Gautam Gambhir: ಗೌತಮ್ ಗಂಭೀರ್ ಎಂಟ್ರಿಯಿಂದ ಸಂಕಷ್ಟಕ್ಕೆ ಸಿಲುಕಿದ ಹಾರ್ದಿಕ್ ಪಾಂಡ್ಯ

|

Updated on: Jul 13, 2024 | 2:20 PM

Gautam Gambhir: ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್ ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಜುಲೈ 27 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಭಾರತ ತಂಡ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಲಿದೆ. ಇದಾದ ಬಳಿಕ ಟೀಮ್ ಇಂಡಿಯಾ ಹಲವು ಟೆಸ್ಟ್ ಸರಣಿಗಳನ್ನು ಆಡಬೇಕಿದೆ.

Gautam Gambhir: ಗೌತಮ್ ಗಂಭೀರ್ ಎಂಟ್ರಿಯಿಂದ ಸಂಕಷ್ಟಕ್ಕೆ ಸಿಲುಕಿದ ಹಾರ್ದಿಕ್ ಪಾಂಡ್ಯ
Gautam Gambhir - Hardik Pandya
Follow us on

ಭಾರತ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ ಬೆನ್ನಲ್ಲೇ ಟೀಮ್ ಇಂಡಿಯಾ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯಗೆ ಹೊಸ ಚಿಂತೆ ಶುರುವಾಗಿದೆ. ಇದಕ್ಕೆ ಕಾರಣ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಗಂಭೀರ್ ನೀಡಿರುವ ಹೇಳಿಕೆ. ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಗೌತಮ್ ಗಂಭೀರ್, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರು ಮೂರು ಸ್ವರೂಪಗಳಲ್ಲೂ ಆಡಬೇಕು ಎಂದಿದ್ದಾರೆ. ಈ ಮೂಲಕ ಸ್ವರೂಪಗಳ ಆಯ್ಕೆಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಟೀಮ್ ಇಂಡಿಯಾ ಕ್ರಿಕೆಟಿಗರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಎಲ್ಲಾ ಮೂರು ಫಾರ್ಮ್ಯಾಟ್‌ಗಳನ್ನು ಆಡಲು ಸಾಧ್ಯವಾದರೆ, ಅವರು ಎಲ್ಲಾ ಸ್ವರೂಪಗಳಲ್ಲೂ ಆಡಲೇಬೇಕು. ಯಾವುದೇ ಬೌಲರ್ ಅನ್ನು ರೆಡ್ ಬಾಲ್ ಅಥವಾ ವೈಟ್ ಬಾಲ್ ಸ್ಪೆಷಲಿಸ್ಟ್ ಎಂದು ಕರೆಯುವುದು ನನಗೆ ಇಷ್ಟವಿಲ್ಲ. ಇಲ್ಲಿ ಮೂರು ಸ್ವರೂಪಗಳಲ್ಲೂ ಆಡುವ ಸಾಮರ್ಥ್ಯವಿದ್ದರೆ ಮೂರು ತಂಡಗಳಲ್ಲೂ ಕಾಣಿಸಿಕೊಳ್ಳಬೇಕು ಎಂದು ಗಂಭೀರ್ ಹೇಳಿದ್ದಾರೆ.

ಯಾವುದೇ ಆಟಗಾರನನ್ನು ಕೇವಲ ಟೆಸ್ಟ್‌ಗೆ ಅಥವಾ ಏಕದಿನ ಅಥವಾ ಟಿ20 ತಂಡಗಳಿಗೆ ಮಾತ್ರ ಇರಿಸಿಕೊಳ್ಳಲು ನಾನು ಬಯಸುವುದಿಲ್ಲ. ನಾನು ಯಾವುದೇ ಆಟಗಾರನ ಕೆಲಸದ ಹೊರೆಯನ್ನು ನಿಭಾಯಿಸುವ ಪರವಾಗಿಲ್ಲ. ವೃತ್ತಿಪರ ಕ್ರಿಕೆಟಿಗನ ವೃತ್ತಿಜೀವನ ತುಂಬಾ ಚಿಕ್ಕದು. ಹೀಗಾಗಿ ಅವರು ಸಾಧ್ಯವಾದಷ್ಟು ಪಂದ್ಯಗಳನ್ನಾಡಬೇಕು ಎಂದು ಗಂಭೀರ್ ಹೇಳಿದ್ದಾರೆ.

ಪಾಂಡ್ಯ ಚಿಂತೆ ಹೆಚ್ಚಿಸಿದ ಗಂಭೀರ್:

ಗೌತಮ್ ಗಂಭೀರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಒಬ್ಬ ಆಟಗಾರ ಮೂರು ಸ್ವರೂಪಗಳಲ್ಲೂ ಕಣಕ್ಕಿಳಿಯುವ ಸಾಮರ್ಥ್ಯವಿದ್ದರೆ, ನಿರ್ದಿಷ್ಟ ಸ್ವರೂಪಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ. ಅವರು ಮೂರು ಮಾದರಿಯಲ್ಲೂ ಕಣಕ್ಕಿಳಿಯಬೇಕಾಗುತ್ತದೆ ಎಂದಿದ್ದಾರೆ.

ಈ ಹೇಳಿಕೆಯು ನೇರವಾಗಿ ಬೊಟ್ಟು ಮಾಡುತ್ತಿರುವುದು ಹಾರ್ದಿಕ್ ಪಾಂಡ್ಯರತ್ತ ಎಂಬುದು ವಿಶೇಷ. ಟೀಮ್ ಇಂಡಿಯಾದ ಪ್ರಮುಖ ಆಲ್​ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್​ನಲ್ಲಿ ಕಣಕ್ಕಿಳಿಯುತ್ತಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.

ಏಕದಿನ ಮತ್ತು ಟಿ20 ಕ್ರಿಕೆಟ್​ ಆಡಲು ಇಷ್ಟಪಡುತ್ತಿರುವ ಹಾರ್ದಿಕ್ ಪಾಂಡ್ಯ ಕಳೆದ ಕೆಲ ವರ್ಷಗಳಿಂದ ಟೆಸ್ಟ್ ತಂಡದ ಆಯ್ಕೆಯಿಂದ ಹೊರಗುಳಿದಿದ್ದಾರೆ.
2017 ರಲ್ಲಿ ಟೆಸ್ಟ್ ಕೆರಿಯರ್ ಆರಂಭಿಸಿದ್ದ ಪಾಂಡ್ಯ ಕೊನೆಯ ಪಂದ್ಯವಾಡಿದ್ದು 2018 ರಲ್ಲಿ ಎಂಬುದು ವಿಶೇಷ. ಇದಾದ ಬಳಿಕ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಪರ ಟೆಸ್ಟ್ ಪಂದ್ಯವಾಡಿಲ್ಲ. ಆದರೀಗ ಗೌತಮ್ ಗಂಭೀರ್ ಎಂಟ್ರಿಯೊಂದಿಗೆ ಎಲ್ಲವೂ ಬದಲಾಗುವ ಸೂಚನೆಯಂತು ಸಿಕ್ಕಿದೆ.

ಇದನ್ನೂ ಓದಿ: James Anderson: ವಿಶ್ವ ದಾಖಲೆಗಳೊಂದಿಗೆ ವಿದಾಯ ಹೇಳಿದ ಜೇಮ್ಸ್ ಅ್ಯಂಡರ್ಸನ್

ಮುಖ್ಯವಾಗಿ ಮೂರು ಫಾರ್ಮ್ಯಾಟ್​ನಲ್ಲೂ ಆಡುವ ಸಾಮರ್ಥ್ಯ ಹೊಂದಿರುವ ಆಟಗಾರರು ದೇಶದ ಪರ ಮೂರು ಸ್ವರೂಪಗಳಲ್ಲೂ ಕಣಕ್ಕಿಳಿಯಬೇಕೆಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಹೀಗಾಗಿ ವೇಗದ ಬೌಲಿಂಗ್ ಆಲ್​ರೌಂಡರ್​ ಆಗಿರುವ ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್​ಗೆ ಮರಳಬೇಕಾದ ಅನಿವಾರ್ಯತೆ ಎದುರಾಗುವ ಸಾಧ್ಯತೆಯಿದೆ.

 

Published On - 2:20 pm, Sat, 13 July 24