ಟೀಮ್ ಇಂಡಿಯಾ ಸ್ಪಿನ್ನರ್ ರಾಹುಲ್ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿರುವ ರಾಹುಲ್ ಶರ್ಮಾ, ಈ ಅದ್ಭುತ ಪಯಣದಲ್ಲಿ ನನ್ನನ್ನು ಬೆಂಬಲಿಸಿದ ಅಭಿಮಾನಿಗಳು ಮತ್ತು ಬಿಸಿಸಿಐಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಒಂದು ಕಾಲದಲ್ಲಿ ಐಪಿಎಲ್ನಲ್ಲಿ ಮಿಂಚುವ ಮೂಲಕ ರಾಹುಲ್ ಶರ್ಮಾ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಗಮನ ಸೆಳೆದಿದ್ದರು.
2011 ರಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆಯನ್ನು ಕೂಡ ಮಾಡಿದ್ದರು. ಆದರೆ ಆ ಬಳಿಕ ಯುವ ಆಟಗಾರ ಬೆಲ್ ಪಾಲ್ಸಿ (ಮುಖದ ಪಾರ್ಶ್ವವಾಯು) ಸಮಸ್ಯೆಗೀಡಾಗಿದ್ದರು. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಪಾರ್ಶ್ವವಾಯು ಸಮಸ್ಯೆಯ ಕಾರಣ ಐಪಿಎಲ್ನಿಂದ ಕೂಡ ಹೊರಗುಳಿಯಬೇಕಾಯಿತು.
ಇದಾಗ್ಯೂ ಟೀಮ್ ಇಂಡಿಯಾ ಪರ ಆಡುವ ಕನಸನ್ನು ಈಡೇರಿಸಿಕೊಂಡಿದ್ದ ರಾಹುಲ್ ಶರ್ಮಾ, ಭಾರತದ ಪರ 4 ಏಕದಿನ ಮತ್ತು 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ ಟೀಮ್ ಇಂಡಿಯಾ ಪರ ಒಟ್ಟು 9 ವಿಕೆಟ್ಗಳನ್ನು ಕೂಡ ಕಬಳಿಸಿದ್ದಾರೆ.
ಇನ್ನು ರಾಹುಲ್ ಶರ್ಮಾಗೆ ಗೌತಮ್ ಗಂಭೀರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ಮತ್ತು ಎಂಎಸ್ ಧೋನಿಯಂತಹ ದಿಗ್ಗಜ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅವಕಾಶ ಕೂಡ ಲಭಿಸಿತ್ತು ಎಂಬುದು ವಿಶೇಷ.
Thanks to all for ur love and support throughout my journey ?❤️?? @BCCI @BCCIdomestic @IPL #retirement pic.twitter.com/anqBGUSwoa
— Rahul Sharma (@ImRahulSharma3) August 28, 2022
ಐಪಿಎಲ್ನಲ್ಲಿ 2010 ರಲ್ಲಿ ಡೆಕ್ಕನ್ ಚಾರ್ಜರ್ಸ್ (ಈಗಿನ ಸನ್‌ರೈಸರ್ಸ್ ಹೈದರಾಬಾದ್) ಪರ ಪದಾರ್ಪಣೆ ಮಾಡಿದ್ದ ರಾಹುಲ್ ಶರ್ಮಾ ಆ ಬಳಿಕ ಪುಣೆ ವಾರಿಯರ್ಸ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳ ಪರ ಕಣಕ್ಕಿಳಿದಿದ್ದರು. ಈ ವೇಳೆ ಒಟ್ಟು 44 ಐಪಿಎಲ್ ಪಂದ್ಯವಾಡಿದ್ದ ರಾಹುಲ್ ಶರ್ಮಾ 40 ವಿಕೆಟ್ ಕಬಳಿಸುವ ಮೂಲಕ ಮಿಂಚಿದ್ದರು.