ಏಷ್ಯನ್ ಗೇಮ್ಸ್ನಲ್ಲಿ ಫೈನಲ್ಗೆ ಲಗ್ಗೆಯಿಟ್ಟ ಭಾರತ ಮಹಿಳಾ ಕ್ರಿಕೆಟ್ ತಂಡ: 8 ವಿಕೆಟ್ಗಳ ಜಯ
Asian Games Womens T20I, India Women vs Bangladesh Women, Semi Final 1: ಏಷ್ಯನ್ ಗೇಮ್ಸ್ 2023ರಲ್ಲಿ ಬಾಂಗ್ಲಾದೇಶ ವಿರುದ್ಧ 8 ವಿಕೆಟ್ಗಳ ಅಮೋಘ ಗೆಲುವಿನ ಮೂಲಕ ಭಾರತ ಮಹಿಳಾ ಕ್ರಿಕೆಟ್ ತಂಡ ಫೈನಲ್ಗೆ ಲಗ್ಗೆಯಿಟ್ಟಿದೆ. ಫೈನಲ್ ಪಂದ್ಯ ಸೋಮವಾರ ಏರ್ಪಡಿಸಲಾಗಿದೆ. ಎರಡನೇ ಸೆಮಿ ಫೈನಲ್ನಲ್ಲಿ ಪಾಕಿಸ್ತಾನ-ಶ್ರೀಲಂಕಾ ಮುಖಾಮುಖಿ ಆಗಲಿದ್ದು, ಇಲ್ಲಿ ಗೆದ್ದ ತಂಡದ ಜೊತೆ ಭಾರತ ಫೈನಲ್ನಲ್ಲಿ ಚಿನ್ನಕ್ಕೆ ಹೋರಾಡಲಿದೆ.
ಚೀನಾದ ಹ್ಯಾಂಗ್‌ಝೌನಲ್ಲಿ ಆಯೋಜಿಸಿರುವ ಏಷ್ಯನ್ ಗೇಮ್ಸ್ 2023ರ (Asian Games 2023) ಮಹಿಳಾ ಟಿ20 ಯಲ್ಲಿ ಭಾರತ ಕ್ರಿಕೆಟ್ ತಂಡ ಫೈನಲ್ಗೆ ಪ್ರವೇಶಿಸಿದೆ. ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಸ್ಮೃತಿ ಮಂದಾನ ನಾಯಕತ್ವದ ಭಾರತ ಮಹಿಳಾ ತಂಡ 8 ವಿಕೆಟ್ಗಳ ಜಯ ಸಾಧಿಸಿ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಈ ಮೂಲಕ ಪದಕವನ್ನು ಖಚಿತ ಪಡಿಸಿದೆ. ಫೈನಲ್ನಲ್ಲಿ ಭಾರತ ತಂಡ ಪಾಕಿಸ್ತಾನ ಅಥವಾ ಶ್ರೀಲಂಕಾವನ್ನು ಎದುರಿಸಲಿದೆ.
ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಮಹಿಳಾ ತಂಡ ಭಾರತದ ಬೌಲಿಂಗ್ ಬಿರುಗಾಳಿಗೆ ತತ್ತರಿಸಿ ಹೋಯಿತು. ಮೊದಲ ಓವರ್ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಬಾಂಗ್ಲಾ ಕೇವಲ 51 ರನ್ಗಳಿಗೆ ಆಲೌಟ್ ಆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶಕ್ಕೆ ಪೂಜಾ ವಸ್ತ್ರಾಕರ್ ಆರಂಭದಲ್ಲೇ ಶಾಕ್ ನೀಡಿದರು. ಪೂಜಾ ತಮ್ಮ ಮೊದಲ ಓವರ್ನ ಮೊದಲ ಎಸೆತದಲ್ಲೇ ಶಾಥಿ ರಾಣಿಯನ್ನು ಔಟ್ ಮಾಡಿದರೆ, 5ನೇ ಎಸೆತದಲ್ಲಿ ಶಮೀಮಾ ಸುಲ್ತಾನ ಎಲ್ಬಿ ಬಲೆಗೆ ಬಿದ್ದು ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. ಬಳಿಕ ಸೋಭಾನಾ ಮೊಸ್ತರಿ 8 ರನ್ ಗಳಿಸಿ ನಿರ್ಗಮಿಸಿದರು.
IND vs AUS: ಟೀಮ್ ಇಂಡಿಯಾ ಪ್ಲೇಯಿಂಗ್ 11 ನಲ್ಲಿ ಒಂದು ಬದಲಾವಣೆ ಸಾಧ್ಯತೆ
ರಿತು ಮೋನಿ 8 ರನ್, ಮಾರುಫಾ ಅಕ್ಟರ್ 0, ಶೋರ್ನಾ ಅಕ್ಟರ್ 0, ಫಾಹಿಮಾ ಖಾತುನ್ 0, ಸುಲ್ತಾನಾ ಖಾತುನ್ 3, ರಬೇಯಾ ಖಾನ್ 3 ಹಾಗೂ ನಹಿದಾ ಅಕ್ಟರ್ 9 ರನ್ ಗಳಿಸಿ ಅಜೇಯರಾಗಿ ಉಳಿದರು. ಬಾಂಗ್ಲಾ 17.5 ಓವರ್ಗಳಲ್ಲಿ 51 ರನ್ಗಳಿಗೆ ಆಲೌಟ್ ಆಯಿತು. ಭಾರತ ಪರ ಪೂಜಾ 4 ಓವರ್ ಬೌಲಿಂಗ್ ಮಾಡಿ 17 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಟಿಟಾಸ್ ಸಾಧು , ದೇವಿಕಾ ವೈದ್ಯ , ಅಮಂಜೋತ್ ಕೌರ್ , ರಾಜೇಶ್ವರಿ ಗಾಯಕ್ವಾಡ್ ತಲಾ 1 ವಿಕೆಟ್ ಪಡೆದರು.
52 ರನ್ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಭಾರತ ಮಹಿಳಾ ತಂಡ ನಾಯಕಿ ಸ್ಮೃತಿ ಮಂಧಾನ (7) ಹಾಗೂ ಶಫಾಲಿ ವರ್ಮಾ (17) ವಿಕೆಟ್ ಕಳೆದುಕೊಂಡಿತಾದರೂ ಯಾವುದೇ ತೊಂದರೆ ಆಗಲಿಲ್ಲ. ಜೆಮಿಮಾ ರೋಡ್ರಿಗಸ್ (20) ಹಾಗೂ ಕನಿಕಾ ಅಹುಜಾ (1) 8.2 ಓವರ್ಗಳಲ್ಲೇ ಪಂದ್ಯವನ್ನು ಮುಗಿಸಿದರು.
8 ವಿಕೆಟ್ಗಳ ಅಮೋಘ ಗೆಲುವಿನ ಮೂಲಕ ಭಾರತ ಮಹಿಳಾ ಕ್ರಿಕೆಟ್ ತಂಡ ಏಷ್ಯನ್ ಗೇಮ್ಸ್ 2023 ರಲ್ಲಿ ಫೈನಲ್ಗೆ ಲಗ್ಗೆಯಿಟ್ಟಿದೆ. ಫೈನಲ್ ಪಂದ್ಯ ಸೋಮವಾರ ಏರ್ಪಡಿಸಲಾಗಿದೆ. ಎರಡನೇ ಸೆಮಿ ಫೈನಲ್ನಲ್ಲಿ ಪಾಕಿಸ್ತಾನ-ಶ್ರೀಲಂಕಾ ಮುಖಾಮುಖಿ ಆಗಲಿದ್ದು, ಇಲ್ಲಿ ಗೆದ್ದ ತಂಡದ ಜೊತೆ ಭಾರತ ಫೈನಲ್ನಲ್ಲಿ ಚಿನ್ನಕ್ಕೆ ಹೋರಾಡಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:38 am, Sun, 24 September 23