IPL 2022: ಹೀಗಾದ್ರೆ ಮುಂಬೈ ಇಂಡಿಯನ್ಸ್ ಕೂಡ ಪ್ಲೇಆಫ್ ಆಡಬಹುದು..!
Mumbai Indians : ಮುಂಬೈ ಇಂಡಿಯನ್ಸ್ (MI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಕೀರಾನ್ ಪೊಲಾರ್ಡ್, ಜಸ್ಪ್ರೀತ್ ಬುಮ್ರಾ, ಮುರುಗನ್ ಅಶ್ವಿನ್, ಬಾಸಿಲ್ ಥಂಪಿ, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಂಡೆ, ಸಂಜಯ್ ಯಾದವ್, ರಮಣ್‌ದೀಪ್ ಸಿಂಗ್, ಆರ್ಯನ್ ಜುಯಲ್, ಅರ್ಜುನ್ ತೆಂಡೂಲ್ಕರ್, ತಿಲಕ್ ವರ್ಮಾ.
IPL 2022: ಅಂತೂ ಇಂತೂ ಮುಂಬೈ ಇಂಡಿಯನ್ಸ್ (Mumbai Indians) ತಂಡವು ಮೊದಲ ಜಯ ಸಾಧಿಸಿದೆ. ಅದು ಕೂಡ ರಾಜಸ್ಥಾನ್ ರಾಯಲ್ಸ್ (Rajastan Royals) ಎಂಬ ಬಲಿಷ್ಠ ತಂಡದ ಎದುರು ಎಂಬುದು ವಿಶೇಷ. ಅಂದರೆ ಆಡಿರುವ 9 ಪಂದ್ಯಗಳಲ್ಲಿ ಮೊದಲ ಗೆಲುವನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ (IPL 2022 Points Table) ಗೆಲುವಿನ ಖಾತೆ ತೆರೆದಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಇನ್ನೂ 5 ಪಂದ್ಯಗಳು ಉಳಿದಿದ್ದು, ಹೀಗಾಗಿಯೇ ಪ್ಲೇಆಫ್ಗೆ ಪ್ರವೇಶಿಸುವ ಅವಕಾಶ ಇದೆಯಾ ಎಂಬ ಚರ್ಚೆಗಳು ಶುರುವಾಗಿದೆ. ಈಗಾಗಲೇ 8 ಪಂದ್ಯಗಳನ್ನು ಸೋತಿರುವ ಮುಂಬೈಗೆ ಅದೃಷ್ಟ ಕೈ ಹಿಡಿದರೆ ಪ್ಲೇಆಫ್ ಆಡುವ ಅವಕಾಶ ದೊರೆಯಬಹುದು. ಏಕೆಂದರೆ ಇದುವರೆಗೆ ಯಾವುದೇ ತಂಡ ಪ್ಲೇಆಫ್ಗೆ ಎಂಟ್ರಿ ಕೊಟ್ಟಿಲ್ಲ. ಹಾಗೆಯೇ ಯಾವುದೇ ತಂಡ ಪ್ಲೇಆಫ್ ರೇಸ್ನಿಂದ ಹೊರಬಿದ್ದಿಲ್ಲ ಎಂಬುದನ್ನು ಗಮನಿಸಬೇಕು.
ಈಗಾಗಲೇ ಗುಜರಾತ್ ಟೈಟನ್ಸ್ ತಂಡ 16 ಪಾಯಿಂಟ್ ಗಳಿಸಿ ಅಗ್ರಸ್ಥಾನದಲ್ಲಿದೆ. ಗುಜರಾತ್ ತಂಡವು ಪ್ಲೇಆಫ್ ಅನ್ನು ಖಚಿತಪಡಿಸಿಕೊಳ್ಳಲು ಇನ್ನೂ ಕೂಡ ಒಂದು ಪಂದ್ಯ ಗೆಲ್ಲಬೇಕಿದೆ. ಹಾಗೆಯೇ ಎರಡನೇ ಸ್ಥಾನದಲ್ಲಿ 12 ಪಾಯಿಂಟ್ಸ್ ಹೊಂದಿರುವ ರಾಜಸ್ಥಾನ್ ರಾಯಲ್ಸ್, 3ನೇ ಸ್ಥಾನದಲ್ಲಿ 12 ಅಂಕಪಡೆದಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿವೆ. ಅಂದರೆ ಈ ಮೂರು ತಂಡಗಳು ಮುಂದಿನ 3 ಪಂದ್ಯಗಳಲ್ಲಿ ತನ್ನ ಪ್ಲೇಆಫ್ ಎಂಟ್ರಿಯನ್ನು ಖಚಿತಪಡಿಸಿಕೊಳ್ಳಬಹುದು. ಅದರಲ್ಲೂ 16 ಪಾಯಿಂಟ್ಸ್ ಕಲೆಹಾಕಿದ್ರೆ ಪ್ಲೇಆಫ್ ರೇಸ್ನಲ್ಲಿ ಸೇಫ್ ಆಗಿ ಉಳಿಯಬಹುದು. ಹಾಗೆಯೇ 18 ಪಾಯಿಂಟ್ಸ್ ಪಡೆದರೆ ಪ್ಲೇಆಫ್ ಆಡುವುದು ಕನ್ಫರ್ಮ್ ಆಗಲಿದೆ.
ಹಾಗಾಗಿ ಈ ಮೂರು ತಂಡಗಳು ಪ್ಲೇಆಫ್ ರೇಸ್ನಲ್ಲಿ ಮುಂಚೂಣಿಯಲ್ಲಿದೆ ಎಂದೇ ಹೇಳಬಹುದು. ಆದರೆ ಉಳಿದ ತಂಡಗಳು ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದೆ. ಇಲ್ಲಿ ಎಸ್ಆರ್ಹೆಚ್, ಆರ್ಸಿಬಿ 10 ಪಾಯಿಂಟ್ಸ್ ಪಡೆದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ 8 ಅಂಕ ಪಡೆದುಕೊಂಡಿದೆ. ಹಾಗೆಯೇ ಕೆಕೆಆರ್ 6 ಮತ್ತು ಸಿಎಸ್ಕೆ 4 ಪಾಯಿಂಟ್ಸ್ ಹೊಂದಿದೆ. ಅಂದರೆ ಈ ತಂಡಗಳು ಪ್ಲೇಆಫ್ ರೇಸ್ನಲ್ಲಿ ಉಳಿಯಬೇಕಿದ್ರೆ ಇನ್ನು ಎರಡ್ಮೂರು ಪಂದ್ಯಗಳನ್ನು ಗೆಲ್ಲಬೇಕಿದೆ. ಹೀಗೆ ಮುಂದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ 4 ತಂಡಗಳು 14 ಅಥವಾ ಅದಕ್ಕಿಂತ ಹೆಚ್ಚಿನ ಪಾಯಿಂಟ್ಸ್ ಪಡೆದರೆ ಮಾತ್ರ ಯಾರು ಪ್ಲೇಆಫ್ ಆಡಲಿದೆ ಎಂಬುದರ ಸ್ಪಷ್ಟ ಚಿತ್ರಣ ಸಿಗಲಿದೆ.
ಒಂದು ವೇಳೆ ಇಡೀ ಟೂರ್ನಿ ನಾಟಕೀಯ ತಿರುವುಗಳಿಗೆ ಸಾಕ್ಷಿಯಾಗಿ ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆ ಪಾಯಿಂಟ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ತಂಡ 12 ಪಾಯಿಂಟ್ ಪಡೆದರೆ, ಮುಂಬೈ ಇಂಡಿಯನ್ಸ್ ಉಳಿದ 5 ಪಂದ್ಯಗಳನ್ನು ಗೆದ್ದು ನೆಟ್ ರನ್ ರೇಟ್ ಮೂಲಕ ಪ್ಲೇಆಫ್ಗೆ ಪ್ರವೇಶಿಸಬಹುದು. ಅಂದರೆ ಇಲ್ಲಿ ನೆಟ್ ರನ್ ರೇಟ್ ಮುಖ್ಯವಾಗುತ್ತದೆ. ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ತಂಡ 12 ಪಾಯಿಂಟ್ಸ್ ಗಳಿಸಿದರೆ, ಮುಂಬೈ ಇಂಡಿಯನ್ಸ್ ಎಲ್ಲಾ ಪಂದ್ಯಗಳನ್ನು ಗೆದ್ದು ಉತ್ತಮ ನೆಟ್ ರನ್ ರೇಟ್ ಹೊಂದಿದ್ದರೆ ಪ್ಲೇಆಫ್ ಆಡುವ ಅವಕಾಶ ದೊರೆಯಲಿದೆ. ಇದು ಕಷ್ಟಸಾಧ್ಯ ಎಂದು ಹೇಳುವುದಾದರೆ, ಇದಕ್ಕೂ ಮುನ್ನ 12 ಪಾಯಿಂಟ್ಸ್ ಪಡೆದ ತಂಡವೊಂದು ಐಪಿಎಲ್ನಲ್ಲಿ ಪ್ಲೇಆಫ್ ಆಡಿದ ಇತಿಹಾಸವಿದೆ.
2019 ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್, ಸಿಎಸ್ಕೆ, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು 18 ಪಾಯಿಂಟ್ಸ್ಗಳೊಂದಿಗೆ ಪ್ಲೇಆಫ್ಗೆ ಎಂಟ್ರಿ ಕೊಟ್ಟಿತ್ತು. ಆದರೆ ನಾಲ್ಕನೇ ತಂಡವಾಗಿ ಸನ್ರೈಸರ್ಸ್ ಹೈದರಾಬಾದ್ ತಂಡವು ಕೇವಲ 12 ಪಾಯಿಂಟ್ಸ್ಗಳೊಂದಿಗೆ ಪ್ಲೇಆಫ್ ಪ್ರವೇಶಿಸಿತ್ತು. ಇಲ್ಲಿ ಕೆಕೆಆರ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು 12 ಪಾಯಿಂಟ್ಸ್ ಪಡೆದಿದ್ದರೂ ನೆಟ್ ರನ್ ರೇಟ್ ಮೂಲಕ ಎಸ್ಆರ್ಹೆಚ್ ಪ್ಲೇಆಫ್ ಅವಕಾಶಗಿಟ್ಟಿಸಿಕೊಂಡಿತ್ತು. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಅದೃಷ್ಟ ಕೈ ಹಿಡಿದರೆ ಎಸ್ಆರ್ಹೆಚ್ ತಂಡದಂತೆ ಕೇವಲ 6 ಪಂದ್ಯ ಗೆದ್ದು ಪ್ಲೇಆಫ್ಗೆ ಪ್ರವೇಶಿಸಬಹುದು.
ಒಂದು ವೇಳೆ ಇನ್ನು ಮೂರು ತಂಡಗಳು 14 ಪಾಯಿಂಟ್ಸ್ ಪಡೆದರೆ ಮುಂಬೈ ಇಂಡಿಯನ್ಸ್ ತಂಡವು ಪ್ಲೇಆಫ್ ರೇಸ್ನಿಂದ ಅಧಿಕೃತವಾಗಿ ಹೊರಬೀಳಲಿದೆ. ಏಕೆಂದರೆ ಈಗಾಗಲೇ ಗುಜರಾತ್ ಟೈಟನ್ಸ್ 16 ಪಾಯಿಂಟ್ಸ್ ಪಡೆದಿದ್ದು, ಇನ್ನುಳಿದ ಮೂರು ತಂಡಗಳು 14 ಪಾಯಿಂಟ್ಸ್ನೊಂದಿಗೆ ಉಳಿದ 3 ಸ್ಥಾನಗಳಿಗೆ ಪೈಪೋಟಿ ನಡೆಸಲಿದೆ. ಹೀಗಾಗಿ ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದು 12 ಪಾಯಿಂಟ್ಸ್ ಪಡೆದರೂ ಮುಂಬೈಗೆ ಅವಕಾಶ ಇರುವುದಿಲ್ಲ. ಇಲ್ಲಿ ನಾಲ್ಕನೇ ಸ್ಥಾನ ಪಡೆಯುವ ತಂಡವು 12 ಪಾಯಿಂಟ್ಸ್ ಪಡೆದರೆ ಮಾತ್ರ ಮುಂಬೈ ಇಂಡಿಯನ್ಸ್ ಎಲ್ಲಾ ಮ್ಯಾಚ್ ಅನ್ನು ಗೆದ್ದು ರನ್ ರೇಟ್ ಮೂಲಕ ಪ್ಲೇಆಫ್ಗೆ ಎಂಟ್ರಿ ಕೊಡಬಹುದು. ಹೀಗಾಗಿ 2019 ರಲ್ಲಿ ನಡೆದಂತೆ ಮತ್ತೊಮ್ಮೆ ಐಪಿಎಲ್ ಇತಿಹಾಸದಲ್ಲಿ ತಂಡವೊಂದು 6 ಮ್ಯಾಚ್ ಗೆದ್ದು ಪ್ಲೇಆಫ್ ಆಡಲಿದೆಯಾ ಕಾದು ನೋಡಬೇಕಿದೆ.
ಮುಂಬೈ ಇಂಡಿಯನ್ಸ್ (MI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಕೀರಾನ್ ಪೊಲಾರ್ಡ್, ಜಸ್ಪ್ರೀತ್ ಬುಮ್ರಾ, ಮುರುಗನ್ ಅಶ್ವಿನ್, ಬಾಸಿಲ್ ಥಂಪಿ, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಂಡೆ, ಸಂಜಯ್ ಯಾದವ್, ರಮಣ್‌ದೀಪ್ ಸಿಂಗ್, ಆರ್ಯನ್ ಜುಯಲ್, ಅರ್ಜುನ್ ತೆಂಡೂಲ್ಕರ್, ತಿಲಕ್ ವರ್ಮಾ, ರಾಹುಲ್ ಬುಮ್ರಾ, ಹೃತಿಕ್ ಶೋಕೀನ್ , ಅರ್ಷದ್ ಖಾನ್, ಟೈಮಲ್ ಮಿಲ್ಸ್, ಜೋಫ್ರಾ ಆರ್ಚರ್, ಫ್ಯಾಬಿಯನ್ ಅಲೆನ್, ಡೇನಿಯಲ್ ಸ್ಯಾಮ್ಸ್, ಅನ್ಮೋಲ್ಪ್ರೀತ್ ಸಿಂಗ್, ಟಿಮ್ ಡೇವಿಡ್, ರಿಲೆ ಮೆರೆಡಿತ್.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:57 pm, Sun, 1 May 22