ಸಿಎಸ್‌ಕೆ ನಾಯಕನಿಂದ ಮೆಂಟರ್ ವರೆಗೆ: ಮಹೇಂದ್ರ ಸಿಂಗ್ ಧೋನಿ ನಡೆದುಬಂದ ಐಪಿಎಲ್ ಹಾದಿ
MS Dhoni's Legendary IPL Journey: ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಐದು ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿದ್ದ ಮಹೇಂದ್ರ ಸಿಂಗ್ ಧೋನಿ, ಇದೀಗ ಐಪಿಎಲ್‌ಗೆ ನಿವೃತ್ತಿ ಘೋಷಿಸಿ ಸಿಎಸ್‌ಕೆ ಮೆಂಟರ್ ಆಗಿ ನೇಮಕಗೊಂಡಿದ್ದಾರೆ. ಮಾಹಿಯ ಸುದೀರ್ಘ ಐಪಿಎಲ್ ಪಯಣ ಮತ್ತು ದಾಖಲೆಗಳ ವಿವರ ಇಲ್ಲಿದೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಪ್ರಮುಖ ಆಟಗಾರ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್(IPL)ಗೆ ನಿವೃತ್ತಿ ಘೋಷಿಸಿದ್ದಾರೆ. ಆ ಬೆನ್ನಲ್ಲೇ ಮಾಹಿ, ಸಿಎಸ್‌ಕೆ ಮೆಂಟರ್ ಆಗಿ ನೇಮಕಗೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಧೋನಿ ಸುದೀರ್ಘ ವೃತ್ತಿಜೀವನದ ಪ್ರಮುಖ ಸಾಧನೆಗಳ ಸಂಕ್ಷಿಪ್ತ ವಿವರ ಇಲ್ಲಿದೆ.
2008ರಲ್ಲಿ ಸಿಎಸ್‌ಕೆ ಸೇರ್ಪಡೆ
2008ರಲ್ಲಿ ನಡೆದ ಚೊಚ್ಚಲ ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಧೋನಿ ಅವರನ್ನು ಖರೀದಿಸಿತ್ತು. ಮೊದಲ ಆವೃತ್ತಿಯಿಂದಲೇ ತಂಡದ ನಾಯಕತ್ವ ವಹಿಸಿದ್ದ ಅವರು, ಸುಮಾರು ಎರಡು ದಶಕಗಳ ಕಾಲ ಫ್ರಾಂಚೈಸಿಯ ಪ್ರಮುಖ ಗುರುತಾಗಿ ಉಳಿದಿದ್ದರು.
ಐದು ಬಾರಿ ಐಪಿಎಲ್ ಚಾಂಪಿಯನ್
2010, 2011, 2018, 2021 ಮತ್ತು 2023ರಲ್ಲಿ ಸಿಎಸ್‌ಕೆಗೆ ಐದು ಐಪಿಎಲ್ ಟ್ರೋಫಿಗಳನ್ನು ಧೋನಿ ತಮ್ಮ ನಾಯಕತ್ವದಲ್ಲಿ ಗೆಲ್ಲಿಸಿಕೊಟ್ಟಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಅವರೊಂದಿಗೆ ಅತಿ ಹೆಚ್ಚು ಐಪಿಎಲ್ ಪ್ರಶಸ್ತಿ ಗೆದ್ದ ನಾಯಕರ ಪಟ್ಟಿಯಲ್ಲಿ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ. ಅಲ್ಲದೆ 2010 ಮತ್ತು 2011ರಲ್ಲಿ ಸತತವಾಗಿ ಐಪಿಎಲ್ ಪ್ರಶಸ್ತಿ ಗೆಲ್ಲುವ ಮೂಲಕ ಪ್ರಶಸ್ತಿಯನ್ನು ಉಳಿಸಿಕೊಂಡ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಮಾಹಿ ಪಾತ್ರರಾಗಿದ್ದರು. 10 ಬಾರಿ ಫೈನಲ್ ಪ್ರವೇಶ: ನಾಯಕನಾಗಿ ಧೋನಿ ಚೆನ್ನೈ ತಂಡವನ್ನು 10 ಬಾರಿ ಐಪಿಎಲ್ ಫೈನಲ್‌ಗೆ ಕೊಂಡೊಯ್ದಿದ್ದಾರೆ. 12 ಆವೃತ್ತಿಗಳಲ್ಲಿ ಪ್ಲೇಆಫ್ ಹಂತಕ್ಕೂ ತಲುಪಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ನಿಂದ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಗೆ ಮರುಗಿದ ಸಿಎಸ್‌ಕೆ ಮಾಲೀಕ: ಎನ್. ಶ್ರೀನಿವಾಸನ್ ಭಾವುಕ ಪೋಸ್ಟ್
ಪುಣೆ ತಂಡದ ಪರ ಆಟ
2016 ಮತ್ತು 2017ರಲ್ಲಿ ಚೆನ್ನೈ ತಂಡ ಎರಡು ವರ್ಷಗಳ ಕಾಲ ಅಮಾನತುಗೊಂಡಿದ್ದರಿಂದ ಧೋನಿ ಪುಣೆ ತಂಡದ ಪರ ಆಡಿದ್ದರು. ಐಪಿಎಲ್‌ನಲ್ಲಿ ಸಿಎಸ್‌ಕೆ ಹೊರತುಪಡಿಸಿ ಅವರು ಪ್ರತಿನಿಧಿಸಿದ ಏಕೈಕ ತಂಡ ಇದಾಗಿದೆ. 2016ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದ ನಾಯಕತ್ವ ವಹಿಸಿದ್ದರು. 2017ರಲ್ಲಿ ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ಆಡಿದ್ದರು.
ಅದ್ಭುತ ಬ್ಯಾಟಿಂಗ್ ಪ್ರದರ್ಶನ
2018ರಲ್ಲಿ ಸಿಎಸ್‌ಕೆ ಪುನರಾಗಮನದ ವರ್ಷದಲ್ಲಿ ಧೋನಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. 75.83ರ ಸರಾಸರಿ ಮತ್ತು 150.66ರ ಸ್ಟ್ರೈಕ್‌ರೇಟ್‌ನಲ್ಲಿ 455 ರನ್ ಗಳಿಸಿದ್ದರು. ‘ಡ್ಯಾಡ್ಸ್ ಆರ್ಮಿ’ ಎಂದೇ ಹೆಸರಾಗಿದ್ದ ತಂಡ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದಿತ್ತು. 2019ರಲ್ಲಿ ಅಜೇಯ 84 ರನ್ ಗಳಿಸಿದ್ದು ಅವರ ಐಪಿಎಲ್ ವೃತ್ತಿಜೀವನದ ಗರಿಷ್ಠ ವೈಯಕ್ತಿಕ ಸ್ಕೋರ್. ಆ ಆವೃತ್ತಿಯಲ್ಲಿ 83.20ರ ಸರಾಸರಿ ಹೊಂದಿದ್ದರು. ಐಪಿಎಲ್‌ನಲ್ಲಿ ಶತಕ ಗಳಿಸದಿದ್ದರೂ 24 ಅರ್ಧಶತಕಗಳನ್ನು ಧೋನಿ ಬಾರಿಸಿದ್ದಾರೆ. 2023ರಲ್ಲಿ ಐಪಿಎಲ್‌ನಲ್ಲಿ 250 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ದಾಖಲೆಯೂ ಇವರ ಹೆಸರಲ್ಲಿ ಆಗಿತ್ತು.
ಧೋನಿ ಮತ್ತು ಸಿಎಸ್‌ಕೆ ನಾಯಕತ್ವ
2022ರ ಐಪಿಎಲ್‌ಗೂ ಮುನ್ನ ರವೀಂದ್ರ ಜಡೇಜಾ ಅವರಿಗೆ ನಾಯಕತ್ವ ಹಸ್ತಾಂತರಿಸಿದ್ದರೂ. ತಂಡದ ಕಳಪೆ ಆರಂಭದ ಹಿನ್ನೆಲೆಯಲ್ಲಿ ಟೂರ್ನಿಯ ಮಧ್ಯದಲ್ಲೇ ಧೋನಿ ಮತ್ತೆ ನಾಯಕತ್ವ ವಹಿಸಿಕೊಂಡಿದ್ದರು. ಬಳಿಕ 2024ರ ಐಪಿಎಲ್ ಆರಂಭಕ್ಕೆ ಒಂದು ದಿನ ಮುನ್ನ ನಾಯಕತ್ವದಿಂದ ಕೆಳಗಿಳಿದು ರುತುರಾಜ್ ಗಾಯಕ್ವಾಡ್ ಅವರಿಗೆ ಜವಾಬ್ದಾರಿ ವಹಿಸಿದ್ದರು. ಗಾಯದ ಸಮಸ್ಯೆಯಿಂದ ರುತುರಾಜ್ ಗಾಯಕ್ವಾಡ್ ಟೂರ್ನಿಯಿಂದ ಹೊರಗುಳಿದ ಹಿನ್ನೆಲೆಯಲ್ಲಿ 2025ರಲ್ಲಿ ಧೋನಿ ಮತ್ತೆ ಚೆನ್ನೈ ತಂಡದ ನಾಯಕತ್ವ ವಹಿಸಿಕೊಂಡಿದ್ದರು.
ಹಲವು ದಾಖಲೆಗಳ ಸರದಾರ
ಕರುಳುಸ್ನಾಯು (Calf) ಮತ್ತು ಹೆಬ್ಬೆರಳಿನ ಗಾಯದ ಸಮಸ್ಯೆಯಿಂದಾಗಿ 2026ರ ಸಂಪೂರ್ಣ ಐಪಿಎಲ್ ಆವೃತ್ತಿಯಿಂದ ಧೋನಿ ಹೊರಗುಳಿದಿದ್ದರು. ಐಪಿಎಲ್ ಇತಿಹಾಸದಲ್ಲಿ ಅವರು ಒಂದೇ ಒಂದು ಪಂದ್ಯವನ್ನೂ ಆಡದ ಮೊದಲ ಆವೃತ್ತಿ ಇದಾಗಿದೆ. ಐಪಿಎಲ್ನಲ್ಲಿಒಟ್ಟು 278 ಪಂದ್ಯಗಳಿಂದ 38.30ರ ಸರಾಸರಿ ಮತ್ತು 137.45ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 5,439 ರನ್ಗಳನ್ನು ಮಾಹಿ ಗಳಿಸಿದ್ದಾರೆ. ವಿಕೆಟ್ ಕೀಪರ್ ಆಗಿ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪತನಕ್ಕೆ ಕಾರಣರಾದ ದಾಖಲೆಯೂ ಅವರ ಹೆಸರಿನಲ್ಲಿದೆ. ಐಪಿಎಲ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆಯನ್ನೂ ಧೋನಿ ಹೊಂದಿದ್ದಾರೆ. ನಾಯಕನಾಗಿ ಒಟ್ಟು 136 ಗೆಲುವುಗಳನ್ನು ಇವರು ದಾಖಲಿಸಿದ್ದರೆ, ರೋಹಿತ್ ಶರ್ಮಾ 87 ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:02 pm, Tue, 17 November 26




