ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ನರ್, ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ ಇಮ್ರಾನ್ ತಾಹಿರ್ (Imran Tahir) ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ವಿಕೆಟ್ ಪಡೆದಾಗ ಮೈದಾನದಲ್ಲಿ ಓಡಿ ವಿಶೇಷವಾಗಿ ಸಂಭ್ರಮಿಸುವ ಇವರು ಕ್ರಿಕೆಟ್ ಲೋಕದಲ್ಲಿ ಮಾಡಿದ ದಾಖಲೆ ಅಷ್ಟಿಟ್ಟಲ್ಲ. 1979, ಮಾರ್ಚ 27 ರಂದು ಜನಿಸಿದ ಇವರು ಕ್ರಿಕೆಟ್ (Cricket) ಲೋಕ ಕಂಡ ಶ್ರೇಷ್ಠ ಸ್ಪಿನ್ನರ್ ಎಂದರೆ ತಪ್ಪಾಗಲಾರದು. ಟಿ20, ಏಕದಿನ ಮತ್ತು ಟೆಸ್ಟ್ ಹೀಗೆ ಮೂರು ಮಾದರಿಯ ಕ್ರಿಕೆಟ್ನಲ್ಲಿ ತಾಹಿರ್ ದಕ್ಷಿಣ ಆಫ್ರಿಕಾ (South Africa) ತಂಡವನ್ನು ಪ್ರತಿನಿಧಿಸಿದ್ದಾರೆ. 2016ರಲ್ಲಿ ಏಕದಿನ ಪಂದ್ಯವೊಂದರಲ್ಲಿ ಏಳು ವಿಕೆಟ್ಗಳನ್ನು ಪಡೆಯುವ ಮೂಲಕ ದ. ಆಫ್ರಿಕಾ ಪರ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಆಫ್ರಿಕಾ ಪರ ಐಸಿಸಿ ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಏಕೈಕ ಬೌಲರ್ ಕೂಡ ಇವರಾಗಿದ್ದಾರೆ.
ಇಮ್ರಾನ್ ತಾಹಿರ್ ಕ್ರಿಕೆಟ್ ಲೋಕದಲ್ಲಿ ಮಾಡಿದ ಸಾಧನೆ ಬಗ್ಗೆ ಅನೇಕರಿಗೆ ತಿಳಿದಿದೆ. ಆದರೆ, ಅವರ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇದರ ಬಗ್ಗೆ ನೀವು ತಿಳಿದುಕೊಂರೆ ಒಂದು ಕ್ಷಣ ಅಚ್ಚರಿಗೊಳ್ಳುವುದು ಗ್ಯಾರಂಟಿ. ತಾಹಿರ್ ಹುಟ್ಟಿದ್ದು ಲಾಹೊರ್ನಲ್ಲಿ. ಹೆಚ್ಚಿನ ಕ್ರಿಕೆಟಿಗರಂತೆ ಇವರದ್ದು ಕೂಡ ಬಡತನದ ಕುಟುಂಬ. ಕ್ರಿಕೆಟ್ ಮೇಲೆ ಆಸಕ್ತಿ ಇದ್ದರೂ ಹಣವಿಲ್ಲದ ಕಾರಣ ತಮ್ಮ 16ನೇ ವಯಸ್ಸಿಗೆ ಪಾಕಿಸ್ತಾನದಲ್ಲೇ ಶಾಪಿಂಗ್ ಮಾಲ್ ಒಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಸೇರಿಕೊಳ್ಳುತ್ತಾರೆ. ಆದರೆ, ಕ್ರಿಕೆಟರ್ ಆಗಬೇಕೆಂಬ ಆಸೆಯನ್ನು ಬಿಡದೆ ಬಿಡುವಿನ ಸಮಯದಲ್ಲಿ ಸತತವಾಗಿ ಅಭ್ಯಾಸ ನಡೆಸುತ್ತಿದ್ದರು.
ಇವರ ಈ ಛಲದಿಂದಲೇ ಪಾಕಿಸ್ತಾನ ಅಂಡರ್- 19 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುತ್ತಾರೆ. ಆದರೆ, ಇಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡಬೇಕಾಯಿತು. ಕೊನೆಗೂ ಒಂದು ಅವಕಾಶ ಸಿಕ್ಕಿ ಪಾಕ್ ಅಂಡರ್-19 ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸುತ್ತಾರೆ. ಇದು ತಾಹಿರ್ ಜೀವನದ ಟರ್ನಿಂಗ್ ಪಾಯಿಂಟ್ ಎಂದೇ ಹೇಳಬಹುದು. ಯಾಕೆಂದರೆ ಆಫ್ರಿಕಾದಲ್ಲಿ ತಾಹಿರ್ಗೆ ಸುಮಯ್ಯ ದಿಲ್ದರ್ ಎಂಬ ಯುವತಿಯ ಪರಿಚಯ ಆಗುತ್ತಿದೆ. ಇವರು ಭಾರತೀಯ ಮೂಲದವರಾಗಿದ್ದರೂ ಆಫ್ರಿಕಾದಲ್ಲಿ ನೆಲೆಸಿ ಪ್ರಸಿದ್ಧ ಮಾಡೆಲ್ ಆಗಿದ್ದರು.
IPL 2022: ಆ ದಿನ ಮೂರು ಘಟನೆ ನಡೆಯಿತು: ಏಪ್ರಿಲ್ 30, 2022 ದಿನ ನೀವೆಂದಿಗೂ ಮರೆಯಲು ಸಾಧ್ಯವಿಲ್ಲ
ಇವರಿಬ್ಬರ ಬೇಟಿಯಾಗಿದ್ದು 1988 ರಲ್ಲಿ. ಸುಮಯ್ಯ ಅವರನ್ನು ಮೊದಲ ಸಲ ನೋಡಿದಾಗಲೆ ತಾಹಿರ್ ಇವರ ಪ್ರೇಮದ ಬಲೆಗೆ ಸಿಲುಕಿದರು. ಬಿಡುವಿದ್ದಾಗ ಇಬ್ಬರೂ ಒಂದಿಷ್ಟು ಸಮಯ ಹರಟೆ ಕೂಡ ಹೊಡೆಯುತ್ತಿದ್ದರು. ತಾಹಿರ್ ಪಾಕಿಸ್ತಾನಕ್ಕೆ ಹಿಂತಿರುಗಿದ ನಂತರ ಸುಮಯ್ಯ ಅವರನ್ನು ತುಂಬಾನೆ ಮಿಸ್ ಮಾಡಿಕೊಳ್ಳುತ್ತಾರೆ. ತಾಹಿರ್ಗೆ ಮೊದಲ ನೋಟದಲ್ಲೇ ಲವ್ ಆಗಿದ್ದರೆ ಸುಮಯ್ಯ ಮೊದಲಿಗೆ ಸ್ನೇಹದಿಂದಲೇ ಇದ್ದರು. ಆದರೆ, ಸುಮಯ್ಯ ಅವರಿಗೂ ಪ್ರೀತಿ ಹುಟ್ಟಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಕೆಲ ದಿನಗಳ ಬಳಿಕ ಇವರಿಬ್ಬರು ಡೇಟಿಂಗ್ ಮಾಡಲು ಶುರು ಮಾಡುತ್ತಾರೆ. ಕೆಲ ವರ್ಷಗಳ ಕಾಲ ಹೀಗೆ ಪ್ರೀತಿಯಲ್ಲಿದ್ದು ನಂತರ ಒಂದು ದಿನ ತಾಹಿರ್ ಅವರು ಸುಮಯ್ಯ ಬಳಿ ‘ನಾವು ಮದುವೆ ಆಗೋಣ’ ಎಂಬ ಮಾತು ಹೇಳುತ್ತಾರೆ. ಇಲ್ಲೇ ಇರುವುದು ಮತ್ತೊಂದು ಟ್ವಿಸ್ಟ್.
ಅತ್ತ ತಾಹಿರ್ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಸ್ಥಾನ ಭದ್ರ ಪಡಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಇತ್ತ ಸುಮಯ್ಯ, ‘ನಾನು ಯಾವುದೇ ಕಾರಣಕ್ಕೂ ತನ್ನ ತಾಯಿನಾಡು ದಕ್ಷಿಣ ಆಫ್ರಿಕಾವನ್ನು ಬಿಟ್ಟು ಬರುವುದೇ ಇಲ್ಲ’ ಎಂದು ಖಡಕ್ ಆಗಿ ಹೇಳಿದ್ದರು. ಈ ಸಂದರ್ಭ ಇವರಿಬ್ಬರ ನಡುವೆ ಸಾಕಷ್ಟು ಮಾತುಕತೆಗಳು ನಡೆದವಂತೆ. ಅಂತಿಮವಾಗಿ ತಾಹಿರ್ ತಮ್ಮ ಪ್ರೀತಿಗಾಗಿ ಪಾಕಿಸ್ತಾನ ದೇಶವನ್ನ ಬಿಟ್ಟು ಬರಲು ನಿರ್ಧರಿಸಿದರು. ಪಾಕಿಸ್ತಾನದಿಂದ ಕೇವಲ ತನ್ನ ವೈಯಕ್ತಿಕ ಬದುಕನ್ನು ಮಾತ್ರವಲ್ಲದೆ ತನ್ನ ಕ್ರಿಕೆಟ್ ಜೀವನವನ್ನೂ ಬಿಟ್ಟು ದಕ್ಷಿಣ ಆಫ್ರಿಕಾಕ್ಕೆ ಬಂದರು.
2006 ರಲ್ಲಿ ತಾಹಿರ್ ಹರಿಣಗಳ ನಾಡಿಗೆ ಬಂದು 2007 ರಲ್ಲಿ ಸುಮಯ್ಯ ದಿಲ್ದರ್ ಜೊತೆ ಮದುವೆಯಾಗುತ್ತಾರೆ. ಬಳಿಕ ತಾಹಿರ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಸ್ಥಾನಕ್ಕಾಗಿ ಮತ್ತೊಂದು ಅಗ್ನಿ ಪರೀಕ್ಷೆಗೆ ಇಳಿಯುತ್ತಾರೆ. ಸುಮಯ್ಯ ತಮ್ಮ ಮಾಡೆಲಿಂಗ್ ಕ್ಷೇತ್ರವನ್ನು ಬಿಟ್ಟು ಗಂಡನಿಗೆ ಸಾಥ್ ನೀಡುತ್ತಾರೆ. ಆದರೆ, ಇದು ಸುಲಭದ್ದಾಗಿರಲಿಲ್ಲ. ಯಾಕೆಂದರೆ ಅದಾಗಲೆ ತಾಹಿರ್ ಪಾಕ್ ಅಂಡರ್-19 ತಂಡದ ಪರ ಆಡಿದ್ದರು. ಆದರೂ ಸತತ ಪ್ರಯತ್ನ ಪಟ್ಟು 3 ವರ್ಷಗಳ ನಂತರ ದ. ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆದರು. ನಂತರ ನಡೆದಿದ್ದು ಇತಿಹಾಸ!
ದಕ್ಷಿಣ ಆಫ್ರಿಕಾ ಜೆರ್ಸಿ ತೊಟ್ಟು ತಾಹಿರ್ ದಾಖಲೆ ಮೇಲೆ ದಾಖಲೆ ಬರೆದರು. ವಿಶ್ವದ ಅತ್ಯಂತ ಶ್ರೇಷ್ಠ ಸ್ಪಿನ್ನರ್ ಎನಿಸಿಕೊಂಡರು. ಸಾಮಾನ್ಯವಾಗಿ ಕ್ರಿಕೆಟ್ನಲ್ಲಿ ಈರೀತಿಯ ಅವಕಾಶ ಸಿಗುವುದು ತೀರಾ ಕಡಿಮೆ. ಆದರೆ, ಇವರು ಪಟ್ಟ ಶ್ರಮಕ್ಕೆ, ತ್ಯಾಗಕ್ಕೆ, ಪ್ರೀತಿಯ ಜೊತೆ ಕ್ರಿಕೆಟ್ ಅನ್ನು ಕೂಡ ಪಡೆದುಕೊಂಡರು. ಮದುವೆಯಾಗಿ ಕೆಲ ವರ್ಷಗಳ ನಂತರ ಇವರಿಗೆ ಗಂಡು ಮಗು ಜನಿಸುತ್ತದೆ. ಅವರಿಗೆ ಗಿಬ್ರಾನ್ ಎಂದ ಹೆಸರಿಡುತ್ತಾರೆ. ಸದ್ಯ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿರುವ ಇವರು ತಮ್ಮ ಕುಟುಂಬದ ಜೊತೆ ಸಂತಸದ ಕ್ಷಣವನ್ನು ಕಳೆಯುತ್ತಿದ್ದಾರೆ.
ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ