ಸೆಮಿಫೈನಲ್ ವೀಕ್ಷಿಸಲು ಬಂದರೆ ಉಚಿತ ಊಟ ಕೊಡ್ತೀವಿ: ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಫರ್
SA vs NZ: ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೆ ಪ್ರವೇಶಿಸಲಿದೆ. ಈ ಮ್ಯಾಚ್ನಲ್ಲಿ ಗೆದ್ದ ತಂಡ ಮಾರ್ಚ್ 9 ರಂದು ನಡೆಯಲಿರುವ ಫೈನಲ್ನಲ್ಲಿ ಭಾರತ ತಂಡವನ್ನು ಎದುರಿಸಲಿದೆ.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಮೊದಲ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಫೈನಲ್ಗೆ ಪ್ರವೇಶಿಸಿದೆ. ಇನ್ನು ದ್ವಿತೀಯ ಸೆಮಿಫೈನಲ್ ಪಂದ್ಯವು ಇಂದು (ಮಾ.5) ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ನ್ಯೂಝಿಲೆಂಡ್ ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೆ ಪ್ರೇಕ್ಷಕ ಕೊರತೆ ಕಂಡು ಬರುವುದು ಖಚಿತ. ಏಕೆಂದರೆ ಪಾಕಿಸ್ತಾನ್ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಸೌತ್ ಆಫ್ರಿಕಾ-ನ್ಯೂಝಿಲೆಂಡ್ ನಡುವಣ ಪಂದ್ಯದತ್ತ ಪಾಕ್ ಅಭಿಮಾನಿಗಳು ಮುಖ ಮಾಡುವ ಸಾಧ್ಯತೆಯಿಲ್ಲ.
ಅದರಲ್ಲೂ ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ನಡೆಯುತ್ತಿದೆ. ಹೀಗಾಗಿ ಬಹುತೇಕರು ಉಪವಾಸದಲ್ಲಿರುವ ಕಾರಣ ಪಂದ್ಯ ವೀಕ್ಷಿಸಲು ಪ್ರೇಕ್ಷಕರು ಸ್ಟೇಡಿಯಂಗೆ ಬರುವ ಸಾಧ್ಯತೆಯಿಲ್ಲ ಎಂಬುದನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮನಗಂಡಿದೆ.
ಇಫ್ತಾರ್ ಘೋಷಣೆ:
ಇಂಗ್ಲೆಂಡ್ ಮತ್ತು ಸೌತ್ ಆಫ್ರಿಕಾ ನಡುವಣ ಪಂದ್ಯದ ವೇಳೆಯೇ ಸ್ಟೇಡಿಯಂ ಖಾಲಿ ಹೊಡೆಯುತ್ತಿತ್ತು. ಇದೀಗ ರಂಜಾನ್ ಆಗಿರುವ ಕಾರಣ 2ನೇ ಸೆಮಿಫೈನಲ್ ಪಂದ್ಯದ ವೇಳೆಯೂ ಅಭಿಮಾನಿಗಳ ಅನುಪಸ್ಥಿತಿ ಎದ್ದು ಕಾಣುವ ಸಾಧ್ಯತೆಯಿದೆ. ಹೀಗಾಗಿ ಸೆಮಿಫೈನಲ್ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಉಚಿತ ಇಫ್ತಾರ್ ನೀಡುವುದಾಗಿ ಘೋಷಿಸಿದೆ.
ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ನಡುವಣ ಪಂದ್ಯವನ್ನು ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಉಚಿತ ಇಫ್ತಾರ್ ಬಾಕ್ಸ್ ನೀಡಲಿದ್ದು, ಇದರಲ್ಲಿ ಇದರಲ್ಲಿ ಖರ್ಜೂರ, ಜ್ಯೂಸ್ ಮತ್ತು ಮಿನಿ ಪಿಜ್ಜಾ ಇರಲಿದೆ ಎಂದು ಪಿಸಿಬಿ ತಿಳಿಸಿದೆ.
ಅಲ್ಲದೆ ಸ್ಟೇಡಿಯಂನಲ್ಲಿನ ಆಹಾರ ಮಳಿಗೆಗಳಲ್ಲಿ ಇತರ ಬಗೆಯ ಖಾದ್ಯ ಭಕ್ಷ್ಯ ಸಹ ಲಭ್ಯವಿರುತ್ತವೆ. ಇನ್ನು ಊಟ ಬೇಕಿದ್ದವರಿಗೆ ಇಲ್ಲಿ ಊಟದ ವ್ಯವಸ್ಥೆಯನ್ನೂ ಸಹ ಮಾಡಲಾಗಿರುತ್ತದೆ ಎಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.
ಈ ಮೂಲಕ ಉಪವಾಸ ಹೊಂದಿರುವ ಪಾಕಿಸ್ತಾನ್ ಜನರನ್ನು ಸ್ಟೇಡಿಯಂಗೆ ಬರುವಂತೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮನವಿ ಮಾಡಿದೆ. ಇದಾಗ್ಯೂ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ನಡುವಣ ಪಂದ್ಯದ ವೇಳೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆಯಿದ್ದು, ಇನ್ನು ಊಟದ ವ್ಯವಸ್ಥೆಯ ಕಾರಣ ಅಭಿಮಾನಿಗಳು ಸ್ಟೇಡಿಯಂನತ್ತ ಮುಖ ಮಾಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: Virat Kohli: ಮಾಸ್ಟರ್ ಚೇಸ್ ಮಾಸ್ಟರ್ನ ವಿಶ್ವ ದಾಖಲೆ
ಪಾಕಿಸ್ತಾನ್ ಕೈ ತಪ್ಪಿದ ಫೈನಲ್ ಮ್ಯಾಚ್:
ಮೊದಲ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಗೆದ್ದಿರುವ ಕಾರಣ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದರೊಂದಿಗೆ 29 ವರ್ಷಗಳ ಬಳಿಕ ಐಸಿಸಿ ಟೂರ್ನಿಯ ಮಹತ್ವದ ಪಂದ್ಯವನ್ನು ಆಯೋಜಿಸುವ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕನಸು ಕೂಡ ಕಮರಿದೆ.
