Syed Mushtaq Ali Trophy 2021: ಕರ್ನಾಟಕಕ್ಕೆ ಸೋಲು: ತಮಿಳುನಾಡು ಚಾಂಪಿಯನ್
Syed Mushtaq Ali Trophy Final: ತಮಿಳುನಾಡು ತಂಡಕ್ಕೆ 24 ಎಸೆತಗಳಲ್ಲಿ 55 ರನ್ ಬೇಕಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಸ್ಪೋಟಕ ಬ್ಯಾಟರ್ ಶಾರೂಖ್ ಖಾನ್ ದರ್ಶನ್ ಎಂಬಿ ಓವರ್ನಲ್ಲಿ ಸಿಕ್ಸ್, ಫೋರ್ಗಳನ್ನು ಬಾರಿಸಿ ಅಬ್ಬರಿಸಿದರು.
Syed Mushtaq Ali Trophy 2021 Final: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಸೋಲಿಸಿ ತಮಿಳುನಾಡು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕೊನೆಯ ಎಸೆತದಲ್ಲಿ 5 ರನ್ ಬೇಕಿದ್ದ ವೇಳೆ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಶಾರೂಖ್ ಖಾನ್ ತಮಿಳುನಾಡು ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಇದರೊಂದಿಗೆ ತಮಿಳುನಾಡು ಸತತ 2ನೇ ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.ಇದಕ್ಕೂ ಮುನ್ನ ಟಾಸ್ ಗೆದ್ದ ತಮಿಳುನಾಡು ತಂಡದ ನಾಯಕ ವಿಜಯ್ ಶಂಕರ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ರೋಹನ್ ಕದಮ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಆ ಬಳಿಕ ಕರುಣ್ ನಾಯರ್ (18) ನಿರ್ಗಮಿಸಿದರು. ಇದರ ಬೆನ್ನಲ್ಲೇ ಮನೀಷ್ ಪಾಂಡೆ (13) ವಿಕೆಟ್ ಸಾಯಿ ಕಿಶೋರ್ ಪಡೆದರು. ಅಷ್ಟರಲ್ಲಾಗಲೇ ಕರ್ನಾಟಕ ತಂಡವು 5.1 ಓವರ್ನಲ್ಲಿ 3 ಪ್ರಮುಖ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಗೂಡಿದ ಶರತ್ ಹಾಗೂ ಅಭಿನವ್ ಮನೋಹರ್ 55 ರನ್ಗಳ ಜೊತೆಯಾಟವಾಡಿದರು.
14ನೇ ಓವರ್ನಲ್ಲಿ ಮತ್ತೆ ದಾಳಿಗಿಳಿದ ಸ್ಪಿನ್ನರ್ ಸಾಯಿ ಕಿಶೋರ್ ಶರತ್ (16) ವಿಕೆಟ್ ಪಡೆದು ತಮಿಳುನಾಡಿಗೆ 4ನೇ ಯಶಸ್ಸು ತಂದುಕೊಟ್ಟರು. ಇನ್ನೊಂದೆಡೆ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ ಅಭಿನವ್ ಮನೋಹರ್ 37 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಬೌಂಡರಿಯೊಂದಿಗೆ 46 ರನ್ಗಳಿಸಿದರು. ಈ ವೇಳೆ ಸಂದೀಪ್ ವಾರಿಯರ್ ಎಸೆತದಲ್ಲಿ ಕ್ಯಾಚ್ ನೀಡಿ ಮನೋಹರ್ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ಇನ್ನು ಅಂತಿಮ ಹಂತದಲ್ಲಿ ಪ್ರವೀಣ್ ದುಬೆ 33 ರನ್ಗಳಿಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. ಅದಂತೆ ನಿಗದಿತ 20 ಓವರ್ಗಳಲ್ಲಿ ಕರ್ನಾಟಕ ತಂಡವು 7 ವಿಕೆಟ್ ನಷ್ಟಕ್ಕೆ 151 ರನ್ ಕಲೆಹಾಕಿತು.
152 ರನ್ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ತಮಿಳುನಾಡು ತಂಡಕ್ಕೆ ಆರಂಭಿಕರಾದ ಹರಿ ನಿಶಾಂತ್ ಹಾಗೂ ಎನ್ ಜಗದೀಶನ್ ಉತ್ತಮ ಆರಂಭ ಒದಗಿಸಿದರು. 23 ರನ್ಗಳಿಸಿದ್ದ ವೇಳೆ ಹರಿ ನಿಶಾಂತ್ರನ್ನು ರನೌಟ್ ಮಾಡುವ ಮೂಲಕ ವಿದ್ಯಾಧರ್ ಪಾಟೀಲ್ ಕರ್ನಾಟಕ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದಾಗ್ಯೂ ತಮಿಳು ನಾಡು ತಂಡವು ಪವರ್ಪ್ಲೇನಲ್ಲಿ 44 ರನ್ ಕಲೆಹಾಕಿತು.
ಇನ್ನು ಸಾಯಿ ಸುದರ್ಶನ್ (9) ಅವರನ್ನು ಎಲ್ಬಿ ಬಲೆಗೆ ಬೀಳಿಸುವ ಮೂಲಕ ಕರುಣ್ ನಾಯರ್ ತಮಿಳುನಾಡು ತಂಡದ 2ನೇ ವಿಕೆಟ್ ಪಡೆದರು. ಅದರಂತೆ ಕರ್ನಾಟಕ ಬೌಲರುಗಳು ಮೊದಲ 10 ಓವರ್ನಲ್ಲಿ ನೀಡಿದ್ದು 60 ರನ್ ಮಾತ್ರ. ಈ ಹಂತದಲ್ಲಿ ಎನ್ ಜಗದೀಶನ್ ಹಾಗೂ ವಿಜಯ್ ಶಂಕರ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಪರಿಣಾಮ ಕರ್ನಾಟಕ ತಂಡವು 15 ಓವರ್ವರೆಗೂ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಅತ್ತ ತಮಿಳುನಾಡು ತಂಡವು 15 ಓವರ್ನಲ್ಲಿ 95 ರನ್ ಕಲೆಹಾಕಿತು.
ಕೊನೆಯ 5 ಓವರ್ಗಳಲ್ಲಿ ತಮಿಳುನಾಡು ತಂಡಕ್ಕೆ ಗೆಲ್ಲಲು 57 ರನ್ಗಳ ಅವಶ್ಯಕತೆಯಿತ್ತು. 16ನೇ ಓವರ್ ಎಸೆದ ಕೆಸಿ ಕಾರ್ಯಪ್ಪ ಮೊದಲ ಎಸೆತದಲ್ಲೇ ವಿಜಯ್ ಶಂಕರ್ (18) ವಿಕೆಟ್ ಪಡೆದು ಕರ್ನಾಟಕ ತಂಡಕ್ಕೆ ಮೂರನೇ ಯಶಸ್ಸು ತಂದುಕೊಟ್ಟರು. ಮರು ಎಸೆತದಲ್ಲೇ ಎನ್ ಜಗದೀಶನ್ (41) ಅವರನ್ನೂ ಸಹ ಔಟ್ ಮಾಡಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದರು. ಅಷ್ಟೇ ಅಲ್ಲದೆ ಕಾರ್ಯಪ್ಪ ಈ ಓವರ್ನಲ್ಲಿ ನೀಡಿದ್ದು ಕೇವಲ 2 ರನ್ ಮಾತ್ರ.
ಅದರಂತೆ ತಮಿಳುನಾಡು ತಂಡಕ್ಕೆ 24 ಎಸೆತಗಳಲ್ಲಿ 55 ರನ್ ಬೇಕಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಸ್ಪೋಟಕ ಬ್ಯಾಟರ್ ಶಾರೂಖ್ ಖಾನ್ ದರ್ಶನ್ ಎಂಬಿ ಓವರ್ನಲ್ಲಿ ಸಿಕ್ಸ್, ಫೋರ್ಗಳನ್ನು ಬಾರಿಸಿ ಅಬ್ಬರಿಸಿದರು. ಪರಿಣಾಮ 17ನೇ ಓವರ್ನಲ್ಲಿ ಮೂಡಿಬಂದಿದ್ದು ಬರೋಬ್ಬರಿ 19 ರನ್ಗಳು. ಇದರೊಂದಿಗೆ ತಮಿಳುನಾಡು 18 ಎಸೆತಗಳಲ್ಲಿ 36 ರನ್ಗಳ ಗುರಿ ಪಡೆಯಿತು. ಈ ವೇಳೆ ದಾಳಿಗಿಳಿದ ಪ್ರತೀಕ್ ಜೈನ್ ಸಂಜಯ್ ಯಾದವ್ (5) ವಿಕೆಟ್ ಪಡೆಯುವ ಮೂಲಕ ಕರ್ನಾಟಕಕ್ಕೆ ಅಮೂಲ್ಯ ಯಶಸ್ಸು ತಂದುಕೊಟ್ಟರು. ಅಷ್ಟೇ ಅಲ್ಲದೆ 18ನೇ ಓವರ್ನಲ್ಲಿ ಪ್ರತೀಕ್ ನೀಡಿದ್ದು ಕೇವಲ 6 ರನ್ ಮಾತ್ರ.
ರೋಚಕಘಟ್ಟದತ್ತ ತಿರುಗಿದ ಪಂದ್ಯದಲ್ಲಿ ತಮಿಳುನಾಡಿಗೆ ಗೆಲ್ಲಲು ಅಂತಿಮ 2 ಓವರ್ಗಳಲ್ಲಿ 30 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ನಾಯಕ ಮನೀಷ್ ಪಾಂಡೆ ಚೆಂಡನ್ನು ವೇಗಿ ವಿದ್ಯಾಧರ್ ಪಾಟೀಲ್ ಅವರ ಕೈಗಿತ್ತರು. ಮೊದಲ 3 ಎಸೆತಗಳಲ್ಲಿ 6 ರನ್ ನೀಡಿದ ಪಾಟೀಲ್ 5ನೇ ಎಸೆತದಲ್ಲಿ ಮೊಹಮ್ಮದ್ (5) ವಿಕೆಟ್ ಪಡೆದರು. ಆದರೆ ಮತ್ತೊಂದೆಡೆ ಇದ್ದ ಶಾರೂಖ್ ಹೋರಾಟ ಮುಂದುವರೆಸಿದರು. ಅದರಂತೆ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿದರು.
ಕೊನೆಯ ಓವರ್ನಲ್ಲಿ ತಮಿಳುನಾಡು ತಂಡಕ್ಕೆ 16 ರನ್ಗಳ ಅವಶ್ಯಕತೆಯಿತ್ತು. ಪ್ರತೀಕ್ ಜೈನ್ ಎಸೆದ ಅಂತಿಮ ಓವರ್ನ ಮೊದಲ ಎಸೆತದಲ್ಲಿ ಸಾಯಿ ಕಿಶೋರ್ ಬೌಂಡರಿ ಬಾರಿಸಿದರು. 2ನೇ ಎಸೆತದಲ್ಲಿ 1 ರನ್. ಕೊನೆಯ 3 ಎಸೆತಗಳಲ್ಲಿ 9 ರನ್ ಬೇಕಿತ್ತು. ಈ ವೇಳೆ ಸಾಯಿ ಕಿಶೋರ್ ಸಿಂಗಲ್ ತೆಗೆದರು. ಅಂತಿಮ 2 ಎಸೆತಗಳಲ್ಲಿ 8 ರನ್ಗಳ ಅವಶ್ಯಕತೆ. ಇದೇ ವೇಳೆ ಪ್ರತೀಕ್ ಜೈನ್ ವೈಡ್ ಎಸೆದರು. ಅದರಂತೆ ಕೊನೆಯ 2 ಎಸೆತಗಳಲ್ಲಿ 7 ರನ್ಗಳ ಗುರಿ ಪಡೆಯಿತು. ಈ ವೇಳೆ ಶಾರೂಖ್ ಖಾನ್ 2 ರನ್ ಕಲೆಹಾಕಿದರು. ಅಂತಿಮ ಎಸೆತದಲ್ಲಿ 5 ರನ್ಗಳು ಬೇಕಿತ್ತು. ಈ ವೇಳೆ ಡೀಪ್ ಸ್ಕ್ವೇರ್ನತ್ತ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಶಾರುಖ್ ಖಾನ್ ತಮಿಳುನಾಡು ತಂಡಕ್ಕೆ 4 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು.
Published On - 3:31 pm, Mon, 22 November 21