RR vs RCB: ಪೋಸ್ಟ್ ಮ್ಯಾಚ್ನಲ್ಲಿ ಆರ್ಸಿಬಿ ಸೋಲಿಗೆ ನಾಯಕ ಡುಪ್ಲೆಸಿಸ್ ದೂರಿದ್ದು ಯಾರನ್ನ?
faf du plessis post match presentation: ಐಪಿಎಲ್ 2024 ರಲ್ಲಿ ಬುಧವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಕಂಡು ಟೂರ್ನಿಯಿಂದ ಔಟ್ ಆಗಿದೆ. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಏನು ಹೇಳಿದ್ರು ನೋಡಿ.
ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಪಯಣ ಮುಕ್ತಾಯಗೊಂಡಿದೆ. ಎಲಿಮಿನೇಟರ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಆರ್ಸಿಬಿ ಟೂರ್ನಿಯಿಂದ ಔಟ್ ಆಯಿತು. ಬುಧವಾರ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಬ್ಯಾಟಿಂಗ್ – ಬೌಲಿಂಗ್ನಲ್ಲಿ ದೊಡ್ಡ ಮಟ್ಟದ ಕಮಾಲ್ ಮಾಡಲು ಸಾಧ್ಯವಾಗಲಿಲ್ಲ. 4 ವಿಕೆಟ್ಗಳಿಂದ ಗೆದ್ದು ಬೀಗಿರುವ ರಾಜಸ್ಥಾನ್ ತಂಡ ಕ್ವಾಲಿಫೈಯರ್- 2 ಗೆ ಲಗ್ಗೆಯಿಟ್ಟಿದೆ. ಪಂದ್ಯ ಮುಗಿದ ಬಳಿಕ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮಾತನಾಡಿದ್ದು ಕೆಲ ವಿಚಾರಗಳನ್ನು ಹೇಳಿದ್ದಾರೆ.
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಡುಪ್ಲೆಸಿಸ್, ”ತುಂಬಾ ಇಬ್ಬನಿ ಇತ್ತು, ಹೀಗಾಗಿ ನಾವು ಬ್ಯಾಟ್‌ನಿಂದ ದೊಡ್ಡ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ನಾವು ಉತ್ತಮ ಸ್ಕೋರ್‌ಗಿಂತ 20 ರನ್‌ಗಳ ಹಿನ್ನಡೆಯಲ್ಲಿದ್ದೆವು ಎಂದು ಭಾವಿಸುತ್ತೇನೆ. ರಾಜಸ್ಥಾನ್ ಹುಡುಗರಿಗೆ ಕ್ರೆಡಿಟ್ ಸಲ್ಲಬೇಕು. ಅವರು ನಿಜವಾಗಿಯೂ ತುಂಬಾ ಚೆನ್ನಾಗಿ ಹೋರಾಡಿದರು,” ಎಂದು ಫಾಫ್ ಹೇಳಿದ್ದಾರೆ.
ಐಪಿಎಲ್ನಲ್ಲಿ ಇತಿಹಾಸ ಬರೆದ ಕಿಂಗ್ ಕೊಹ್ಲಿ..!
”ನೀವು ಪಿಚ್ ನೋಡಿದರೆ, ಇದು 180 ರನ್ ಗಳಿಸುವ ಪಿಚ್ ಎಂದು ನೀವು ಹೇಳುತ್ತೀರಿ. ಏಕೆಂದರೆ ಆರಂಭದಲ್ಲಿ ಇದು ಸಾಕಷ್ಟು ನಿಧಾನವಾಗಿತ್ತು. ಆದರೆ ಈ ಋತುವಿನಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್ ಮುಂದೆ ನಮ್ಮ ಸ್ಕೋರ್ ಸಾಕಾಗುವುದಿಲ್ಲ. ನಮ್ಮ ತಂಡದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಒಂದು ಹಂತದಲ್ಲಿ ನಾವು ಕೊನೆಯ ಸ್ಥಾನದಲ್ಲಿದ್ದೆವು. ಆದರೆ, ಸತತವಾಗಿ ಆರು ಪಂದ್ಯಗಳನ್ನು ಗೆದ್ದು ಕಮ್ಬ್ಯಾಕ್ ಮಾಡಿದೆವು. ಇಂದಿನ ಪಂದ್ಯದಲ್ಲಿ ನಾವು ಹೆಚ್ಚುವರಿ 20 ರನ್ ಗಳಿಸಿದ್ದರೆ ಗೆಲುವು ನಮ್ಮ ಪರವಾಗಿ ಆಗುವ ಸಾಧ್ಯತೆ ಇತ್ತು,” ಎಂಬುದು ಫಾಫ್ ಡುಪ್ಲೆಸಿಸ್ ಮಾತು.
ಇದೇವೇಳೆ ಮಾತನಾಡಿದ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್, ”ಕ್ರಿಕೆಟ್ ಮತ್ತು ಜೀವನವು ನಮಗೆ ಕಲಿಸುವ ವಿಷಯವೆಂದರೆ ನಾವು ಕೆಲವು ಒಳ್ಳೆಯ ಮತ್ತು ಕೆಲವು ಕೆಟ್ಟ ಸಮಯವನ್ನು ಹೊಂದಿರುತ್ತೇವೆ ಎಂಬುದು. ಆದರೆ, ಇದರಿಂದ ಮತ್ತೆ ಪುಟಿದೇಳುವ ಧೈರ್ಯ ಹೊಂದಿರಬೇಕು. ಇಂದು ನಾವು ಫೀಲ್ಡಿಂಗ್, ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ನೀಡಿದ ಪ್ರದರ್ಶನ ನನಗೆ ನಿಜವಾಗಿಯೂ ಸಂತೋಷವಾಗಿದೆ”.
ಗೆಲುವಿನ ಓಟ ನಿಲ್ಲಿಸಿದ ಆರ್ಸಿಬಿ ಲೀಗ್ನಿಂದ ಔಟ್
”ಬೌಲರ್‌ಗಳಿಗೆ ಕ್ರೆಡಿಟ್ ಸಲ್ಲಬೇಕು. ಕೋಚ್ ಸಂಗ ಮತ್ತು ಬೌಲಿಂಗ್ ಕೋಚ್ ಶೇನ್ ಬಾಂಡ್ ಅವರಿಗೂ ಕ್ರೆಡಿಟ್ ಸಲ್ಲುತ್ತದೆ. ಅಶ್ವಿನ್, ಬೌಲ್ಟ್, ಪರಾಗ್, ಜುರೆಲ್ ಮತ್ತು ಜೈಸ್ವಾಲ್ ಉತ್ತಮ ಆಟವಾಡಿದರು. ಬಹಳ ಕಡಿಮೆ ಅನುಭವವಿರುವ ಅವರು ಈ ಮಟ್ಟದಲ್ಲಿ ಆಡುತ್ತಿರುವುದು ಅದ್ಭುತವಾಗಿದೆ. ರೋವ್‌ಮನ್ ಪಂದ್ಯವನ್ನು ಚೆನ್ನಾಗಿ ಮುಗಿಸಿದರು. ಮುಂದಿನ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದೇನೆ,” ಎಂದು ಹೇಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ