್ಲಿ ಕ್ಲೀಯರ್ ಇದೆ. ನಿಜ ಹೇಳಬೇಕೆಂದರೆ ನಾನು ದಣಿದಿದ್ದುದರಿಂದ ಔಟಾಗಲು ಪ್ರಯತ್ನಿಸುತ್ತಿದ್ದೆ, ಆಗ ಕಾರ್ತಿಕ್ ಕ್ರೀಸ್​ಗೆ ಬರಲೆಂದು. ಅಥವಾ ನಾನೇ ನಿವೃತ್ತಿ ಪಡೆಯುವ ಬಗ್ಗೆ ಯೋಚಿಸುತ್ತಿದ್ದೆ. ಆದರೆ, ದಿಢೀರ್ ಆಗಿ ವಿಕೆಟ್ ಕಳೆದುಕೊಂಡೆವು. ಕಾರ್ತಿಕ್ ಅದ್ಭುತ ಫಾರ್ಮ್​​ನಲ್ಲಿದ್ದಾರೆ. ಹೆಚ್ಚು ಬ್ಯಾಟರ್​ಗಳು ರನ್ ಗಳಿಸಲು ಕಷ್ಟ ಪಟ್ಟರು. ಕಾರ್ತಿಕ್ ಕ್ಯಾಚ್ ಬಿಟ್ಟಿದ್ದು ನಮಗೆ ವರವಾಯಿತು. ವನಿಂದು ಹಸರಂಗ ಪ್ರದರ್ಶನ ಖುಷಿ ನೀಡಿದೆ. ಅವರು ಒಂದೊಳ್ಳೆ ಪಂದ್ಯಕ್ಕಾಗಿ ಕಾಯುತ್ತಿದ್ದರು. ಒಂದೊಳ್ಳೆ ಲೆಂತ್ ಸಿಗಲು ಎದುರು ನೋಡುತ್ತಿದ್ದರು. ಅದು ಈ ಪಂದ್ಯದಲ್ಲಾಯಿತು. ಅವರು ನಮ್ಮ ಸ್ಪೆಷಲ್ ಬೌಲರ್. ತಂಡ ರನ್ ಗಳಿಸಲು ನನ್ನ ಕೊಡುಗೆ ಕೂಡ ಇತ್ತು ಎಂಬ ಖುಷಿಯಿದೆ,” ಎಂಬುದು ಫಾಫ್ ಮಾತಾಗಿತ್ತು.

ಇದನ್ನೂ ಓದಿ
IPL 2022: ಗೆದ್ದ RCB, ಪ್ಲೇಆಫ್ ರೇಸ್​ನಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್
IPL 2022: ಪ್ಲೇಆಫ್​ಗೇರಲು RCB ಇನ್ನು ಎಷ್ಟು ಪಂದ್ಯ ಗೆಲ್ಲಬೇಕು..?
CSK vs DC Highlights, IPL 2022: ಡೆಲ್ಲಿ ತಂಡದ ಪೆವಿಲಿಯನ್ ಪರೇಡ್; ಚೆನ್ನೈಗೆ 91 ರನ್ ಗೆಲುವು
IPL 2022: ಡೆಲ್ಲಿ ಕ್ಯಾಪಿಟಲ್ಸ್ ಸ್ಟಾರ್ ಆಟಗಾರ ಪೃಥ್ವಿ ಶಾ ಆಸ್ಪತ್ರೆಗೆ ದಾಖಲು

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಬಳಿಕ ಮಾತನಾಡಿದ ವನಿಂದು ಹಸರಂಗ, “ನಾನು ನೇರವಾಗಿ ವಿಕೆಟ್​ಗೆ ಚೆಂಡನ್ನು ಹಾಕುತ್ತೇನೆ. ಹೀಗಾಗಿ ನಾನು ಔಟ್ ಮಾಡಿದ್ದ ಹೆಚ್ಚಿನವು ಎಲ್​ಬಿ ಆಗಿದೆ. ಲೆಗ್ ಸ್ಪಿನ್ನರ್ ವಿಕೆಟ್ ಟೇಕರ್​ಗಳು, ನಾನು ಕೂಡ ಅದನ್ನೇ ಮಾಡಿದೆ. ಯುಜ್ವೇಂದ್ರ ಚಹಲ್ ಕಳೆದ ವರ್ಷ ನನಗೆ ತುಂಬಾ ಸಹಾಯ ಮಾಡಿದ್ದರು. ಈ ಬಾರಿಯ ಐಪಿಎಲ್​​ನಲ್ಲಿ ಐದು ಶ್ರೀಲಂಕಾ ಆಟಗಾರರು ಆಡುತ್ತಿದ್ದಾರೆ. ಅವರೆಲ್ಲ ಉತ್ತಮ ಪ್ರದರ್ಶನ ತೋರುತ್ತಿರುವುದು ಖುಷಿಯ ವಿಚಾರ,” ಎಂದು ಹೇಳಿದ್ದಾರೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.