IPL 2022: ಹಳೆಯ ದಾಖಲೆ ಉಡೀಸ್ ಮಾಡಿದ ಯುವ ವೇಗಿ: ಹೊಸ ಇತಿಹಾಸ ಬರೆದ ಉಮ್ರಾನ್

| Updated By: ಝಾಹಿರ್ ಯೂಸುಫ್

Updated on: Apr 09, 2022 | 8:43 PM

Umran Malik Fastest Ball in IPL: ಉಮ್ರಾನ್ ಮಲಿಕ್ ಕಳೆದ ಐಪಿಎಲ್ ಸೀಸನ್​ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಟಿ ನಟರಾಜನ್ ಕೊರೋನಾ ಪಾಸಿಟಿವ್ ಆದ ತಂಡದಲ್ಲಿ ಸ್ಥಾನ ಪಡೆದಿದ್ದರು.

IPL 2022: ಹಳೆಯ ದಾಖಲೆ ಉಡೀಸ್ ಮಾಡಿದ ಯುವ ವೇಗಿ: ಹೊಸ ಇತಿಹಾಸ ಬರೆದ ಉಮ್ರಾನ್
Umran Malik
Follow us on

ಐಪಿಎಲ್​ ಸೀಸನ್ 15 ರ (IPL 2022) 17ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡದ ಯುವ ವೇಗಿ ಉಮ್ರಾನ್ ಮಲಿಕ್ (Umran Malik ) ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ತಮ್ಮ ಎಸೆತಗಳ ಮೂಲಕ ಎಂಬುದು ವಿಶೇಷ. ಸಿಎಸ್​ಕೆ ವಿರುದ್ದ ನಡೆದ ಈ ಪಂದ್ಯದಲ್ಲಿ 3 ಓವರ್ ಬೌಲಿಂಗ್ ಮಾಡಿದ್ದ ಉಮ್ರಾನ್ 29 ರನ್​ ನೀಡಿ ದುಬಾರಿ ಎನಿಸಿಕೊಂಡಿದ್ದರು. ಇದಾಗ್ಯೂ ಅದ್ಭುತ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ 150 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಮೂಲಕ ಐಪಿಎಲ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಈ ಪಂದ್ಯದ 9ನೇ ಓವರ್​ನಲ್ಲಿ ಮೊದಲ ಎಸೆತವನ್ನು ಉಮ್ರಾನ್ ಮಲಿಕ್ 153.1 ಕಿ.ಮೀ ವೇಗದಲ್ಲಿ ಎಸೆದಿದ್ದರು. ವಿಶೇಷ ಎಂದರೆ ಐಪಿಎಲ್​ ಇತಿಹಾಸದಲ್ಲಿ ಇಷ್ಟೊಂದು ವೇಗದಲ್ಲಿ ಯಾವುದೇ ಭಾರತೀಯ ಬೌಲರ್ ಚೆಂಡೆಸೆದಿಲ್ಲ. ಅಂದರೆ ಐಪಿಎಲ್​ನಲ್ಲಿ ಅತ್ಯಂತ ವೇಗವಾಗಿ ಬೌಲ್ ಮಾಡಿದ ಭಾರತೀಯ ಬೌಲರ್ ಎಂಬ ದಾಖಲೆ ಇದೀಗ ಉಮ್ರಾನ್ ಮಲಿಕ್ ಪಾಲಾಗಿದೆ. ಈ ಹಿಂದೆ ಈ ದಾಖಲೆ 152.85 ಕಿ.ಮೀ ವೇಗದಲ್ಲಿ ಚೆಂಡೆಸೆದ ನವದೀಪ್ ಸೈನಿ ಹೆಸರಿನಲ್ಲಿತ್ತು. ಇದೀಗ 153.1 ಕಿ.ಮೀ ವೇಗದಲ್ಲಿ ಬೌಲ್ ಮಾಡಿ ಉಮ್ರಾನ್ ಮಲಿಕ್ ಇತಿಹಾಸ ರಚಿಸಿದ್ದಾರೆ.

ಅಷ್ಟೇ ಅಲ್ಲದೆ ಸತತ 145ರ ಅಸುಪಾಸಿನಲ್ಲಿ ಚೆಂಡೆಸೆಯುವ ಮೂಲಕ ಉಮ್ರಾನ್ ಮಲಿಕ್ ಈ ಬಾರಿಯ ಐಪಿಎಲ್​ನಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಇದಾಗ್ಯೂ ಐಪಿಎಲ್​ನಲ್ಲಿನ ಅತ್ಯಂತ ವೇಗದ ಚೆಂಡೆಸೆದ ದಾಖಲೆಯನ್ನು ಉಮ್ರಾನ್​ಗೆ ಮುರಿಯಲಾಗಲಿಲ್ಲ. ಇನ್ನು ಹಲವು ಪಂದ್ಯಗಳಿದ್ದು 22 ರ ಯುವ ವೇಗದ ಬೌಲರ್ ಅತೀ ವೇಗವಾಗಿ ಬೌಲ್ ಮಾಡಿದ ಹೊಸ ಇತಿಹಾಸ ನಿರ್ಮಿಸಲಿದ್ದಾರಾ ಕಾದು ನೋಡಬೇಕಿದೆ.

ಅಂದಹಾಗೆ ಐಪಿಎಲ್​ನಲ್ಲಿ ಅತ್ಯಂತ ವೇಗವಾಗಿ ಚೆಂಡೆಸೆದ ದಾಖಲೆ ಆಸ್ಟ್ರೇಲಿಯಾದ ಶಾನ್ ಟೈಟ್ ಹೆಸರಿನಲ್ಲಿದೆ. ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಶಾನ್ ಟೈಟ್ 2011 ರಲ್ಲಿ ಡೆಲ್ಲಿ ವಿರುದ್ದ 157.71 kmph ವೇಗದಲ್ಲಿ ಚೆಂಡೆಸೆದು ದಾಖಲೆ ಬರೆದಿದ್ದರು. ಇನ್ನು 2ನೇ ಸ್ಥಾನದಲ್ಲಿ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಅನ್ರಿಕ್ ನಾರ್ಕಿಯಾ ಇದ್ದಾರೆ. ನಾರ್ಕಿಯಾ ಕಳೆದ ಸೀಸನ್ ಐಪಿಎಲ್​ನಲ್ಲಿ 156.22 kmph, 155.21 kmph, 154.74 kmph ವೇಗದಲ್ಲಿ ಬೌಲ್ ಮಾಡಿದ ದಾಖಲೆ ಬರೆದಿದ್ದರು. ಇನ್ನು ಮೂರನೇ ಸ್ಥಾನದಲ್ಲಿ ಡೇಲ್ ಸ್ಟೈನ್ (154.4 kmph) ಹಾಗೂ ನಾಲ್ಕನೇ ಸ್ಥಾನದಲ್ಲಿ ಕಗಿಸೊ ರಬಾಡ (154.2 kmph) ಇದ್ದಾರೆ. ಇದೀಗ ಉಮ್ರಾನ್ ಮಲಿಕ್ 153.1 ಕಿ.ಮೀ ವೇಗದಲ್ಲಿ ಚೆಂಡೆಸೆದು ವೇಗದ ಸರದಾರ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ.

ಉಮ್ರಾನ್ ಮಲಿಕ್ ಅವರ ಈ ಬಾರಿಯ ಬೌಲಿಂಗ್ ವೇಗ

ಟೀಮ್ ಇಂಡಿಯಾಗೆ ಹೊಸ ಭರವಸೆ:
ಟೀಮ್ ಇಂಡಿಯಾ ಕಳೆದ ಕೆಲ ವರ್ಷಗಳಿಂದ ವೇಗದ ಬೌಲರ್​ನನ್ನು ಎದುರು ನೋಡುತ್ತಿದೆ. ಇನ್​ಸ್ವಿಂಗ್, ಔಟ್ ಸ್ವಿಂಗ್ ಮೂಲಕ ಜಾದೂ ಮಾಡುವ ಅನೇಕ ಬೌಲರ್​ಗಳು ಭಾರತ ತಂಡದಲ್ಲಿ ಕಾಣಿಸಿಕೊಂಡರೂ ಬೌನ್ಸರ್ ಎಸೆಯುವ ಘಾತಕ ವೇಗಿಯಾಗಿ ಯಾರು ಕೂಡ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿರಲಿಲ್ಲ. ಅದರಲ್ಲೂ ಅಂತಹ ಬೌಲರ್​ಗಳು ಭಾರತದಲ್ಲಿಲ್ಲ ಎಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತಿತ್ತು. ಆದರೀಗ ಈ ಕೊರತೆಯನ್ನು ನೀಗಿಸುವ ಹೊಸ ಭರವಸೆ ಹುಟ್ಟು ಹಾಕಿದ್ದಾರೆ ಜಮ್ಮು ಕಾಶ್ಮೀರದ ಯುವ ವೇಗಿ ಉಮ್ರಾನ್ ಮಲಿಕ್.

22 ವರ್ಷದ ಯುವ ವೇಗಿಯ 150ರ ವೇಗಕ್ಕೆ ಅನೇಕ ಮಾಜಿ ಕ್ರಿಕೆಟಿಗರು ಮಾರುಹೋಗಿದ್ದಾರೆ. ಅಷ್ಟೇ ಅಲ್ಲದೆ ಉಮ್ರಾನ್ ಮಲಿಕ್ ಇಂತಹ ಅದ್ಭುತ ಬೌಲಿಂಗ್ ಪ್ರದರ್ಶನ ಮುಂದುವರೆಸಿದರೆ ಟೀಮ್ ಇಂಡಿಯಾದ ವೇಗದ ಬೌಲರ್ ಕೊರತೆ ನೀಗಲಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ 150.ಕಿ.ಮೀ ವೇಗದಲ್ಲಿ ಸತತವಾಗಿ ಬೌಲಿಂಗ್ ಮಾಡುವ ಮೂಲಕ ಉಮ್ರಾನ್ ಮಲಿಕ್ ಇದೀಗ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ.

ಟೀಮ್ ಇಂಡಿಯಾದ ನೆಟ್ ಬೌಲರ್:
ಉಮ್ರಾನ್ ಮಲಿಕ್ ಕಳೆದ ಐಪಿಎಲ್ ಸೀಸನ್​ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಟಿ ನಟರಾಜನ್ ಕೊರೋನಾ ಪಾಸಿಟಿವ್ ಆದ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದಾದ ಬಳಿಕ ಭರ್ಜರಿ ಬೌಲಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ವಿಶೇಷ ಎಂದರೆ ಉಮ್ರಾನ್ ವೇಗದ ಬೌಲಿಂಗ್​ಗೆ ವಿರಾಟ್ ಕೊಹ್ಲಿ ಅಚ್ಚರಿ ವ್ಯಕ್ತಪಡಿಸಿದ್ದರು. ಆ ಬಳಿಕ ಯುವ ವೇಗಿಯನ್ನು ಟಿ20 ವಿಶ್ವಕಪ್​ ವೇಳೆ ಟೀಮ್ ಇಂಡಿಯಾದ ನೆಟ್​ ಬೌಲರ್ ಆಗಿ ಆಯ್ಕೆ ಮಾಡಲಾಗಿತ್ತು.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು