‘ಸಚಿನ್ ನಿವೃತ್ತಿಯ ಯೋಚನೆಯಲ್ಲಿದ್ದರು’; ಕ್ರಿಕೆಟ್ ದೇವರ ಬಗ್ಗೆ ಗ್ಯಾರಿ ಕರ್ಸ್ಟನ್ ಶಾಕಿಂಗ್ ಹೇಳಿಕೆ
ನಾನು ತಂಡ ಸೇರಿಕೊಂಡಾಗ ಸಚಿನ್ ತೆಂಡೂಲ್ಕರ್ ಅಷ್ಟು ತೃಪ್ತರಂತೆ ಕಾಣಿಸುತ್ತಿರಲಿಲ್ಲ. ಸಚಿನ್ಗೆ ಆದಾಗಲೆ ಸಾಕಷ್ಟು ಅವಕಾಶ ನೀಡಿದ್ದರೂ, ಅವರು ಕ್ರಿಕೆಟ್ ಅನ್ನು ಅಷ್ಟಾಗಿ ಆನಂದಿಸುತ್ತಿರಲಿಲ್ಲ.

ಟೀಂ ಇಂಡಿಯಾವನ್ನು (Team India) ಏಕದಿನ ವಿಶ್ವ ಚಾಂಪಿಯನ್ ಮಾಡಿದ್ದ ಜಾಗತಿಕ ಕ್ರಿಕೆಟ್ನ ಅತ್ಯುತ್ತಮ ತರಬೇತುದಾರರಲ್ಲಿ ಒಬ್ಬರಾದ ಗ್ಯಾರಿ ಕರ್ಸ್ಟನ್ (Gary Kirsten) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಟೀಂ ಇಂಡಿಯಾ 2011 ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಕರ್ಸ್ಟನ್ ಪಾತ್ರ ಆಘಾತವಾಗಿದೆ. ಆದರೆ, ಇದೇ ಕರ್ಸ್ಟನ್ ಈಗ ಟೀಂ ಇಂಡಿಯಾ ಹಾಗೂ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಬಗ್ಗೆ ನೀಡಿರುವ ಹೇಳಿಕೆಗಳು ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಸಂಚಲನ ಮೂಡಿಸಿವೆ. ದಿ ಫೈನಲ್ ವರ್ಲ್ಡ್ ಕ್ರಿಕೆಟ್ ಪಾಡ್‌ಕಾಸ್ಟ್ ಶೋನಲ್ಲಿ ಮಾತನಾಡಿದ ಗ್ಯಾರಿ ಕ್ರರ್ಸ್ಟನ್, ಅವರು ಭಾರತೀಯ ತಂಡವನ್ನು ಸೇರಿದಾಗ ಅವರು ಎದುರಿಸಿದ ಸವಾಲುಗಳು ಹಾಗೂ ವಿದಾಯದ ಚಿಂತನೆಯಲ್ಲಿದ್ದ ತೆಂಡೂಲ್ಕರ್ ಅವರನ್ನು ಮರಳಿ ಟ್ರ್ಯಾಕ್‌ಗೆ ತರುವುದಕ್ಕೆ ತಾನು ಮಾಡಿದ ಕಸರತ್ತುಗಳೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ.
ಆಟಗಾರರು ಖಿನ್ನತೆಗೆ ಒಳಗಾಗಿದ್ದರು
“ನಾನು ಟೀಂ ಇಂಡಿಯಾದ ಕೋಚ್ ಹುದ್ದೆಯನ್ನು ವಹಿಸಿಕೊಳ್ಳುವ ಮೊದಲು, ಗ್ರೆಗ್ ಚಾಪೆಲ್ ಅವರಡಿಯಲ್ಲಿದ್ದ ತಂಡವು ಪ್ರಕ್ಷುಬ್ಧವಾಗಿತ್ತು. ಹಾಗೆಯೇ 2007ರ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಅದರಲ್ಲೂ ಗುಂಪು ಹಂತದಲ್ಲಿಯೇ ತಂಡ ಟೂರ್ನಿಯಿಂದ ಹೊರಬಿದ್ದ ಬಳಿಕ ತಂಡದ ಕೆಲವು ಅನುಭವಿ ಆಟಗಾರರು ಖಿನ್ನತೆಗೆ ಒಳಗಾಗಿದ್ದರು. ನಾನು ಟೀಂ ಇಂಡಿಯಾದ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗ ತಂಡವನ್ನು ಪ್ರಶಸ್ತಿ ಗೆಲ್ಲುವಂತೆ ಮಾಡುವ ಉದ್ದೇಶವಿತ್ತು. ಆದರೆ ತಂಡದಲ್ಲಿ ಭಯದ ವಾತಾವರಣವಿತ್ತು. ತಂಡದಲ್ಲಿನ ಆ ವಾತಾವರಣದಿಂದ ಸಚಿನ್ ತೆಂಡೂಲ್ಕರ್ ಅಸಮಾಧಾನಗೊಂಡಿದ್ದರು. ಹೀಗಾಗಿ ಸಚಿನ್ ವೃತ್ತಿ ಜೀವನದಿಂದ ನಿವೃತ್ತರಾಗುವ ಯೋಚನೆಯಲ್ಲಿದ್ದರು. ಆ ಸಮಯದಲ್ಲಿ ಸಚಿನ್ ಅವರನ್ನು ಮತ್ತೆ ಟ್ರ್ಯಾಕ್ ತರುವುದು ನನಗೆ ಸವಾಲಿನ ಕೆಲಸವಾಗಿತ್ತು.
ಮತ್ತೆ ಅಖಾಡಕ್ಕಿಳಿದ ಕ್ರಿಕೆಟ್ ದೇವರು! ಅದರಲ್ಲೂ ನಾಯಕನಾಗಿ ಬ್ಯಾಟ್ ಬೀಸಲಿರುವ ಸಚಿನ್ ತೆಂಡೂಲ್ಕರ್
ತಂಡದಲ್ಲಿ ಬಹಳಷ್ಟು ಅತೃಪ್ತಿ ಇತ್ತು
“ಈ ಅತ್ಯಂತ ಪ್ರತಿಭಾನ್ವಿತ ತಂಡದ ಜವಬ್ದಾರಿವಹಿಸಿಕೊಂಡು ಅದನ್ನು ವಿಶ್ವವನ್ನು ಸೋಲಿಸುವ ತಂಡವಾಗಿ ಪರಿವರ್ತಿಸಲು ಯಾವ ರೀತಿಯ ನಾಯಕತ್ವದ ಅಗತ್ಯವಿದೆ ಎಂಬುದು ನನಗೆ ಆಗ ಎದ್ದು ಕಾಣುವ ಅಂಶವಾಗಿತ್ತು. ನಾನು ಕೋಚ್ ಆಗಿ ನೇಮಕಗೊಂಡಾಗ ತಂಡದಲ್ಲಿ ಬಹಳಷ್ಟು ಸಮಸ್ಯೆಗಳಿದ್ದವು. ಅಲ್ಲದೆ ತಂಡದಲ್ಲಿ ಬಹಳಷ್ಟು ಅತೃಪ್ತಿ ಇತ್ತು. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳುವುದು ನನಗೆ ಹೆಚ್ಚು ಮುಖ್ಯವಾಗಿತ್ತು. ಹಾಗೆಯೇ ಯಾವ ಆಟಗಾರ ಯಾವ ಆರ್ಡರ್ಗೆ ಹೊಂದಿಕೊಳ್ಳುತ್ತಾರೆ. ಅಲ್ಲದೆ ಅವರು ಸಂಪೂರ್ಣವಾಗಿ ಕ್ರಿಕೆಟ್ನಲ್ಲಿ ತೊಡಗಿಸಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಹೆಚ್ಚು ಮುಖ್ಯವಾಗಿತ್ತು.
ನಾನು ತಂಡ ಸೇರಿಕೊಂಡಾಗ ಸಚಿನ್ ತೆಂಡೂಲ್ಕರ್ ಅಷ್ಟು ತೃಪ್ತರಂತೆ ಕಾಣಿಸುತ್ತಿರಲಿಲ್ಲ. ಸಚಿನ್ಗೆ ಆದಾಗಲೆ ಸಾಕಷ್ಟು ಅವಕಾಶ ನೀಡಿದ್ದರೂ, ಅವರು ಕ್ರಿಕೆಟ್ ಅನ್ನು ಅಷ್ಟಾಗಿ ಆನಂದಿಸುತ್ತಿರಲಿಲ್ಲ. ಹೀಗಾಗಿ ಅವರು ನಿವೃತ್ತಿ ಹೊಂದಬೇಕು ಎಂದು ಅವರು ಭಾವಿಸಿದ್ದರು. ಈ ವೇಳೆ ನಾನು ಸಚಿನ್ ತೆಂಡೂಲ್ಕರ್ರನ್ನು ಸಂತೈಸಿಸಿ, ಅವರಿಂದ ತಂಡಕ್ಕೆ ಇನ್ನು ಸಾಕಷ್ಟು ಕೊಡುಗೆ ನೀಡುವುದಿದೆ ಎಂಬುದನ್ನು ಸಚಿನ್ಗೆ ಅರ್ಥ ಮಾಡಿಸುವುದು ನನಗೆ ಮುಖ್ಯವಾಗಿತ್ತು ಎಂದು ಟೀಂ ಇಂಡಿಯಾ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ತಮ್ಮ ಕೋಚಿಂಗ್ ಅನುಭವಗಳನ್ನು ಮೆಲುಕು ಹಾಕಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:28 pm, Wed, 15 February 23
