ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಬಿಸಿಸಿಐ ಪ್ರಕಟಿಸಿರುವ ತಂಡದಲ್ಲಿ ರಾಜಸ್ಥಾನದ ಆಲ್ ರೌಂಡರ್ ದೀಪಕ್ ಹೂಡಾ (Deepak Hooda) ಕೂಡ ಸ್ಥಾನ ಪಡೆದಿದ್ದಾರೆ. ವಿಶೇಷ ಎಂದರೆ ಕಳೆದ ವರ್ಷ ಹೂಡಾ ದೇಶೀಯ ಟೂರ್ನಿಯನ್ನೇ ಆಡಿರಲಿಲ್ಲ. 2021ರ ಜನವರಿಯಲ್ಲಿಅಶಿಸ್ತಿನ ಕಾರಣ ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಅವರನ್ನು ಅಮಾನತುಗೊಳಿಸಿತ್ತು. ಇದೀಗ ಒಂದು ವರ್ಷದ ಬಳಿಕ, ಅಂದರೆ ಜನವರಿ 2022 ರಲ್ಲಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. 12 ತಿಂಗಳು ಹೊರಗುಳಿದಿದ್ದ ಹೂಡಾ ಈ ವರ್ಷ ಸಿಕ್ಕ ಅವಕಾಶದಲ್ಲಿ ತಮ್ಮ ಅದೃಷ್ಟವನ್ನೇ ಬದಲಿಸಿಕೊಂಡಿದ್ದಾರೆ.
ದೀಪಕ್ ಹೂಡಾ ಒಂದು ವರ್ಷ ಬ್ಯಾನ್ ಆಗಿದ್ದೇಕೆ? 2021ರ ಸೈಯದ್ ಮುಷ್ತಾಕ್ ಅಲಿ T20 ಟ್ರೋಫಿಯಲ್ಲಿ ಬರೋಡಾ ಆಟಗಾರನಾಗಿದ್ದ ಹೂಡಾ ತಂಡದ ಉಪನಾಯಕರಾಗಿದ್ದರು. ಆದರೆ ಮತ್ತೊಂದೆಡೆ ತಂಡದ ನಾಯಕ ಕೃನಾಲ್ ಪಾಂಡ್ಯ ಅವರೊಂದಿಗೆ ಹೊಂದಾಣಿಕೆ ಇರಲಿಲ್ಲ. ಹೀಗಾಗಿಯೇ ಕೃನಾಲ್ ಪಾಂಡ್ಯ ಇತರೆ ಆಟಗಾರರ ಮುಂದೆ ಹೂಡಾರನ್ನು ಅವಾಚ್ಯ ಪದಗಳಿಂದ ಅವಮಾನಿಸಿದ್ದರು. ಇದರಿಂದ ನೊಂದಿದ್ದ ದೀಪಕ್ ಹೂಡಾ ಬರೋಡಾ ಕ್ರಿಕೆಟ್ ಅಸೋಸಿಯೇಷನ್‌ಗೆ ಪತ್ರ ಬರೆದು ಕ್ಯಾಪ್ಟನ್ ಕೃನಾಲ್ ವಿರುದ್ದ ದೂರು ಸಲ್ಲಿಸಿದ್ದರು. ಆದಾಗ್ಯೂ, ಬರೋಡಾ ಕ್ರಿಕೆಟ್ ಅಸೋಷಿಯೇಷನ್ ಈ ಅಶಿಸ್ತಿನ ಕಾರಣವನ್ನು ಮುಂದಿಟ್ಟು ದೀಪಕ್ ಹೂಡಾರನ್ನು ಇಡೀ ಸೀಸನ್ನಲ್ಲಿ ಅಮಾನತುಗೊಳಿಸಿತು. ಇದರಿಂದ ದೀಪಕ್ ಹೂಡಾ ಕ್ರಿಕೆಟ್ ಕೆರಿಯರ್ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ ಈ ಬಾರಿಯ ಸೈಯದ್ ಮುಷ್ತಾಕ್ ಅಲಿ ಸೀಸನ್ನಲ್ಲಿ ದೀಪಕ್ ಹೂಡಾ ಕಂಬ್ಯಾಕ್ ಮಾಡಿದ್ದರು. ಈ ಮೂಲಕ ಭರ್ಜರಿ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆದಿದ್ದರು. ಆದರೆ ಹೂಡಾ ಎಂಬ ಯುವ ಪ್ರತಿಭೆಗೆ ಕಳೆದ ಒಂದು ವರ್ಷ ಬೆಂಬಲ ಸೂಚಿಸಿ ಮಾರ್ಗದರ್ಶನ ನೀಡಿದ್ದು ಬರೋಡಾದ ಮತ್ತಿಬ್ಬರು ಕ್ರಿಕೆಟಿಗರು ಎಂಬುದೇ ಇಲ್ಲಿ ವಿಶೇಷ. ಹೌದು, ಟೀಮ್ ಇಂಡಿಯಾಗೆ ಆಯ್ಕೆಯಾದ ಬಳಿಕ ಮಾತನಾಡಿದ ದೀಪಕ್ ಹೂಡಾ ಭಾರತ ತಂಡದ ಮಾಜಿ ಆಟಗಾರರಾದ ಇರ್ಫಾನ್ ಪಠಾಣ್ ಹಾಗೂ ಯೂಸುಫ್ ಪಠಾಣ್ಗೆ ಧನ್ಯವಾದ ತಿಳಿಸಿದ್ದರು. ಇದಕ್ಕೆ ಕಾರಣ ಕೆರಿಯರ್ ಮುಗಿಯಿತು ಎಂದುಕೊಂಡಿದ್ದ ಹೂಡಾರನ್ನು ಮತ್ತೆ ಮೈದಾನಕ್ಕೆ ಇಳಿಸಿದ್ದು ಪಠಾಣ್ ಬ್ರದರ್ಸ್.
‘ನನ್ನ ವೃತ್ತಿಜೀವನದ ಬಗ್ಗೆ ನಾನು ಹೆದರುತ್ತಿದ್ದೆ. ವಿವಾದದ ನಂತರ ನಾನು ಸಂಪೂರ್ಣ ಕುಗ್ಗಿ ಹೋಗಿದ್ದೆ. ಆದರೆ ಇರ್ಫಾನ್ ಮತ್ತು ಯೂಸುಫ್ ಭಾಯ್ ನನ್ನನ್ನು ಮತ್ತೆ ತರಬೇತಿಗೆ ಕರೆತಂದರು. ಬರೋಡಾದಲ್ಲಿ ಗಂಟೆಗಟ್ಟಲೆ ನೆಟ್ಸ್ ನಲ್ಲಿ ನನ್ನೊಂದಿಗೆ ಅಭ್ಯಾಸ ನಡೆಸುತ್ತಿದ್ದರು. ಮಾರ್ಗದರ್ಶಕರಾಗಿದ್ದ ಅವರು ಕ್ರೀಡೆಯ ಬಗ್ಗೆ ಮಾತ್ರವಲ್ಲ, ಜೀವನದ ಬಗ್ಗೆಯೂ ಕಲಿಸಿದರು. ನನ್ನ ಕಠಿಣ ಸಮಯದಲ್ಲಿ ಅವರ ಸೂಕ್ತ ಸಲಹೆಗಳು ನನ್ನನ್ನು ಪ್ರಬುದ್ಧ ಕ್ರಿಕೆಟಿಗನಾಗಲು ಸಹಾಯ ಮಾಡಿತು ಎಂದು ದೀಪಕ್ ಹೂಡಾ ತಿಳಿಸಿದ್ದಾರೆ.
ಟೀಮ್ ಇಂಡಿಯಾಗೆ ಆಯ್ಕೆಯಾಗಿರುವ ಬಗ್ಗೆ ಈಗಲೂ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಕಳೆದ ವರ್ಷ ನನಗೆ ಏರಿಳಿತಗಳಿಂದ ತುಂಬಿತ್ತು. ಆದರೆ ಇರ್ಫಾನ್ ಭಾಯ್ (ಇರ್ಫಾನ್ ಪಠಾಣ್) ಮತ್ತು ಯೂಸುಫ್ ಭಾಯ್ (ಯೂಸುಫ್ ಪಠಾಣ್) ಮತ್ತು ಕುಟುಂಬ ಸದಸ್ಯರ ಸಹಾಯದಿಂದ ನಾನು ಕೆಟ್ಟ ಹಂತದಿಂದ ಹೊರಬಂದು ಮತ್ತೆ ಕನಸು ಕಾಣಲು ಪ್ರಾರಂಭಿಸಿದೆ. ಇದೀಗ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಖುಷಿಯನ್ನು ನನಗೆ ಪದಗಳಲ್ಲಿ ಹೇಳಲಾಗುತ್ತಿಲ್ಲ. ಆದರೆ ಇದು ನನ್ನ ವೃತ್ತಿ ಜೀವನದ ಅತ್ಯಂತ ಸುಂದರ ಕ್ಷಣ ಎಂದು ಹೇಳಬಲ್ಲೆ ಎಂದು ದೀಪಕ್ ಹೂಡಾ ಖುಷಿ ಹಂಚಿಕೊಂಡಿದ್ದಾರೆ.
ಕಳೆದ ಸೀಸನ್ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದ ಹೂಡಾ, ದೇಶೀಯ ಕ್ರಿಕೆಟ್ನ ಅಮಾನತು ಕೊನೆಯಾಗುತ್ತಿದ್ದಂತೆ ಬರೋಡಾ ತಂಡದೊಂದಿಗೆ ತಮ್ಮ 9 ವರ್ಷಗಳ ಸಂಬಂಧವನ್ನು ಮುರಿದು ರಾಜಸ್ಥಾನ ತಂಡದ ಪರ ಆಡಿದರು. ಅತ್ತ ಪಠಾಣ್ ಬ್ರದರ್ಸ್ ಗರಡಿಯಲ್ಲಿ ಒಂದು ವರ್ಷ ಪಳಗಿದ್ದ ಹೂಡಾ 2021-22 ರ ಸೈಯದ್ ಮುಷ್ತಕ್ ಅಲಿ ಟಿ20 ಟ್ರೋಫಿಯ 6 ಪಂದ್ಯಗಳಲ್ಲಿ 294 ರನ್ ಬಾರಿಸಿ ಮಿಂಚಿದ್ದರು. ಅಷ್ಟೇ ಅಲ್ಲದೆ ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ವಿಜಯ್ ಹಜಾರೆ ಟ್ರೋಫಿಗೆ ಹೂಡಾರನ್ನು ತಂಡದ ನಾಯಕನನ್ನಾಗಿ ಆಯ್ಕೆ ಮಾಡಿತು. ಈ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ ಒಂದು ಶತಕದೊಂದಿಗೆ 198 ರನ್ ಬಾರಿಸಿದ್ದರು.
ಇದೀಗ ದೀಪಕ್ ಹೂಡಾ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದಿದ್ದಾರೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಏಕದಿನ ಪಂದ್ಯಗಳಲ್ಲಿ ಮ್ಯಾಚ್ ಫಿನಿಶರ್ ಅನ್ನು ಎದುರು ನೋಡುತ್ತಿದೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ ವೆಂಕಟೇಶ್ ಅಯ್ಯರ್ ಗೆ ಅವಕಾಶ ನೀಡಲಾಗಿದ್ದರೂ, ಅವರಿಂದ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಇದೀಗ ತಂಡಕ್ಕೆ ಆಯ್ಕೆಯಾಗಿರುವ ಹೂಡಾ ಮಧ್ಯಮ ಕ್ರಮಾಂಕದಲ್ಲಿ ಎಲ್ಲಿ ಬೇಕಾದರೂ ಬ್ಯಾಟ್ ಮಾಡಬಲ್ಲರು. ಬಿಗ್ ಹಿಟ್ಟರ್ ಎಂಬುದನ್ನು ಐಪಿಎಲ್‌ನಲ್ಲಿ ಹಲವು ಬಾರಿ ಸಾಬೀತು ಮಾಡಿದ್ದಾರೆ. ಅಷ್ಟೇ ಅಲ್ಲದೆ ಆಫ್ ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 20 ಟಿ20 ಪಂದ್ಯಗಳಲ್ಲಿ 17 ವಿಕೆಟ್ ಮತ್ತು ಲಿಸ್ಟ್-ಎಯಲ್ಲಿ 35 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ದೀಪಕ್ ಹೂಡಾರನ್ನು ಸ್ಪಿನ್ ಆಲ್ರೌಂಡರ್ ಆಗಿ ಕೂಡ ಬಳಸಿಕೊಳ್ಳಬಹುದು.
ಅಂದಹಾಗೆ ದೀಪಕ್ ಹೂಡಾ ಈ ಹಿಂದೆ 2017-18 ರಲ್ಲಿ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದರು. ಆದರೆ ಆಗ ಪ್ಲೇಯಿಂಗ್-11 ನಲ್ಲಿ ಅವಕಾಶ ಪಡೆದಿರಲಿಲ್ಲ. ಈ ಬಗ್ಗೆ ಮಾತನಾಡಿದ ಹೂಡಾ, ನನಗೆ ಮತ್ತೊಂದು ಅವಕಾಶ ಸಿಗಲು ಐದು ವರ್ಷ ಬೇಕಾಯಿತು. ನಿಜ ಹೇಳಬೇಕೆಂದರೆ, ಪ್ರತಿ ಸೀಸನ್ ಬಳಿಕ ನಾನು ಈ ಬಾರಿ ತಂಡದಲ್ಲಿ ಸ್ಥಾನ ಪಡೆಯುತ್ತೇನೆ ಎಂದು ಭಾವಿಸುತ್ತಿದ್ದೆ. ಆದರೆ ಅದು ಎಂದಿಗೂ ಸಂಭವಿಸಿರಲಿಲ್ಲ. ಆದರೆ ನಿಮ್ಮ ಅವಕಾಶಕ್ಕಾಗಿ ನೀವು ಕಾಯಲೇಬೇಕು ಎಂಬುದು ಕಳೆದ ಒಂದು ವರ್ಷ ನನಗೆ ಕಲಿಸಿತು ಎಂದು ದೀಪಕ್ ಹೂಡಾ ಹಿಂದಿನ ಘಟನೆಯನ್ನು ಸ್ಮರಿಸಿದರು.
ಇದನ್ನೂ ಓದಿ: IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!
ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ
ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್
(From Suspension to Team India, know how Deepak Hooda’s fortunes changed in 12 months)