ಶುಕ್ರವಾರ ಮೊಹಾಲಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಐದು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಟೀಂ ಇಂಡಿಯಾ (India vs Australia) ಏಕದಿನ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೇರಿದೆ. ಅಲ್ಲದೆ ಮೂರೂ ಮಾದರಿಯ ಕ್ರಿಕೆಟ್ನಲ್ಲೂ ನಂಬರ್ 1 (ICC ODI Rankings) ತಂಡವಾಗಿ ಹೊರಹೊಮ್ಮಿದೆ. ಇದು ಭಾರತ ಕ್ರಿಕೆಟ್ ಹಾಗೂ ಅದರ ಅಭಿಮಾನಿಗಳಿಗೆ ಹೆಮ್ಮೆಯ ವಿಚಾರಚಾಗಿದೆ. ಆದರೆ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ಗೆ (Gautam Gambhir) ಮಾತ್ರ ಈ ವಿಚಾರ ತೃಪ್ತಿ ತಂದಿಲ್ಲ. ಈ ಬಗ್ಗೆ ಮಾತನಾಡಿರುವ ಗಂಭೀರ್, ನಮಗೆ ನಂಬರ್ 1 ಸ್ಥಾನ ಮುಖ್ಯವಲ್ಲ. ಬದಲಿಗೆ ಈ ವರ್ಷ ಏಕದಿನ ವಿಶ್ವಕಪ್ (ODI World Cup 2023) ಗೆಲ್ಲುವುದು ಭಾರತ ತಂಡದ ಗುರಿಯಾಗಿದೆ ಎಂದಿದ್ದಾರೆ. ಅಲ್ಲದೆ ಈ ಪ್ರಮುಖ ಈವೆಂಟ್ ಗೆಲ್ಲಬೇಕಾದರೆ ಟೀಂ ಇಂಡಿಯಾ, ಆಸ್ಟ್ರೇಲಿಯಾವನ್ನು ಸೋಲಿಸಬೇಕು ಎಂದಿದ್ದಾರೆ.
ವಾಸ್ತವವಾಗಿ ಗಂಭೀರ್ ಅವರ ಹೇಳಿಕೆಗೂ ಕಾರಣವೂ ಇದ್ದು, ಐಸಿಸಿ ಸ್ಪರ್ಧೆಗಳಲ್ಲಿ ಆಸ್ಟ್ರೇಲಿಯಾದ ಸಾಧನೆ ಗಮನಾರ್ಹವಾಗಿದೆ. ಆಸ್ಟ್ರೇಲಿಯಾ 50 ಓವರ್‌ಗಳ ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವುದರಿಂದ, ಇದು ಅತ್ಯಂತ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಆದರೆ, ಭಾರತ ತಂಡ ಅವರಿಗಿಂತ ಉತ್ತಮ ಪ್ರದರ್ಶನ ನೀಡಬಲ್ಲದು ಎಂಬ ಭರವಸೆ ಗಂಭೀರ್ ಅವರಲ್ಲಿದೆ. ಸ್ಟಾರ್ ಸ್ಪೋರ್ಟ್ಸ್‌ನ ವಿಶೇಷ ಪ್ರದರ್ಶನ ‘ಮಿಷನ್ ವರ್ಲ್ಡ್ ಕಪ್’ ನಲ್ಲಿ ಮಾತನಾಡುತ್ತಾ ಗಂಭೀರ್, ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಪ್ರಮುಖ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು.
‘ಇವರಿನ್ನು ಪಾಠ ಕಲಿತಿಲ್ಲ’; ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗವನ್ನು ಟೀಕಿಸಿದ ಗಂಭೀರ್
‘ನೋಡಿ, ನಾನು ಇದನ್ನು ಯಾವಾಗಲೂ ಹೇಳುತ್ತೇನೆ. ನೀವು ವಿಶ್ವಕಪ್ ಗೆಲ್ಲಬೇಕಾದರೆ ನೀವು ಆಸ್ಟ್ರೇಲಿಯಾವನ್ನು ಸೋಲಿಸಬೇಕು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. 2007 ರಲ್ಲಿ ನಾವು ಟಿ20 ವಿಶ್ವಕಪ್ ಗೆದ್ದಾಗ, ನಾವು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ್ದೇವು. ಹಾಗೆಯೇ 2011 ರಲ್ಲಿ, ನಾವು ಏಕದಿನ ವಿಶ್ವಕಪ್ ಗೆದ್ದಾಗ, ನಾವು ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ್ದೇವು. ಯಾವುದೇ ಐಸಿಸಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಬಲಿಷ್ಠ ತಂಡವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ರ್ಯಾಂಕಿಂಗ್ ವಿಚಾರವನ್ನು ನಿಮ್ಮ ಯೋಚನೆಯಿಂದ ತೆಗೆದುಹಾಕಿ’ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಗಂಭೀರ್, ‘ನೀವು ಶ್ರೇಯಾಂಕದಲ್ಲಿ ಯಾವುದೇ ಸ್ಥಾನದಲ್ಲಿರಬಹುದು, ಆದರೆ ದೊಡ್ಡ ಪಂದ್ಯಾವಳಿಗಳು ಮತ್ತು ವಿಶ್ವಕಪ್‌ಗೆ ಬಂದಾಗ, ಆಸ್ಟ್ರೇಲಿಯಾದ ಆಟಗಾರರು ನೀಡುವ ಪ್ರದರ್ಶನವೇ ಭಿನ್ನ ಎಂದು ನಾನು ಭಾವಿಸುತ್ತೇನೆ. ಅವರಲ್ಲಿ ಆತ್ಮವಿಶ್ವಾಸವಿದೆ. ಆ ದೊಡ್ಡ ಟೂರ್ನಿಗಳಲ್ಲಿ ಆಡುವ ಸಾಮರ್ಥ್ಯ ಆಸ್ಟ್ರೇಲಿಯಾಕ್ಕಿದೆ’ ಎಂದಿದ್ದಾರೆ.
ಇನ್ನು 2015ರ ವಿಶ್ವಕಪ್ ಸೋಲಿನ ಬಗ್ಗೆಯೂ ಪ್ರಸ್ತಾಪಿಸಿದ ಗಂಭೀರ್, ‘ನಾವು 2015 ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಕಾಲಿ ಕೈಯಲ್ಲಿ ವಾಪಸ್ಸಾಗಿದ್ದೇವು. ಹಾಗಾಗಿ ಈ ವರ್ಷ ನಾವು ವಿಶ್ವಕಪ್ ಗೆಲ್ಲಬೇಕಾದರೆ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ನಮಗೆ ಅತ್ಯಂತ ಪ್ರಮುಖ ಪಂದ್ಯವಾಗಲಿದೆ ಎಂದು ನಾನು ನಂಬುತ್ತೇನೆ. ಅಲ್ಲದೆ ನಾವು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸುತ್ತಿದ್ದೇವೆ. ಹೀಗಾಗಿ ಇದಕ್ಕಿಂತ ಉತ್ತಮವಾದದ್ದು ನಮಗೆ ಯಾವುದೂ ಇಲ್ಲ. ಆದ್ದರಿಂದ ಆಸ್ಟ್ರೇಲಿಯಾವನ್ನು ಸೋಲಿಸುವುದು ಬಹಳ ಮುಖ್ಯ ಎಂದು ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:28 am, Sun, 24 September 23