India vs New Zealand T20: ಪಂದ್ಯದ ಬಳಿಕ ತಮ್ಮವರನ್ನು ಬಿಟ್ಟು ಭಾರತ ತಂಡವನ್ನೇ ಹೊಗಳಿದ ನ್ಯೂಜಿಲೆಂಡ್ ನಾಯಕ: ಏನು ಹೇಳಿದ್ರು?

Mitchell Santner, IND vs NZ 3rd T20I: ಭಾರತ ವಿರುದ್ಧ ಮೂರನೇ ಟಿ20 ಪಂದ್ಯದಲ್ಲೂ ಸೋತು ಕ್ಲೀನ್ ಸ್ವೀಪ್ ಮುಖಭಂಗದ ಬಳಿಕ ಮಾತನಾಡಿದ ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟನರ್ ಭಾರತೀಯರು ನೀಡಿದ ಪ್ರದರ್ಶನವನ್ನು ಹಾಡಿಹೊಗಳಿದ್ದಾರೆ.

India vs New Zealand T20: ಪಂದ್ಯದ ಬಳಿಕ ತಮ್ಮವರನ್ನು ಬಿಟ್ಟು ಭಾರತ ತಂಡವನ್ನೇ ಹೊಗಳಿದ ನ್ಯೂಜಿಲೆಂಡ್ ನಾಯಕ: ಏನು ಹೇಳಿದ್ರು?
India vs New Zealand T20

ಐಸಿಸಿ ಟಿ20 ವಿಶ್ವಕಪ್ (T20 World Cup) ಮುಕ್ತಾಯವಾದ ಬೆನ್ನಲ್ಲೇ ನ್ಯೂಜಿಲೆಂಡ್ (New Zealand) ಆಟಗಾರರು ಟೀಮ್ ಇಂಡಿಯಾ (Team India) ವಿರುದ್ಧದ ಟಿ20 ಸರಣಿಗಾಗಿ (T20I Series) ನೇರವಾಗಿ ಭಾರತಕ್ಕೆ ಬಂದಿಳಿದರು. ಅದಾಗಲೇ ಸತತ ಕ್ರಿಕೆಟ್ ಆಡಿ ಸುಸ್ತಾಗಿದ್ದ ಪ್ಲೇಯರ್ಸ್​ ಪೈಕಿ ಕೆಲವರು ದಿಢೀರ್ ವಿಶ್ರಾಂತಿ ಘೋಷಿಸಿದರು. ಆದರೂ ಕಿವೀಸ್ ಭಾರತ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಿತು (India vs New Zealand). ಟಿ20 ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದ ಹತಾಶೆಯಲ್ಲಿದ್ದ ಭಾರತಕ್ಕೆ ಈ ಸರಣಿ ಮಹತ್ವದ್ದಾಗಿತ್ತು. ಜೊತೆಗೆ ಮೊದಲ ಬಾರಿಗೆ ನಾಯಕನಾಗಿ ರೋಹಿತ್ ಶರ್ಮಾ (Rohit Sharma) ಮತ್ತು ಕೋಚ್ ಆಗಿ ರಾಹುಲ್ ದ್ರಾವಿಡ್​ಗೂ (Rahul Dravid) ಅಗ್ನಿಪರೀಕ್ಷೆಯಾಗಿತ್ತು. ಗೆಲುವಿನ ಹಸಿವನ್ನು ನೀಗಿಸಲು ಭಾರತ ಆಡಿದ ಮೂರೂ ಪಂದ್ಯಗಳಲ್ಲೂ ಗೆಲುವು ಸಾಧಿಸಿತು. ಇತ್ತ ವಿಶ್ವಕಪ್ ಫೈನಲ್​ನಲ್ಲಿ (T20 World Cup Final) ಸೋತು ಆಘಾತದಲ್ಲಿದ್ದ ನ್ಯೂಜಿಲೆಂಡ್​ಗೆ ಮತ್ತೊಂದು ಬರೆ ಎಳೆದಂತಾಗಿದೆ.

ಪ್ರಮುಖ ಅನುಭವಿ ಆಟಗಾರರ ಅನುಪಸ್ಥಿತಿಯ ನಡುವೆಯೂ ನ್ಯೂಜಿಲೆಂಡ್ ಭಾರತ ವಿರುದ್ಧ ಗೆಲುವಿಗೆ ಕಠಿಣ ಪರಿಶ್ರಮಪಟ್ಟಿದೆ. ಮೊದಲ ಎರಡು ಪಂದ್ಯಗಳನ್ನು ಟಿಮ್ ಸೌದೀ ಮುನ್ನಡೆಸಿದರೆ, ಕೊನೇ ಪಂದ್ಯಕ್ಕೆ ಮಿಚೆಲ್ ಸ್ಯಾಂಟನರ್ ನಾಯಕನಾದರು. ಭಾನುವಾರ ನಡೆದ ಮೂರನೇ ಟಿ20 ಪಂದ್ಯದಲ್ಲೂ ಸೋತು ಕ್ಲೀನ್ ಸ್ವೀಪ್ ಮುಖಭಂಗದ ಬಳಿಕ ಮಾತನಾಡಿದ ನಾಯಕ ಮಿಚೆಲ್ ಸ್ಯಾಂಟನರ್ ಭಾರತೀಯರು ನೀಡಿದ ಪ್ರದರ್ಶನವನ್ನು ಹಾಡಿಹೊಗಳಿದ್ದಾರೆ.

“ಈರೀತಿಯ ಡ್ಯೂ ಇದ್ದ ಸಂದರ್ಭದಲ್ಲಿ ಪಂದ್ಯ ಹೇಗೆ ಸಾಗುತ್ತದೆ ಎಂದು ಯೋಚಿಸಲು ತುಂಬಾನೆ ಕಷ್ಟ. ಭಾರತೀಯ ಬೌಲರ್​ಗಳು ಆರಂಭದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ನೀಡಿದರು. ಅದರಲ್ಲೂ ಅಕ್ಷರ್ ಪಟೇಲ್. ಇಡೀ ಟೂರ್ನಿಯಲ್ಲಿ ಭಾರತೀಯ ಆಟಗಾರರು ನೀಡಿದ ಪ್ರದರ್ಶನಕ್ಕೆ ನಿಜಕ್ಕೂ ಗೌರವ ಸಲ್ಲಬೇಕು. ನಾವು ಬಹುಶಃ ಮಂಕಾದೆವು. ಭಾರತೀಯರು ಚೆನ್ನಾಗಿ ಕಮ್​ಬ್ಯಾಕ್ ಮಾಡಿದರು. ಆರ್. ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಸಂದರ್ಭವನ್ನು ಚೆನ್ನಾಗಿ ಉಪಯೋಗಿಸಿಕೊಂಡರು. ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ನಮ್ಮ ಮೇಲೆ ಹಾಕಿದ ಒತ್ತಡವನ್ನು ಮೆಟ್ಟಿ ನಿಲ್ಲಲು ಕಷ್ಟವಾಯಿತು” ಎಂದು ಸ್ಯಾಂಟನರ್ ಹೇಳಿದ್ದಾರೆ.

ಇನ್ನು ನ್ಯೂಜಿಲೆಂಡ್​ನ ಖಾಯಂ ನಾಯಕ ಕೇನ್ ವಿಲಿಯಮ್ಸನ್ ಬಗ್ಗೆ ಮಾತನಾಡಿದ ಸ್ಯಾಂಟನರ್, “ಕೇನ್ ನಮ್ಮ ಪಾಲಿನ ಅತ್ಯುತ್ತಮ ಪ್ಲೇಯರ್. ವೇಳಾಪಟ್ಟಿ ಒಂದರ ಹಿಂದೆ ಮತ್ತೊಂದು ಇರುವ ಕಾರಣ ಅವರಿಗೆ ವಿಶ್ರಾಂತಿಯ ಅಗತ್ಯವಿತ್ತು. ಇದರಿಂದ ಇತರೆ ಆಟಗಾರರಿಗೂ ಅವಕಾಶ ಸಿಕ್ಕಿತು. ಮುಂದಿನ ವಿಶ್ವಕಪ್​ಗೆ ಇನ್ನು 11 ತಿಂಗಳಿರುವಾಗ ಮುಂದಿನ ಯೋಜನೆ ಬಗ್ಗೆ ಯೋಚನೆ ಮಾಡಬೇಕು. ಈ ಸರಣಿಯಲ್ಲಿ ಮಾರ್ಟಿನ್ ಗಪ್ಟಿಲ್ ಟಾಪ್​ನಲ್ಲಿ ಚೆನ್ನಾಗಿ ಬ್ಯಾಟಿಂಗ್ ನಡೆಸಿದ್ದಾರೆ” ಎಂದು ಹೇಳಿದರು.

ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೂಡ ನ್ಯೂಜಿಲೆಂಡ್ ಆಟಗಾರರನ್ನು ಪ್ರಶಂಶಿಸಿದ್ದಾರೆ. “ನಾವು ವಾಸ್ತವದ ಬಗ್ಗೆ ಅರಿತುಕೊಳ್ಳಬೇಕು. ನಮ್ಮ ಕಾಲು ನೆಲದ ಮೇಲೇ ಇರಲಿ. ಯಾಕಂದ್ರೆ ನ್ಯೂಜಿಲೆಂಡ್ ಆಟಗಾರರು ಟಿ20 ವಿಶ್ವಕಪ್ ಮುಗಿಸಿದ ಮೂರೇ ದಿನಗಳಲ್ಲಿ ಇಲ್ಲಿಗೆ ಬಂದು ಮತ್ತೊಂದು ಸರಣಿ ಆಡುವುದು ಸುಲಭವಲ್ಲ. ನ್ಯೂಜಿಲೆಂಡ್ ಆಟಗಾರರ ಶ್ರಮ ನಿಜಕ್ಕೂ ಪ್ರಶಂಶಿಸಬೇಕು” ಎಂದು ಹೇಳಿದ್ದಾರೆ.

Rohit Sharma Record: ಕೊಹ್ಲಿ ದಾಖಲೆ ಉಡೀಸ್: ನಾಯಕನಾಗಿ ಮೊದಲ ಸರಣಿಯಲ್ಲೇ ರೋಹಿತ್ ಶರ್ಮಾ ಹಿಟ್

Rahul Dravid: ಕ್ಲೀನ್​ಸ್ವೀಪ್ ನಡುವೆ ಎದುರಾಳಿ ಆಟಗಾರರನ್ನು ಮರೆಯದೆ ರಾಹುಲ್ ದ್ರಾವಿಡ್: ಏನಂದ್ರು ಗೊತ್ತೇ?

(Team India Played vey well Mitchell Santner said after the Match between India vs New Zealand)

Click on your DTH Provider to Add TV9 Kannada