Rahul Dravid: ರಾಹುಲ್ ದ್ರಾವಿಡ್ ಹಾಗೂ ರವಿ ಶಾಸ್ತ್ರಿ ನಡುವಣ ವ್ಯತ್ಯಾಸ ತಿಳಿಸಿದ ಗೌತಮ್ ಗಂಭೀರ್

| Updated By: ಝಾಹಿರ್ ಯೂಸುಫ್

Updated on: Nov 22, 2021 | 5:43 PM

Gautam Gambhir: ರವಿಶಾಸ್ತ್ರಿ ಅವರು ಆಸ್ಟ್ರೇಲಿಯಾದಲ್ಲಿ ಭಾರತ ತಂಡದ ಟೆಸ್ಟ್ ಸರಣಿ ಗೆದ್ದಾಗ, ಆ ಗೆಲುವನ್ನು 1983 ರ ವಿಶ್ವಕಪ್ ಪ್ರಶಸ್ತಿಗೆ ಹೋಲಿಸಿದ್ದರು. ಅವರ ಈ ಹೋಲಿಕೆ ನನಗೆ ಅಚ್ಚರಿ ಮೂಡಿಸಿತ್ತು.

Rahul Dravid: ರಾಹುಲ್ ದ್ರಾವಿಡ್ ಹಾಗೂ ರವಿ ಶಾಸ್ತ್ರಿ ನಡುವಣ ವ್ಯತ್ಯಾಸ ತಿಳಿಸಿದ ಗೌತಮ್ ಗಂಭೀರ್
Gautam Gambhir
Follow us on

ಟೀಮ್ ಇಂಡಿಯಾ ನ್ಯೂಜಿಲೆಂಡ್ (India vs New Zealand) ವಿರುದ್ದ ಭರ್ಜರಿಯಾಗಿ ಸರಣಿ ಗೆದ್ದಿದೆ. ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್ ವಿರುದ್ದ ಹೀನಾಯವಾಗಿ ಸೋತಿದ್ದ ಭಾರತ ವಾರಗಳ ಅಂತರದಲ್ಲೇ ನ್ಯೂಜಿಲೆಂಡ್ ತಂಡವನ್ನು 3-0 ಅಂತರದಿಂದ ಮಣಿಸಿದೆ. ಈ ಗೆಲುವಿನೊಂದಿಗೆ ಕೋಚ್ ರಾಹುಲ್ ದ್ರಾವಿಡ್ (Rahul Dravid) ಸರಣಿ ಜಯದ ಶುಭಾರಂಭ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾದ (Team India) ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ (Gautam Gambhir), ಮಾಜಿ ಕೋಚ್ ರವಿ ಶಾಸ್ತ್ರಿ (Ravi Shastri) ಹಾಗೂ ಹಾಲಿ ಕೋಚ್ ದ್ರಾವಿಡ್​ಗಿರುವ ಪ್ರಮುಖ ವ್ಯತ್ಯಾಸವೇನು ಎಂಬುದನ್ನು ತೆರೆದಿಟ್ಟಿದ್ದಾರೆ.

ಶಾಸ್ತ್ರಿ ನಿರ್ಗಮನದ ನಂತರ ರಾಹುಲ್​ ದ್ರಾವಿಡ್ ನೇಮಕವನ್ನು ಸ್ವಾಗತಿಸಿದ ಗಂಭೀರ್, ಇತ್ತೀಚೆಗೆ ಮಾಜಿ ಕೋಚ್ ರವಿ ಶಾಸ್ತ್ರಿ ಅವರು ನೀಡಿರುವ ಹೇಳಿಕೆಯೊಂದನ್ನು ಪ್ರಸ್ತಾಪಿಸಿದ್ದಾರೆ. ರವಿಶಾಸ್ತ್ರಿ ಅವರು ಆಸ್ಟ್ರೇಲಿಯಾದಲ್ಲಿ ಭಾರತ ತಂಡದ ಟೆಸ್ಟ್ ಸರಣಿ ಗೆದ್ದಾಗ, ಆ ಗೆಲುವನ್ನು 1983 ರ ವಿಶ್ವಕಪ್ ಪ್ರಶಸ್ತಿಗೆ ಹೋಲಿಸಿದ್ದರು. ಅವರ ಈ ಹೋಲಿಕೆ ನನಗೆ ಅಚ್ಚರಿ ಮೂಡಿಸಿತ್ತು.

ಏಕೆಂದರೆ ನೀವು ಚೆನ್ನಾಗಿ ಆಡಿದಾಗ, ಸಾಮಾನ್ಯವಾಗಿ ನೀವು ಅದರ ಬಗ್ಗೆ ಹೆಮ್ಮೆಪಡುವುದಿಲ್ಲ. ಅದನ್ನು ಬೇರೆಯವರು ಹೊಗಳಿದರೆ ಖುಷಿ ಪಡಬಹುದು. 2011ರ ವಿಶ್ವಕಪ್ ಗೆದ್ದಾಗ ಟೀಮ್ ಇಂಡಿಯಾ ವಿಶ್ವದ ಅತ್ಯುತ್ತಮ ತಂಡ ಎಂದು ಯಾರೂ ಹೇಳಿಕೆ ನೀಡಿರಲಿಲ್ಲ. ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ತವರಿನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಮೊದಲ ಏಷ್ಯಾದ ತಂಡವಾಗಿದೆ. ಹೀಗಿರುವಾಗ ಒಂದು ತಂಡವು ಗೆದ್ದಾಗ ಬೇರೆಯವರು ಮಾತನಾಡಬೇಕು. ಬದಲಾಗಿ ತಂಡದವರೇ ನಾವೇ ಬೆಸ್ಟ್ ಎಂದೇಳುವುದಲ್ಲ ಎಂದು ಗಂಭೀರ್ ತಿಳಿಸಿದರು.

ಇದೇ ವೇಳೆ ಆಸ್ಟ್ರೇಲಿಯಾದಲ್ಲಿ ಗೆದ್ದಿದ್ದು ದೊಡ್ಡ ಸಾಧನೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದಿರುವ ಗಂಭೀರ್, ನೀವು ಇಂಗ್ಲೆಂಡ್‌ನಲ್ಲಿ ಗೆದ್ದಿದ್ದೀರಿ, ನಿಸ್ಸಂದೇಹವಾಗಿ ನೀವು ಚೆನ್ನಾಗಿ ಆಡಿದ್ದೀರಿ. ಆದರೆ ಇತರರು ನಿಮ್ಮನ್ನು ಹೊಗಳಲಿ. ರಾಹುಲ್ ದ್ರಾವಿಡ್ ಅವರಿಂದ ನೀವು ಅಂತಹ ಹೇಳಿಕೆಗಳನ್ನು ಕೇಳುವುದಿಲ್ಲ. ಭಾರತ ಉತ್ತಮವಾಗಿ ಆಡಲಿ ಅಥವಾ ಕೆಟ್ಟದಾಗಿ ಆಡಲಿ, ಅವರ ಹೇಳಿಕೆಗಳು ಯಾವಾಗಲೂ ಸಮತೋಲನದಲ್ಲಿರುತ್ತವೆ. ಇದುವೇ ಮಾಜಿ ಕೋಚ್ ಹಾಗೂ ಈಗಿನ ಕೋಚ್​ಗೆ ಇರುವ ಪ್ರಮುಖ ವ್ಯತ್ಯಾಸ ಎಂದು ಗೌತಮ್ ಗಂಭೀರ್ ತಿಳಿಸಿದರು.

ಇದನ್ನೂ ಓದಿ: Rohit Sharma: ಶಾಹಿದ್ ಅಫ್ರಿದಿ ವಿಶ್ವ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ: Martin Guptill: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಮಾರ್ಟಿನ್ ಗಪ್ಟಿಲ್