AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಆ ದಿನ ಮೂರು ಘಟನೆ ನಡೆಯಿತು: ಏಪ್ರಿಲ್ 30, 2022 ದಿನ ನೀವೆಂದಿಗೂ ಮರೆಯಲು ಸಾಧ್ಯವಿಲ್ಲ

ಐಪಿಎಲ್ 2022 ರಲ್ಲಿ ಎಲ್ಲ ಅಭಿಮಾನಿಗಳಿಗೆ ಬೇಸರ ತಂದಿರುವ ವಿಚಾರ ಎಂದರೆ ವಿರಾಟ್ ಕೊಹ್ಲಿ ಫಾರ್ಮ್, ಮುಂಬೈ ಇಂಡಿಯನ್ಸ್ ತಂಡದ ಸತತ ಸೋಲು ಹಾಗೂ ಎಂಎಸ್ ಧೋನಿ ನಾಯಕತ್ವದಲ್ಲಿ ಇಲ್ಲದಿರುವುದು. ಆದರೆ, ಶನಿವಾರ ಈ ಎಲ್ಲ ಚಿಂತೆಗೆ ಒಂದು ಅಚ್ಚುಕಟ್ಟಾದ ಅಂತ್ಯ ದಕ್ಕಿತು.

IPL 2022: ಆ ದಿನ ಮೂರು ಘಟನೆ ನಡೆಯಿತು: ಏಪ್ರಿಲ್ 30, 2022 ದಿನ ನೀವೆಂದಿಗೂ ಮರೆಯಲು ಸಾಧ್ಯವಿಲ್ಲ
Virat Kohli Rohit Sharma and MS Dhoni
TV9 Web
| Updated By: Vinay Bhat|

Updated on: May 01, 2022 | 11:13 AM

Share

ಕ್ರಿಕೆಟ್ ಅಭಿಮಾನಿಗಳಿಗೆ ಏಪ್ರಿಲ್ 30, 2022 ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ದಿನ ಒಂದಲ್ಲ ಎರಡಲ್ಲ ಮೂರು ವಿಶೇಷ ಘಟನೆ ನಡೆಯಿತು. ಇದರಿಂದ ಕ್ರೀಡಾಭಿಮಾನಿಗಳಂತು ಸಂತಸದ ಅಲೆಯಲ್ಲಿ ತೇಲಾಡಿದರು. ಹೌದು, ಸದ್ಯ ಸಾಗುತ್ತಿರುವ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಎಲ್ಲ ಅಭಿಮಾನಿಗಳಿಗೆ ಬೇಸರ ತಂದಿರುವ ವಿಚಾರ ಎಂದರೆ ವಿರಾಟ್ ಕೊಹ್ಲಿ (Virat Kohli) ಫಾರ್ಮ್, ಮುಂಬೈ ಇಂಡಿಯನ್ಸ್ (Mumbai Indians) ತಂಡದ ಸತತ ಸೋಲು ಹಾಗೂ ಎಂಎಸ್ ಧೋನಿ (MS Dhoni) ನಾಯಕತ್ವದಲ್ಲಿ ಇಲ್ಲದಿರುವುದು. ಆದರೆ, ಶನಿವಾರ ಈ ಎಲ್ಲ ಚಿಂತೆಗೆ ಒಂದು ಅಚ್ಚುಕಟ್ಟಾದ ಅಂತ್ಯ ದಕ್ಕಿತು. ಐಪಿಎಲ್ 2022ರ 43ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಸೋತ ನೋವಿಗಿಂತ ಅಭಿಮಾನಿಗಳಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ಫಾರ್ಮ್​ಗೆ ಮರಳಿದರು ಎಂಬ ಖುಷಿಯೇ ಒಂದು ಪಟ್ಟು ಹೆಚ್ಚಿತ್ತು.

ಸತತ ಕಳಪೆ ಫಾರ್ಮ್​ನಿಂದ ಕಂಗೆಟ್ಟಿದ್ದ ವಿರಾಟ್ ಕೊಹ್ಲಿಗೆ ಈ ಪಂದ್ಯ ಮಹತ್ವದ್ದಾಗಿತ್ತು. ಮೊದಲ 9 ಪಂದ್ಯಗಳಲ್ಲಿ ಕೇವಲ 128 ರನ್ ಗಳಿಸಿದ್ದ ಕೊಹ್ಲಿ ಗರಿಷ್ಟ 48 ರನ್ ಗಳಿಸಿ ಒಂದೇ ಒಂದು ಅರ್ಧ ಶತಕವನ್ನೂ ಬಾರಿಸಲಾಗದೆ ಮಂಕಾಗಿದ್ದರು. ಅದರಲ್ಲಿಯೂ ಎರಡು ಪಂದ್ಯಗಳಲ್ಲಿ ಡಕ್ ಔಟ್ ಆಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಈ ಟೀಕೆಗಳಿಗೆಲ್ಲಾ ಬ್ಯಾಟ್ ಮೂಲಕ ಉತ್ತರಿಸಿರುವ ವಿರಾಟ್ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಕೊನೆಗೂ ಕಿಂಗ್ ಕೊಹ್ಲಿ ಲಯಕ್ಕೆ ಮರಳಿದ್ದಾರೆ. ಜಿಟಿ ವಿರುದ್ಧ 53 ಎಸೆತಗಳನ್ನು ಎದುರಿಸಿದ ಅವರು ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 58 ರನ್ ಗಳಿಸಿದರು. ಕೊಹ್ಲಿ ಆಟ ಕಂಡು ನಾಯಕ ಫಾಫ್ ಡುಪ್ಲೆಸಿಸ್ ಕೂಡ ಖಷಿ ಆಗದ್ದು ಹಾಡಿಹೊಗಳಿದ್ದಾರೆ.

ಇನ್ನು ಸತತ ಎಂಟು ಸೋಲುಗಳ ಮುಖಭಂಗಕ್ಕೆ ಒಳಗಾಗಿದ್ದ ರೋಹಿತ್ ಶರ್ಮಾ ಬಳಗವು ಇದೇ ಶನಿರದಂದು ಕೊನೆಗೂ ಗೆಲುವಿನ ನಿಟ್ಟುಸಿರು ಬಿಟ್ಟಿತು. ಈ ಮೂಲಕ ಅಂಕಪಟ್ಟಿಯಲ್ಲಿ ಖಾತೆ ತೆರೆದುಕೊಂಡಿದೆ. ಅಲ್ಲದೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮುಂಬೈ ನಾಯಕ ರೋಹಿತ್ ಶರ್ಮಾಗೆ ಗೆಲುವಿನ ಉಡುಗೊರೆ ಲಭಿಸಿತು. ಸೂರ್ಯಕುಮಾರ್ ಯಾದವ್(51) ಆಕರ್ಷಕ ಅರ್ಧಶತಕ ಸಿಡಿಸಿದರೆ. ತಿಲಕ್ ವರ್ಮ(35) ಜವಾಬ್ದಾರಿಯುತ ಆಟವಾಡಿದರು. ಎಚ್ಚರಿಕೆಯ ಬ್ಯಾಟಿಂಗ್ ಮೂಲಕ ರನ್ ಕಲೆಹಾಕುತ್ತಾ ಸಾಗಿದ ಈ ಜೋಡಿ 3ನೇ ವಿಕೆಟ್ ಗೆ 81 ರನ್ ಗಳ ಅತ್ಯುತ್ತಮ ಜೊತೆಯಾಟವಾಡಿ ತಂಡದ ಗೆಲುವಿನ ಹಾದಿಯನ್ನ ಸುಗಮಗೊಳಿಸಿದರು.

SRH vs CSK: ಐಪಿಎಲ್​​ನಲ್ಲಿಂದು ಎರಡು ಪಂದ್ಯ: ಎಸ್​ಆರ್​​ಹೆಚ್-ಸಿಎಸ್​ಕೆ ಪಂದ್ಯದ ಮೇಲೆ ಎಲ್ಲರ ಕಣ್ಣು

ಶನಿವಾರ ನಡೆದ ಮತ್ತೊಂದು ಮಹತ್ವದ ಬೆಳವಣಿಗೆ ಎಂದರೆ ಚೆನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದಿಂದ ರವೀಂದ್ರ ಜಡೇಜಾ ಕೆಳಗಿಳಿದು ಕ್ಯಾಪ್ಟನ್ ಪಟ್ಟವನ್ನು ಮತ್ತೆ ಎಂಎಸ್ ಧೋನಿಗೆ ನೀಡಿರುವುದು. ಈ ಮೂಲಕ ಕೂಲ್ ಕ್ಯಾಪ್ಟನ್ ಮತ್ತೆ ಕ್ಯಾಪ್ಟನ್ ಕ್ಯಾಪ್ ತೊಟ್ಟಿದ್ದಾರೆ. ರವೀಂದ್ರ ಜಡೇಜಾ ಸಿಎಸ್ ಕೆ ತಂಡದ ಕ್ಯಾಪ್ಟನ್ ಹುದ್ದೆಯನ್ನು ತೊರೆದು, ಪಂದ್ಯದ ಕಡೆಗೆ ಹೆಚ್ಚಿನ ಗಮನ ಹರಿಸಲು ನಿರ್ಧರಿಸಿದ್ದಾರೆ. ಇದರಿಂದಾಗಿ ತಂಡವನ್ನು ಮುನ್ನಡೆಸುವಂತೆ ಮಹೇಂದ್ರ ಸಿಂಗ್ ಅವರನ್ನು ಕೇಳಿಕೊಂಡಿದ್ದಾರೆ. ಈ ಮನವಿಯನ್ನು ಮಹೇಂದ್ರ ಸಿಂಗ್ ಧೋನಿ ಒಪ್ಪಿಕೊಂಡಿದ್ದು, ಜಡೇಜಾ ಪಂದ್ಯದ ಕಡೆಗೆ ಗಮನ ಹರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿ ಅಭಿಮಾನಿಗಳಿಗೆ ಖುಷಿ ನೀಡಿತ್ತು.

ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ