ಮೊದಲ ಪಂದ್ಯದಲ್ಲೇ ಬಾಬರ್ ತಂಡಕ್ಕೆ ಸೋಲು; 21 ರನ್ಗಳಿಂದ ಗೆದ್ದ ಜಾಫ್ನಾ ಕಿಂಗ್ಸ್
LPL 2023: ಸೀಸನ್ನ ಮೊದಲ ಪಂದ್ಯದಲ್ಲಿ ಕೊಲಂಬೊ ಸ್ಟ್ರೈಕರ್ ತಂಡವನ್ನು 21 ರನ್ಗಳಿಂದ ಮಣಿಸಿದ ಹಾಲಿ ಚಾಂಪಿನ್ ಜಾಫ್ನಾ ಕಿಂಗ್ಸ್ ಲೀಗ್ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ.
4ನೇ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ಗೆ (Lanka Premier League) ಅದ್ಧೂರಿ ಚಾಲನೆ ಸಿಕ್ಕಿದೆ. ಈ ಸೀಸನ್ನ ಉದ್ಘಾಟನಾ ಸಮಾರಂಭದ ನಂತರ ನಡೆದ ಮೊದಲ ಪಂದ್ಯದಲ್ಲಿ ಕೊಲಂಬೊ ಸ್ಟ್ರೈಕರ್ ತಂಡವನ್ನು 21 ರನ್ಗಳಿಂದ ಮಣಿಸಿದ ಹಾಲಿ ಚಾಂಪಿನ್ ಜಾಫ್ನಾ ಕಿಂಗ್ಸ್ (Jaffna Kings vs Colombo Stars) ಲೀಗ್ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಾಫ್ನಾ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕೊಲಂಬೊ ಸ್ಟ್ರೈಕರ್ ತಂಡ 19.4 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 152 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಸ್ಟಾರ್ ಆಟಗಾರರ ಆಮೆಗತಿಯ ಬ್ಯಾಟಿಂಗ್ಗೆ ಕೊಲಂಬೊ ಸ್ಟ್ರೈಕರ್ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಅದರಲ್ಲೂ ಪಾಕ್ ತಂಡದ ನಾಯಕ ಬಾಬರ್ ಅಜಮ್ (Babar Azam) ಟೆಸ್ಟ್ ಕ್ರಿಕೆಟ್ನಲ್ಲಿ ಬ್ಯಾಟ್ ಬೀಸುವಂತೆ ಬ್ಯಾಟ್ ಬೀಸಿದರು. ಹೀಗಾಗಿ ಒತ್ತಡಕ್ಕೆ ಸಿಲುಕಿದ ಕೊಲಂಬೊ ಸ್ಟ್ರೈಕರ್ ತಂಡಕ್ಕೆ ಸೋಲಿನ ದವಡೆಯಿಂದ ಪಾರಾಗಲು ಸಾಧ್ಯವಾಗಲಿಲ್ಲ.
173 ರನ್ ಟಾರ್ಗೆಟ್
ಈ ಪಂದ್ಯದಲ್ಲಿ ಟಾಸ್ ಗೆದ್ದ ಕೊಲಂಬೊ ಸ್ಟ್ರೈಕರ್ ತಂಡ, ಜಾಫ್ನಾ ಕಿಂಗ್ಸ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಆದರೆ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾದ ನಿಶಾನ್ ಮಧುಶಂಕ ಮತ್ತು ರಹಮಾನುಲ್ಲಾ ಗುರ್ಬಾಜ್ ಅವರನ್ನು ಜಾಫ್ನಾ ಬೇಗನೆ ಕಳೆದುಕೊಂಡಿತು. ಚರಿತ್ ಅಸಲಂಕಾ ಅವರ ಇನಿಂಗ್ಸ್ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ಆದರೆ, ತಂಡದ ಪರ ಅಬ್ಬರಿಸಿದ ಬಾಂಗ್ಲಾದೇಶದ ಯುವ ಬ್ಯಾಟ್ಸ್‌ಮನ್ ತೌಹಿದ್ ಹೃದಯೋ ಕೇವಲ 39 ಎಸೆತಗಳಲ್ಲಿ 54 ರನ್‌ಗಳ ನಿಷ್ಪಾಪ ಇನ್ನಿಂಗ್ಸ್ ಆಡಿದರು. ನಾಯಕ ತಿಸಾರ ಪೆರೇರಾ ಕೂಡ 14 ರನ್‌ಗಳ ಕೊಡುಗೆ ನೀಡಿದರು. ಅಂತಿಮವಾಗಿ ಜಾಫ್ನಾ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 173 ರನ್ ಕಲೆಹಾಕಿತು. ಕೊಲಂಬೊ ಸ್ಟ್ರೈಕರ್ ಪರ ನಸೀಮ್ ಶಾ, ಮತಿಶ ಪತಿರಾನ, ಚಮಿಕಾ ಕರುಣಾರತ್ನೆ ಮತ್ತು ಲಕ್ಷ್ಮಣ್ ಸಂಡಕನ್ ತಲಾ ಒಂದು ವಿಕೆಟ್ ಪಡೆದರು.
Honey Trap: ಹನಿ ಟ್ರ್ಯಾಪ್ ಬಲೆಗೆ ಬಿದ್ದ ಪಾಕ್ ನಾಯಕ ಬಾಬರ್ ಅಜಮ್! ವಿಡಿಯೋ ವೈರಲ್
ಬಾಬರ್ ತಂಡದ ಆಮೆಗತಿಯ ಬ್ಯಾಟಿಂಗ್
ಜಾಫ್ನಾ ಕಿಂಗ್ಸ್ ತಂಡ ನೀಡಿದ 173 ರನ್‌ಗಳ ಗುರಿ ಬೆನ್ನಟ್ಟಲಾರಂಭಿಸಿದ ಕೊಲಂಬೊ ಸ್ಟ್ರೈಕರ್ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕಜ್ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಜಮ್ ಕೇವಲ 7 ರನ್‌ಗಳಿಗೆ ತಿಸಾರ ಪೆರೇರಾಗೆ ಬಲಿಯಾದರು. ಪಾತುಮ್ ನಿಶಾಂಕ ಕೂಡ 2 ಎಸೆತಗಳಲ್ಲಿ 1 ರನ್ ಗಳಿಸಿ ಔಟಾದರು. ಹೀಗಾಗಿ ಕೊಲಂಬೊ ಸ್ಟ್ರೈಕರ್ ಆರಂಭದಲ್ಲೇ ಹೆಚ್ಚು ಒತ್ತಡಕ್ಕೆ ಸಿಲುಕಿತು. ಆದರೆ ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಮತ್ತೊಬ್ಬ ಆರಂಭಿಕ ನಿರೋಶನ್ ಡಿಕ್ವೆಲ್ಲಾ 34 ಎಸೆತಗಳಲ್ಲಿ 58 ರನ್‌ಗಳ ಇನ್ನಿಂಗ್ಸ್ ಆಡಿದರು. ಆದರೆ ಅವರಿಗೆ ಸಾಥ್ ನೀಡುವ ಮತ್ತೊಬ್ಬ ಜೊತೆಗಾರ ಸಿಗಲಿಲ್ಲ. ಹೀಗಾಗಿ ಕೊಲಂಬೊ ತಂಡ 19.4 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟ್ ಆಯಿತು. ಜಾಫ್ನಾ ಕಿಂಗ್ಸ್ ಪರ ಬೌಲಿಂಗ್ನಲ್ಲಿ ಮಿಂಚಿದ ಹರ್ಡೋಸ್ ವಿಲ್ಜೋನ್ 3 ವಿಕೆಟ್ ಮತ್ತು ಎಡಗೈ ವೇಗಿ ದಿಲ್ಶನ್ ಮಧುಶಂಕ ಮತ್ತು ವಿಜಯಕಾಂತ್ ಬಿಯಾಸ್ಕಂತ್ ತಲಾ 2 ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:44 am, Mon, 31 July 23