ಕೆಎಲ್ ರಾಹುಲ್​ ಸಿಕ್ಸ್​ಗೆ ಬೆರಗಾದ ಗೌತಮ್ ಗಂಭೀರ್!

India vs Afghanistan, 1st ODI: ಮಳೆಯ ಕಾರಣ 25 ಓವರ್​ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡ 194 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಟೀಮ್ ಇಂಡಿಯಾ 22.5 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಕೆಎಲ್ ರಾಹುಲ್​ ಸಿಕ್ಸ್​ಗೆ ಬೆರಗಾದ ಗೌತಮ್ ಗಂಭೀರ್!
Gautam Gambhir - Kl Rahul
Image Credit source: JioHotstar

Updated on: Jun 14, 2026 | 7:57 AM

ಅಫ್ಘಾನಿಸ್ತಾನ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು.  ಈ ಸ್ಫೋಟಕ ಬ್ಯಾಟಿಂಗ್​ ನಡುವೆ ಕೆಲವು ಕ್ಲಾಸ್ ಶಾಟ್​ಗಳಿಂದ ಗಮನ ಸೆಳೆದಿದ್ದರು. ಈ ವೇಳೆ ಡಗೌಟ್‌ನಲ್ಲಿ ಕುಳಿತಿದ್ದ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ನೀಡಿದ ರಿಯಾಕ್ಷನ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಗಂಭೀರ್ ರಿಯಾಕ್ಷನ್!

21ನೇ ಓವರ್​ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 161 ರನ್​ ಕಲೆಹಾಕಿತ್ತು. ಅದರಂತೆ ಕೊನೆಯ 4 ಓವರ್​ಗಳಲ್ಲಿ ಭಾರತ ತಂಡಕ್ಕೆ 33 ರನ್​ಗಳ ಅವಶ್ಯಕತೆಯಿತ್ತು. 22ನೇ ಓವರ್​ನಲ್ಲಿ ಅಫ್ಘಾನಿಸ್ತಾನದ ವೇಗಿ ಝಿಯಾ ಉರ್ ರೆಹಮಾನ್ ಶರೀಫಿ ಎಸೆದ ಫುಲ್ ಲೆಂಗ್ತ್ ಎಸೆತವನ್ನು ಕೆಎಲ್ ರಾಹುಲ್ ಅತ್ಯಂತ ನಯವಾಗಿ, ಬ್ಯಾಟ್ ಫೇಸ್ ಓಪನ್ ಮಾಡಿ ಕವರ್ಸ್ ಮೇಲಿಂದ ಭರ್ಜರಿಯಾಗಿ ಸಿಕ್ಸರ್​​ಗಟ್ಟಿದರು.

ಸಾಮಾನ್ಯವಾಗಿ ಗಂಭೀರ ಮುಖಭಾವಕ್ಕೇ ಹೆಸರಾದ ಗೌತಮ್ ಗಂಭೀರ್, ಈ ಶಾಟ್ ನೋಡಿದ ತಕ್ಷಣ ಒಂದು ಕ್ಷಣ ಆಶ್ಚರ್ಯಚಕಿತರಾದರು. ತಕ್ಷಣವೇ ಪಕ್ಕದಲ್ಲೇ ಕುಳಿತಿದ್ದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಕಡೆಗೆ ತಿರುಗಿ ಅಚ್ಚರಿಯ ನೋಟವನ್ನು ವಿನಿಮಯ ಮಾಡಿಕೊಂಡರು. ಗಂಭೀರ್ ಅವರ ಈ ಅಪರೂಪದ ಹಾವಭಾವದ ತುಣುಕು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಂದ್ಯದ ಮುಖ್ಯಾಂಶಗಳು:

  • ಕೆಎಲ್ ಕಮಾಲ್: 5ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರಾಹುಲ್ ಕೇವಲ 19 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಅಬ್ಬರದ 39 ರನ್* ಸಿಡಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.
  • ಗಿಲ್ ಮೈಲಿಗಲ್ಲು: ನಾಯಕ ಶುಭ್​ಮನ್ ಗಿಲ್ 84* ರನ್ ಗಳಿಸಿ ಅಜೇಯರಾಗಿ ಉಳಿದಿದ್ದಲ್ಲದೆ, ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ (62 ಇನಿಂಗ್ಸ್) 3,000 ರನ್ ಪೂರೈಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಬರೆದರು.
  • ಅಫ್ಘಾನ್ ಹೋರಾಟ: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ, ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಝ್ ಅವರ ಆಕರ್ಷಕ ಶತಕದ (102 ರನ್) ನೆರವಿನೊಂದಿಗೆ 194 ರನ್‌ಗಳಿಸಲು ಶಕ್ತರಾಗಿದ್ದರು.
  • ಟೀಮ್ ಇಂಡಿಯಾಗೆ ಜಯ: ಮಳೆಯ ಕಾರಣ 25 ಓವರ್​ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ 22.5 ಓವರ್​ಗಳಲ್ಲಿ 195 ರನ್​ ಬಾರಿಸಿ ಟೀಮ್ ಇಂಡಿಯಾ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಇದನ್ನೂ ಓದಿ: Shubman Gill: ಪರವಾಗಿಲ್ಲ, ತಪ್ಪು ನನ್ನದೇ ಅಂದಿದ್ದಾರೆ..!

ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಇನ್ನು ಉಭಯ ತಂಡಗಳ ಎರಡನೇ ಮುಖಾಮುಖಿ ಜುಲೈ 17 ರಂದು ನಡೆಯಲಿದ್ದು, ಈ ಪಂದ್ಯಕ್ಕೆ ಲಕ್ನೋನ ಏಕಾನ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us