ಇಂದು ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ: ಸರಣಿ ಜಯದ ಮೇಲೆ ರಾಹುಲ್ ಕಣ್ಣು
India vs Australia Second ODI Preview: ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ದ್ವಿತೀಯ ಏಕದಿನ ಪಂದ್ಯ ನಡೆಯಲಿದೆ. 1-0 ಅಂತರದಿಂದ ಸರಣಿ ಮುನ್ನಡೆ ಪಡೆದುಕೊಂಡಿರುವ ಭಾರತ ಇಂದಿನ ಪಂದ್ಯ ಗೆದ್ದು ಪ್ರಶಸ್ತಿ ವಶಪಡಿಸಿಕೊಳ್ಳುವ ಪ್ಲಾನ್ನಲ್ಲಿದೆ. ಇತ್ತ ಕಾಂಗರೂ ಪಡೆಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಮ್ಯಾಚ್ ಆಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ದ್ವಿತೀಯ ಏಕದಿನ ಪಂದ್ಯವನ್ನು ಇಂದು ಆಯೋಜಿಸಲಾಗಿದೆ. ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈಗಾಗಲೇ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ತೋರಿ 5 ವಿಕೆಟ್ಗಳ ಜಯ ಸಾಧಿಸಿದೆ. ಹೀಗಾಗಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇಂದಿನ ಪಂದ್ಯವನ್ನು ರಾಹುಲ್ ಪಡೆ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ.
ಅಯ್ಯರ್-ಅಶ್ವಿನ್ಗೆ ಅಗ್ನಿ ಪರೀಕ್ಷೆ:
ಭಾರತ ಪರ ಶ್ರೇಯಸ್ ಅಯ್ಯರ್ ಹಾಗೂ ರವಿಚಂದ್ರನ್ ಅಶ್ವಿನ್ಗೆ ಈ ಪಂದ್ಯ ಮಹತ್ವದ್ದಾಗಿದೆ. ಇಂಜುರಿಯಿಂದ ಕಮ್ಬ್ಯಾಕ್ ಮಾಡಿದ ಬಳಿಕ ಫಾರ್ಮ್ ಕಂಡುಕೊಳ್ಳಲು ಅಯ್ಯರ್ ಪರದಾಡುತ್ತಿದ್ದಾರೆ. ವಿಶ್ವಕಪ್ ದೃಷ್ಟಿಯಿಂದ ಶ್ರೇಯಸ್ ಮೇಲೆ ಸಾಕಷ್ಟು ಒತ್ತಡವಿದೆ. ಇತ್ತ ಆಕಸ್ಮಿಕವಾಗಿ ಆಯ್ಕೆ ಆಗಿರುವ ಅಶ್ವಿನ್ ಮೊದಲ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರಲಿಲ್ಲ. ವಿಶ್ವಕಪ್ಗೆ ಆಯ್ಕೆ ಆಗಬೇಕು ಎಂದರೆ ಅಶ್ವಿನ್ ಸ್ಪಿನ್ ಕೆಲಸ ಮಾಡಬೇಕಿದೆ. ರವೀಂದ್ರ ಜಡೇಜಾ ಕೂಡ ಬ್ಯಾಟಿಂಗ್ನಲ್ಲಿ ಕೊಡುಗೆ ಸಲ್ಲಿಸಬೇಕಿದೆ. ಉಳಿದಂತೆ ಎಲ್ಲ ಆಟಗಾರರು ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇಂದಿನ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಅನುಮಾನ.
ಭರ್ಜರಿ ಬೌಲಿಂಗ್: ದ್ವಿತೀಯ ಸ್ಥಾನಕ್ಕೇರಿದ ಮೊಹಮ್ಮದ್ ಶಮಿ
ಆಸೀಸ್ಗೆ ಮಾಡು ಇಲ್ಲವೇ ಮಡಿ ಪಂದ್ಯ:
ಇತ್ತ ಕಾಂಗರೂ ಪಡೆ ಸರಣಿ ವಶಪಡಿಸಿಕೊಳ್ಳಬೇಕಾದರೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಿದೆ. ತಂಡ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವುತ್ತಿದೆ. ಮಿಚೆಲ್ ಮಾರ್ಶ್ ಕಡೆಯಿಂದ ಉತ್ತಮ ಆಟ ಬರುತ್ತಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ತಂಡಕ್ಕೆ ಇನ್ನಷ್ಟು ಆಸರೆಯಾಗಬೇಕಿದೆ. ಆಸ್ಟ್ರೇಲಿಯಾ ತಂಡದಲ್ಲಿ ಮಾರಕ ಬೌಲರ್ಗಳಿದ್ದರೂ ಪರಿಣಾಮಕಾರಿ ಆಗಿ ಗೋಚರಿಸುತ್ತಿಲ್ಲ. ಪ್ಯಾಟ್ ಕಮಿನ್ಸ್, ಸ್ಟೊಯಿನಿಸ್, ಝಂಪಾ, ಅಬಾಟ್ ಮೇಲೆ ಹೆಚ್ಚಿನ ಒತ್ತಡವಿದೆ.
ಇಂದೋರ್ ಹವಾಮಾನ ವರದಿ:
ಹೋಳ್ಕರ್ ಕ್ರೀಡಾಂಗಣದ ಸುತ್ತಮುತ್ತ ಮೋಡ ಕವಿದ ವಾತಾವರಣ ಇರುತ್ತದೆ. ಮಧ್ಯಾಹ್ನ 3ರಿಂದ 7 ಗಂಟೆವರೆಗೆ ಸಣ್ಣ ಮಳೆಯಾಗುವ ಸಾಧ್ಯತೆ ಇದೆ. ಆದರೆ, ಪಂದ್ಯದ ವೇಳೆ ಮೈದಾನ ಮತ್ತು ಪಿಚ್ ಅನ್ನು ಸುರಕ್ಷಿತವಾಗಿರಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮೈದಾನ ಹಾಗೂ ಪಿಚ್ ಅನ್ನು ಮುಚ್ಚಲು ಹೊಸ ಕವರ್ಗಳನ್ನೂ ತಯಾರು ಮಾಡಿದ್ದಾರೆ. ಪಂದ್ಯದ ವೇಳೆ ಮಳೆ ಬೀಳುವ ಸಾಧ್ಯತೆಯಿರುವುದರಿಂದ ಹೋಳ್ಕರ್ ಕ್ರೀಡಾಂಗಣದ ಮೈದಾನದಲ್ಲಿ ಸುಮಾರು 120 ಸಿಬ್ಬಂದಿಯನ್ನು ವಿಶೇಷವಾಗಿ ನಿಯೋಜಿಸಲಾಗಿದೆಯಂತೆ.
ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ತಿಲಕ್ ವರ್ಮಾ, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಅಲೆಕ್ಸ್ ಕ್ಯಾರಿ, ಮಾರ್ನಸ್ ಲಾಬುಶೇನ್, ಸೀನ್ ಅಬಾಟ್, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಜೋಶ್ ಹ್ಯಾಝಲ್ವುಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್, ತನ್ವೀರ್ ಸಾಂಘಾ, ಮ್ಯಾಟ್ ಶಾರ್ಟ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಮ್ ಝಂಪಾ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ