Updated on: Nov 20, 2021 | 7:09 PM
ಭಾರತ-ನ್ಯೂಜಿಲೆಂಡ್ ನಡುವಣ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಮುನ್ನಡೆ ಸಾಧಿಸಿ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಆರಂಭಿಕನಾಗಿ ಕಣಕ್ಕಿಳಿದ ಗಪ್ಟಿಲ್ 2 ಸಿಕ್ಸ್ ಹಾಗೂ 3 ಬೌಂಡರಿ ಬಾರಿಸಿ ಕೇವಲ 15 ಎಸೆತಗಳಲ್ಲಿ 31 ರನ್ ಕಲೆಹಾಕಿದ್ದರು. ನ್ಯೂಜಿಲೆಂಡ್ಗೆ ಭರ್ಜರಿ ಆರಂಭ ಒದಗಿಸಿದ್ದ ಗಪ್ಟಿಲ್ 11 ರನ್ಗಳಿಸುವುದರೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ್ದರು. ಅದು ಕೂಡ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಎಂಬುದು ವಿಶೇಷ.
ಭಾರತದ ವಿರುದ್ದ 11 ರನ್ ಗಳಿಸುವುದರೊಂದಿಗೆ ಗಪ್ಟಿಲ್ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡರು. ಈ ಹಿಂದೆ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಕೊಹ್ಲಿ 87 ಇನಿಂಗ್ಸ್ಗಳಿಂದ 3227 ರನ್ ಕಲೆಹಾಕಿ ಅಗ್ರಸ್ಥಾನದಲ್ಲಿದ್ದರು.
ಇದೀಗ ಕೊಹ್ಲಿಯನ್ನು ಹಿಂದಿಕ್ಕಿ ಮಾರ್ಟಿನ್ ಗಪ್ಟಿಲ್ 3231 ರನ್ ಬಾರಿಸಿ ಅಗ್ರಸ್ಥಾನಕ್ಕೇರಿದ್ದಾರೆ. ಆದರೆ ಗಪ್ಟಿಲ್ ಈ ಸಾಧನೆ ಮಾಡಲು 107 ಇನಿಂಗ್ಸ್ ತೆಗೆದುಕೊಂಡಿದ್ದರು.
ಸದ್ಯ ಕೊಹ್ಲಿಗಿಂತ ಕೇವಲ 4 ರನ್ ಮುಂದಿರುವ ಗಪ್ಟಿಲ್ ಟಿ20 ಕ್ರಿಕೆಟ್ನ ಟಾಪ್ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ. 2ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ (3227) ಇದ್ದು, 3ನೇ ಸ್ಥಾನದಲ್ಲಿ 3141 ರನ್ ಬಾರಿಸಿರುವ ರೋಹಿತ್ ಶರ್ಮಾ ಇದ್ದಾರೆ.
ಅಂದಹಾಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಈ ಮೂವರು ಆಟಗಾರರು ಮಾತ್ರ 3 ಸಾವಿರ ರನ್ ಕಲೆಹಾಕಿರುವುದು ವಿಶೇಷ. ಅದರಲ್ಲಿ ಇಬ್ಬರು ಕೂಡ ಟೀಮ್ ಇಂಡಿಯಾ ಆಟಗಾರರು ಎಂಬುದು ಮತ್ತೊಂದು ವಿಶೇಷ.