
ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯ ಫೈನಲ್ಗೆ ತಲುಪಿದೆ. ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಸೋಲುಣಿಸಿ ಭಾರತ ತಂಡವು ಅಂತಿಮ ಸುತ್ತಿಗೆ ಪ್ರವೇಶಿಸಿದೆ. ಅತ್ತ ಟೀಮ್ ಇಂಡಿಯಾ ಫೈನಲ್ಗೇರುತ್ತಿದ್ದಂತೆ ಇತ್ತ ರೋಹಿತ್ ಶರ್ಮಾ ಅವರ ನಿವೃತ್ತಿ ಚರ್ಚೆಗಳು ಶುರುವಾಗಿದೆ.
ಏಕೆಂದರೆ ರೋಹಿತ್ ಶರ್ಮಾ ಅವರಿಗೆ ಈಗ 37 ವರ್ಷ. ಮುಂಬರುವ ಐಸಿಸಿ ಟೂರ್ನಿಯಲ್ಲಿ ಅವರು ಕಣಕ್ಕಿಳಿಯುವುದಿಲ್ಲ ಎಂದೇ ಹೇಳಬಹುದು. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ ತಂಡದ ನಾಯಕ ಬದಲಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಸುದ್ದಿ ಬಗ್ಗೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರನ್ನು ಪ್ರಶ್ನಿಸಲಾಗಿದೆ.
ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಗೌತಮ್ ಗಂಭೀರ್ಗೆ ರೋಹಿತ್ ಶರ್ಮಾ ಅವರ ನಿವೃತ್ತಿ ಬಗ್ಗೆ ಕೇಳಲಾಗಿದೆ. ಈ ಪ್ರಶ್ನೆಗೆ ಸಿಡಿಮಿಡಿಗೊಂಡ ಗಂಭೀರ್, ಅದರ ಬಗ್ಗೆ ನಾನು ಈಗ ಏನು ಹೇಳಬೇಕು? ಎಂದು ಮರು ಪ್ರಶ್ನಿಸಿದ್ದಾರೆ.
ಮಾತು ಮುಂದುವರೆಸಿದ ಗೌತಮ್ ಗಂಭೀರ್, ನಾನು ಒಂದು ವಿಷಯ ಹೇಳುತ್ತೇನೆ, ತಂಡದ ನಾಯಕ ಈ ರೀತಿಯಲ್ಲಿ ವೇಗವಾಗಿ ಬ್ಯಾಟಿಂಗ್ ಮಾಡಿದರೆ ಅದು ಅವನಲ್ಲಿ ಇನ್ನೂ ಕ್ರಿಕೆಟ್ ಉಳಿದಿದೆ ಎಂಬ ಸಂದೇಶವನ್ನು ನೀಡುತ್ತದೆ. ರೋಹಿತ್ ದೊಡ್ಡ ಇನ್ನಿಂಗ್ಸ್ ಆಡಿಲ್ಲ ನಿಜ. ಆದರೆ ಅವರ ಇನ್ನಿಂಗ್ಸ್ ಪ್ರಭಾವಶಾಲಿಯಾಗಿತ್ತು ಎಂದು ಗಂಭೀರ್ ಹೇಳಿದ್ದಾರೆ.
ನಾವು ನಮ್ಮ ಆಟಗಾರರನ್ನು ಆತನ ಇನಿಂಗ್ಸ್ ಎಷ್ಟು ಪ್ರಭಾವಶಾಲಿಯಾಗಿತ್ತು ಎಂಬುದರ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತೇವೆ. ಒಬ್ಬ ತಜ್ಞ ಮತ್ತು ಪತ್ರಕರ್ತನಾಗಿ ನೀವು ರನ್‌ಗಳು ಮತ್ತು ಸರಾಸರಿಯನ್ನು ನೋಡುತ್ತೀರಿ. ಆದರೆ ನಾವು ಪ್ರತಿ ಆಟಗಾರರು ಪಂದ್ಯದ ಮೇಲೆ ಯಾವ ರೀತಿ ಪ್ರಭಾವ ಬೀರಿದ್ದಾರೆ ಎಂಬುದನ್ನು ಮಾತ್ರ ಪರಿಗಣಿಸುತ್ತೇವೆ ಎಂದು ಗಂಭೀರ್ ಹೇಳಿದರು.
ಇದೀಗ ರೋಹಿತ್ ಶರ್ಮಾ ಅವರ ಇನಿಂಗ್ಸ್ ಪ್ರಭಾವಶಾಲಿಯಾಗಿದೆ. ಹೀಗಾಗಿ ನಿವೃತ್ತಿ ವಿಚಾರ ಅಪ್ರಸ್ತುತ ಎಂಬುದು ನನ್ನ ಭಾವನೆ ಎಂದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
ಇದನ್ನೂ ಓದಿ: Virat Kohli: ಮಾಸ್ಟರ್ ಚೇಸ್ ಮಾಸ್ಟರ್ನ ವಿಶ್ವ ದಾಖಲೆ
ಇದಾಗ್ಯೂ ಚಾಂಪಿಯನ್ಸ್ ಟ್ರೋಫಿ ಬಳಿಕ ರೋಹಿತ್ ಶರ್ಮಾ ಭಾರತ ಏಕದಿನ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ ಎಂಬುದನ್ನು ಗಂಭೀರ್ ಖಚಿತಪಡಿಸಿಲ್ಲ. ಇತ್ತ ಶುಭ್ಮನ್ ಗಿಲ್ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಿರುವ ಕಾರಣ 2027ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ಯುವ ಆಟಗಾರನಿಗೆ ಕ್ಯಾಪ್ಟನ್ ಪಟ್ಟ ನೀಡುವ ಸಾಧ್ಯತೆ ಹೆಚ್ಚಿದೆ.