LPL 2023: ಬಾಬರ್ ಆಜಮ್ ಮಂದಗತಿಯ ಬ್ಯಾಟಿಂಗ್; ಲೀಗ್ನಿಂದ ಕೊಲಂಬೊ ಸ್ಟ್ರೈಕರ್ಸ್ ಔಟ್..!
LPL 2023: ಆಗಸ್ಟ್ 15 ರಂದು ನಡೆದ ಕೊಲಂಬೊ ಸ್ಟ್ರೈಕರ್ಸ್ ಮತ್ತು ಗಾಲೆ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಚಮೀಕ ಕರುಣಾರತ್ನೆ ನೇತೃತ್ವದ ಕೊಲಂಬೊ ಸ್ಟ್ರೈಕರ್ಸ್ ತಂಡ ಹೀನಾಯ ಸೋಲು ಅನುಭವಿಸುವುದರೊಂದಿಗೆ ಲೀಗ್ನಿಂದ ಭಾಗಶಃ ಹೊರಬಿದ್ದಿದೆ.

ಪ್ರಸ್ತುತ ಶ್ರೀಲಂಕಾದಲ್ಲಿ ನಡೆಯುತ್ತಿರುವ ಲಂಕಾ ಪ್ರಿಮೀಯರ್ ಲೀಗ್ ( Lanka Premier League) ಅಂತಿಮ ಹಂತ ತಲುಪಿದೆ. ಲೀಗ್‌ನಲ್ಲಿ ಆಗಸ್ಟ್ 15 ರಂದು ನಡೆದ ಕೊಲಂಬೊ ಸ್ಟ್ರೈಕರ್ಸ್ ಮತ್ತು ಗಾಲೆ ಟೈಟಾನ್ಸ್ (Colombo Strikers Vs Galle Titans) ನಡುವಿನ ಪಂದ್ಯದಲ್ಲಿ ಚಮೀಕ ಕರುಣಾರತ್ನೆ ನೇತೃತ್ವದ ಕೊಲಂಬೊ ಸ್ಟ್ರೈಕರ್ಸ್ ತಂಡ ಹೀನಾಯ ಸೋಲು ಅನುಭವಿಸುವುದರೊಂದಿಗೆ ಲೀಗ್ನಿಂದ ಭಾಗಶಃ ಹೊರಬಿದ್ದಿದೆ. ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯ ಕಡಿಮೆ ಸ್ಕೋರಿಂಗ್ ಪಂದ್ಯವಾಗಿತ್ತು. ಈ ಪಂದ್ಯದ ಕಡಿಮೆ ಸ್ಕೋರ್‌ಗೆ ಕಾರಣವೆಂದರೆ ಬಾಬರ್ ಆಜಮ್ (Babar Azam) ಸೇರಿದಂತೆ ಕೊಲಂಬೊ ಸ್ಟ್ರೈಕರ್ಸ್ ತಂಡದ ಇತರ ಸ್ಟಾರ್ ಆಟಗಾರರ ಕೆಟ್ಟ ಆಟ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲಂಬೊ ಸ್ಟ್ರೈಕರ್ಸ್ ತಂಡವು 15.4 ಓವರ್‌ಗಳಷ್ಟೇ ಬ್ಯಾಟಿಂಗ್ ಮಾಡಲು ಶಕ್ತವಾಗಿ ಕೇವಲ 74 ರನ್‌ಗಳಿಗೆ ಆಲೌಟ್ ಆಯಿತು.
ಕಳಪೆ ಬ್ಯಾಟಿಂಗ್ ಸೋಲಿಗೆ ಕಾರಣ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಲಂಬೊ ಸ್ಟ್ರೈಕರ್ಸ್ ತಂಡವು ಬಾಬರ್, ನಿಸ್ಸಾಂಕ, ಫರ್ನಾಂಡೋ, ನವಾಜ್ ಅವರಂತಹ ಸ್ಟಾರ್ ಆಟಗಾರರಿದ್ದರೂ, ಲೀಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿತು. ಇದಕ್ಕೆ ಪ್ರಮುಖ ಕಾರಣ ಸ್ಟಾರ್ ಆಟಗಾರರ ಕಳಪೆ ಬ್ಯಾಟಿಂಗ್. ಟೂರ್ನಿಯೂದ್ದಕ್ಕೂ ಇದ್ದ ಈ ಸಮಸ್ಯೆ ಈ ಪಂದ್ಯದಲ್ಲೂ ಮುಂದುವರೆಯಿತು. ತಂಡದ ಸ್ಟಾರ್ ಆಟಗಾರರ ಮಂದಗತಿಯ ಬ್ಯಾಟಿಂಗ್ ಒಂದೆಡೆಯಾದರೆ, ಎದುರಾಳಿ ತಂಡದ ಸ್ಟಾರ್ ಸ್ಪಿನ್ನರ್ ತಬ್ರೇಜ್ ಶಮ್ಸಿ ಅವರ ಮಾರಕ ದಾಳಿಕೂಡ ಪ್ರಮುಖ ಪಾತ್ರವಹಿಸಿತು. ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ಶಮ್ಸಿ ಒಟ್ಟು 4 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಮೊದಲ ಪಂದ್ಯದಲ್ಲೇ ಬಾಬರ್ ತಂಡಕ್ಕೆ ಸೋಲು; 21 ರನ್ಗಳಿಂದ ಗೆದ್ದ ಜಾಫ್ನಾ ಕಿಂಗ್ಸ್
ಬಾಬರ್ ವಿಫಲ, ಮಧ್ಯಮ ಕ್ರಮಾಂಕದ ಅಟ್ಟರ್ ಫ್ಲಾಪ್
ಶಮ್ಸಿ ದಾಳಿಗೆ ನಲುಗಿದ ಕೊಲಂಬೊ ಸ್ಟ್ರೈಕರ್ಸ್ ತಂಡದ ಯಾವೊಬ್ಬ ಬ್ಯಾಟರ್ಗೂ 14 ಕ್ಕಿಂತ ಅಧಿಕ ರನ್ ಬಾರಿಸಲು ಸಾಧ್ಯವಾಗಲಿಲ್ಲ. ತಂಡದ ಪರ ನುವಾನಿಡು ಫೆರ್ನಾಂಡೋ ಹಾಗೂ ಲಹಿರು ಉದಾರ ತಲಾ 14 ರನ್ ಬಾರಿಸಿ ತಂಡದ ಪರ ಅತ್ಯಧಿಕ ಸ್ಕೋರರ್ ಎನಿಸಿಕೊಂಡರು. ಉಳಿದಂತೆ ಸ್ಟಾರ್ ಬ್ಯಾಟರ್ ಆಗಿದ್ದ ಬಾಬರ್ ಆಜಮ್, ಟಿ20 ಕ್ರಿಕೆಟ್ನಲ್ಲಿ ಟೆಸ್ಟ್ ಕ್ರಿಕೆಟ್ನಂತೆ ಬ್ಯಾಟ್ ಬೀಸಿ 12 ಎಸೆತಗಳಲ್ಲಿ 6 ರನ್ ಬಾರಿಸಿದರು. ಬಳಿಕ ಲಹೀರು ಕುಮಾರ ಎಸೆತದಲ್ಲಿ ಬೌಲ್ಡ್ ಆದರು. ತಂಡದ ಮತ್ತೋರ್ವ ಓಪನರ್ ನಿಸ್ಸಾಂಕ ಕೂಡ ಕುಮಾರಗೆ ಬಲಿಯಾದರು. ಇದಾದ ಬಳಿಕ ದಾಳಿಗಿಳಿದ ತಬ್ರೇಜ್ ಶಮ್ಸಿ, ತಂಡದ ಮಧ್ಯಮ ಕ್ರಮಾಂಕವನ್ನು ಛಿದ್ರಗೊಳಿಸಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾ ಪರ ಕಣಕ್ಕಿಳಿಯು ಸ್ಪಿನ್ನರ್ ತಬ್ರೈಜ್ ಶಮ್ಸಿ ಗಾಲೆ ಟೈಟಾನ್ಸ್ ತಂಡದ ಪರ 4 ಓವರ್ ಬೌಲ್ ಮಾಡಿ 20 ರನ್ ನೀಡಿ 4 ವಿಕೆಟ್ ಪಡೆದರು. ಈ ನಾಲ್ಕು ವಿಕೆಟ್‌ಗಳು ಕೊಲಂಬೊ ಸ್ಟ್ರೈಕರ್ ತಂಡದ ಮಧ್ಯಮ ಕ್ರಮಾಂಕದ್ದವು ಎಂಬುದು ವಿಶೇಷ.
ಕೊಲಂಬೊ ಸ್ಟ್ರೈಕರ್ಸ್ ಪ್ರಯಾಣ ಅಂತ್ಯ
ಕೊಲಂಬೊ ಸ್ಟ್ರೈಕರ್ಸ್ ತಂಡವನ್ನು 74 ರನ್‌ಗಳಿಗೆ ಆಲೌಟ್ ಮಾಡಿದ ಗಾಲೆ ಟೈಟಾನ್ಸ್ ತಂಡ 8.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಇದೀಗ ಗಾಲೆ ಟೈಟಾನ್ಸ್ ವಿರುದ್ಧ 8 ವಿಕೆಟ್ಗಳ ಸೋಲು ಕಂಡ ಕೊಲಂಬೊ ಸ್ಟ್ರೈಕರ್ಸ್ ತಂಡದ ಲಂಕಾ ಪ್ರೀಮಿಯರ್ ಲೀಗ್ ಪ್ರಯಾಣ ಅಂತ್ಯಗೊಂಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:35 am, Wed, 16 August 23
