ಸಮಸ್ಯೆಗಳ ಮೂಟೆ ಹೊತ್ತು ಆಸ್ಟ್ರೇಲಿಯಕ್ಕೆ ಕಾಲಿಟ್ಟಿರುವ ಟೀಂ ಇಂಡಿಯಾಕ್ಕೆ ಈ 5 ಸವಾಲುಗಳದ್ದೇ ಚಿಂತೆ..!
T20 World Cup 2022: ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ತವರು ನೆಲದಲ್ಲಿ ಗೆದ್ದು, ಟೀಂ ಇಂಡಿಯಾ ಇದೀಗ ಟಿ20 ವಿಶ್ವಕಪ್‌ಗಾಗಿ ಕಾಂಗರೂಗಳ ನಾಡಿಗೆ ಹಾರಿದೆ. ಆದರೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳನ್ನು ಗೆದ್ದಿದ್ದರೂ, ಕೆಲವು ಅಂಶಗಳು ಭಾರತ ಕ್ರಿಕೆಟ್ ತಂಡವನ್ನು ಚಿಂತೆಗೀಡುಮಾಡಿವೆ.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ತವರು ನೆಲದಲ್ಲಿ ಗೆದ್ದು, ಟೀಂ ಇಂಡಿಯಾ ಇದೀಗ ಟಿ20 ವಿಶ್ವಕಪ್‌ಗಾಗಿ (T20 World Cup) ಕಾಂಗರೂಗಳ ನಾಡಿಗೆ ಹಾರಿದೆ. ಆದರೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳನ್ನು ಗೆದ್ದಿದ್ದರೂ, ಕೆಲವು ಅಂಶಗಳು ಭಾರತ ಕ್ರಿಕೆಟ್ ತಂಡವನ್ನು ಚಿಂತೆಗೀಡುಮಾಡಿವೆ. ಉತ್ತಮ ಬೌಲಿಂಗ್ ಲೈನ್ ಅಪ್ ಹೊಂದಿದ್ದರೂ ಡೆತ್ ಬೌಲಿಂಗ್ ಟೀಂ ಇಂಡಿಯಾಗೆ ಆತಂಕ ತಂದಿದೆ. ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಟೂರ್ನಿಯಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಯಾರು ಬರಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಇದುವರೆಗೂ ಈ ವಿಚಾರದಲ್ಲಿ ಸ್ಪಷ್ಟತೆ ಇಲ್ಲ. ಸದ್ಯ ತಂಡವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆ ಎಂಬುದು ಎಲ್ಲರ ಮುಂದಿರುವ ಪ್ರಶ್ನೆ. ಇದರ ಜೊತೆಗೆ ಹಾರ್ದಿಕ್ ಪಾಂಡ್ಯ ಯಾವುದಾದರು ಗಾಯದ ಸಮಸ್ಯೆಯಿಂದ ಪಂದ್ಯಕ್ಕೆ ಅಲಭ್ಯರಾದರೆ ತಂಡದಲ್ಲಿ ಸಮತೋಲನ ತಪ್ಪಲಿದೆ. ಹಾಗಾಗಿ ಅವರ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಪ್ರಸ್ತುತ ತಂಡವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳ ಒಂದಿಷ್ಟು ವಿವರ ಹೀಗಿದೆ.
ಜಸ್ಪ್ರೀತ್ ಬುಮ್ರಾ ಬದಲಿಗೆ ಯಾರು?
ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದರಿಂದ ಟೀಂ ಇಂಡಿಯಾಗೆ ದೊಡ್ಡ ಆಘಾತವಾಗಿದೆ. ಇಲ್ಲಿಯವರೆಗೆ ಬುಮ್ರಾ ಬದಲಿಗೆ ಯಾರು ಆಡುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಮೊಹಮ್ಮದ್ ಶಮಿ ಮತ್ತು ದೀಪಕ್ ಚಹಾರ್ ಈ ಸ್ಥಾನಕ್ಕೆ ಪ್ರಬಲ ಸ್ಪರ್ಧಿಗಳಾಗಿದ್ದಾರೆ. ಆದರೆ, ಈ ವರ್ಷ ಇಬ್ಬರೂ ಟಿ20 ಮಾದರಿಯಲ್ಲಿ ಹೆಚ್ಚು ಪಂದ್ಯಗಳನ್ನು ಆಡಿಲ್ಲ. ಈ ಇಬ್ಬರೂ ಈ ಹಿಂದೆ ಐಪಿಎಲ್‌ನಲ್ಲಿ ಆಡಿದ್ದರೂ, ಇತ್ತೀಚೆಗೆ ಸೀಮಿತ ಓವರ್‌ಗಳಲ್ಲಿ ಆಡದಿರುವುದು ಸ್ವಲ್ಪ ಚಿಂತೆಯಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ್ದ ದೀಪಕ್, ಮೊದಲೆರಡು ಪಂದ್ಯಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಆದರೆ ಮೂರನೇ ಪಂದ್ಯದಲ್ಲಿ ಸಾಕಷ್ಟು ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದ್ದರು. ಮತ್ತೊಂದೆಡೆ, ಮೊಹಮ್ಮದ್ ಶಮಿ ಈ ವರ್ಷ ಭಾರತದ ಪರ ಒಂದೇ ಒಂದು ಟಿ20 ಆಡಿಲ್ಲ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಅವರಿಗೆ ಕೊರೊನಾ ತಗುಲಿದ್ದರಿಂದ ಎರಡು ಸರಣಿಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಬಿಸಿಸಿಐ ಯಾರಿಗೆ ಮಣೆ ಹಾಕುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ಡೆತ್ ಬೌಲಿಂಗ್ ಸಮಸ್ಯೆ
ಏಷ್ಯಾಕಪ್ ಜೊತೆಗೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತದ ಬೌಲರ್‌ಗಳು ಡೆತ್ ಓವರ್‌ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ. ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್ ಕೂಡ ಡೆತ್ ಓವರ್‌ಗಳಲ್ಲಿ ಹೆಚ್ಚು ರನ್ ನೀಡಿದರು. ಅಲ್ಲದೆ ಯಾರ್ಕರ್ ಎಸೆಯುವುದರಲ್ಲಿ ನಿಸ್ಸೀಮರು ಎನಿಸಿಕೊಂಡಿದ್ದ ಈ ಬೌಲರ್‌ಗಳು ಕೊನೆಯ ಓವರ್‌ಗಳಲ್ಲಿ ತುಂಬಾ ದುಬಾರಿಯಾದರು. ಹೀಗಾಗಿ, ಟಿ20 ವಿಶ್ವಕಪ್ ವೇಳೆಗೆ ಡೆತ್ ಓವರ್‌ಗಳ ಸಮಸ್ಯೆಯನ್ನು ಹೇಗೆ ನಿವಾರಿಸುವುದು ಎಂಬುದು ಬಹಳ ನಿರ್ಣಾಯಕವಾಗಿದೆ.
ಹಾರ್ದಿಕ್ ಪಾಂಡ್ಯಗೆ ಬದಲಿ ಆಟಗಾರ ಯಾರು?
ಟಿ20 ಮಾದರಿಯಲ್ಲಿ ಹಾರ್ತಿಕ್ ಪಾಂಡ್ಯ ತಮ್ಮ ಆಲ್ ರೌಂಡರ್ ಪ್ರತಿಭೆಯಿಂದ ತಂಡಕ್ಕೆ ಹಲವು ವಿಜಯಗಳನ್ನು ನೀಡಿದ್ದಾರೆ. ಬ್ಯಾಟಿಂಗ್ ಹೊರತಾಗಿ ಬೌಲಿಂಗ್ನಲ್ಲೂ ತಮ್ಮ ಸಾಮರ್ಥ್ಯ ತೋರುತ್ತಿದ್ದಾರೆ. ಆದರೆ ಒಂದು ವೇಳೆ ಹಾರ್ದಿಕ್ ಪಾಂಡ್ಯ ಗಾಯಗೊಂಡರೆ ಅವರ ಬದಲಿ ಆಟಗಾರ ತಂಡದಲಿಲ್ಲ. ಗಾಯದ ಸಮಸ್ಯೆಯಿಂದ ಪಾಂಡ್ಯ ತಂಡದಿಂದ ಹೊರಗುಳಿದರೆ ತಂಡದ ಸಮತೋಲನದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಪಾಂಡ್ಯ ಬದಲಿ ಆಟಗಾರ ಇಲ್ಲದಿರುವುದು ಭಾರತ ಕ್ರಿಕೆಟ್ ತಂಡಕ್ಕೆ ಆತಂಕ ತಂದಿದೆ.
ರಿಷಬ್ ಪಂತ್ ಫಾರ್ಮ್‌ಗೆ ಬರುವುದು ಯಾವಾಗ
ರಿಷಬ್ ಪಂತ್ ಫಾರ್ಮ್‌ಗೆ ಬಂದರೆ, ತಂಡದ ಅರ್ಧ ಚಿಂತೆ ಕಡಿಮೆಯಾದಂತೆ. ಆದರೆ ಪಂತ್ ಇತ್ತೀಚಿನ ಟಿ20 ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಅಂತಿಮ ತಂಡದಲ್ಲಿ ಸ್ಥಾನ ಪಡೆದರೂ ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ಕೊನೆಯ ಟಿ20 ಪಂದ್ಯದಲ್ಲಿ ಅವರು ಆರಂಭಿಕರಾಗಿ ಕೆಳಗಿಳಿದು 14 ಎಸೆತಗಳಲ್ಲಿ 27 ರನ್ ಗಳಿಸಿದ್ದರು. ಆದರೆ ಆರಂಭಿಕರಾಗಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುವುದರಿಂದ ಪಂತ್ ಅವರನ್ನು ಓಪನಿಂಗ್ ಮಾಡಲು ಕಳುಹಿಸುವ ಸಾಧ್ಯತೆ ಕಡಿಮೆ. ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್ ಈ ವರ್ಷ ಉತ್ತಮ ಪ್ರದರ್ಶನ ನೀಡಲಿಲ್ಲ. ಅವರ ಫಾರ್ಮ್ ಕೂಡ ತಂಡಕ್ಕೆ ಆತಂಕ ತಂದಿದೆ.
ಯುಜುವೇಂದ್ರ ಚಹಾಲ್‌ಗೆ ಸವಾಲು
ಲೆಗ್ ಸ್ಪಿನ್ನರ್ ಯಜ್ವೇಂದ್ರ ಚಹಾಲ್ ಆಸ್ಟ್ರೇಲಿಯಾ ನೆಲದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದರೆ, ಚಹಲ್ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಪಂದ್ಯಗಳಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ. ಜೊತೆಗೆ ಚಹಲ್ ಹೆಚ್ಚು ವಿಕೆಟ್‌ಗಳನ್ನು ತೆಗೆಯಲಿಲ್ಲ. ಇದರೊಂದಿಗೆ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಚಹಲ್ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಚಹಲ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿರಲಿಲ್ಲ. ದಕ್ಷಿಣ ಆಫ್ರಿಕಾ ತಂಡದಲ್ಲಿ ಎಡಗೈ ಬ್ಯಾಟ್ಸ್‌ಮನ್‌ಗಳು ಹೆಚ್ಚು ಇರುವುದರಿಂದ ರವಿಚಂದ್ರ ಅಶ್ವಿನ್‌ಗೆ ಅವಕಾಶ ನೀಡಲಾಗಿತ್ತು. ತಂಡದ ಯಶಸ್ಸಿನ ಸಾಧ್ಯತೆಯೂ ಚಹಲ್ ಅವರ ಒಟ್ಟಾರೆ ಪ್ರದರ್ಶನದ ಮೇಲೆ ಅವಲಂಬಿತವಾಗಿದೆ.