Global T20 Canada 2023: ರಣರೋಚಕ ಪಂದ್ಯದಲ್ಲಿ 1 ವಿಕೆಟ್ನಿಂದ ಗೆದ್ದ ಬ್ರಾಂಪ್ಟನ್ ತಂಡ
Global T20 Canada 2023: ಗ್ಲೋಬಲ್ ಟಿ20 ಲೀಗ್ನ 5ನೇ ಪಂದ್ಯದಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಶಾಹಿದ್ ಅಫ್ರಿದಿ 18ನೇ ಓವರ್ನಲ್ಲಿ ನೀಡಿದ್ದು ಕೇವಲ 1 ರನ್ ಮಾತ್ರ.
Global T20 Canada 2023: ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ20 ಲೀಗ್ನ 5ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಬ್ರಾಂಪ್ಟನ್ ವೊಲ್ವ್ಝ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೊರೊಂಟೊ ನ್ಯಾಷನಲ್ಸ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ತಾರಿಖ್ (23) ಹಾಗೂ ಕಾಲಿನ್ ಮನ್ರೋ (24) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇದಾದ ಬಳಿಕ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕೋಲಸ್ ಕಿರ್ಟನ್ (50) ಅರ್ಧಶತಕ ಬಾರಿಸಿದರು. ಪರಿಣಾಮ ಟೊರೊಂಟೊ ನ್ಯಾಷನಲ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 142 ರನ್ ಕಲೆಹಾಕಿತು.
143 ರನ್ಗಳ ಸುಲಭ ಗುರಿ ಬೆನ್ನತ್ತಿದ ಬ್ರಾಂಪ್ಟನ್ ವೊಲ್ವ್ಝ್ ತಂಡಕ್ಕೆ 2 ವಿಕೆಟ್ ಕಬಳಿಸುವ ಮೂಲಕ ಜಮಾನ್ ಖಾನ್ ಆರಂಭಿಕ ಆಘಾತ ನೀಡಿದ್ದರು. ಇದಾದ ಬಳಿಕ ಮಾರ್ಕ್ ಚಾಪ್ಮ್ಯಾನ್ (21) ಹಾಗೂ ಹುಸೇನ್ ತಲಾತ್ (44) ಉತ್ತಮ ಜೊತೆಯಾಟದೊಂದಿಗೆ ತಂಡಕ್ಕೆ ಆಸರೆಯಾದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಜ್ವಾನ್ ಚೀಮಾ 35 ರನ್ ಬಾರಿಸುವುದರೊಂದಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಆದರೆ ಈ ಹಂತದಲ್ಲಿ ದಾಳಿಗಿಳಿದ ಫಝಲ್ಹಕ್ ಫಾರೂಖಿ ಚೀಮಾ ವಿಕೆಟ್ ಕಬಳಿಸಿದರು. ಇದಾಗ್ಯೂ ಕೊನೆಯ 3 ಓವರ್ಗಳಲ್ಲಿ ಕೇವಲ 6 ರನ್ಗಳ ಅವಶ್ಯಕತೆಯಿತ್ತು.
ಈ ಹಂತದಲ್ಲಿ ದಾಳಿಗಿಳಿದ ಶಾಹಿದ್ ಅಫ್ರಿದಿ 18ನೇ ಓವರ್ನಲ್ಲಿ ನೀಡಿದ್ದು ಕೇವಲ 1 ರನ್ ಮಾತ್ರ. ಅಲ್ಲದೆ 2 ವಿಕೆಟ್ ಕಬಳಿಸಿದರು. ಇನ್ನು 19ನೇ ಓವರ್ನಲ್ಲಿ 4 ರನ್ ಕಲೆಹಾಕುವಲ್ಲಿ ಬ್ರಾಂಪ್ಟನ್ ವೊಲ್ವ್ಝ್ ತಂಡದ ಆಟಗಾರರು ಯಶಸ್ವಿಯಾದರು.
ಅದರಂತೆ ಕೊನೆಯ ಓವರ್ನಲ್ಲಿ ಗೆಲ್ಲಲು 2 ರನ್ಗಳಿಸಬೇಕಿತ್ತು. ಈ ಹಂತದಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಝಮಾನ್ ಖಾನ್ ಮೊದಲ 4 ಎಸೆತಗಳಲ್ಲಿ ನೀಡಿದ್ದು ಕೇವಲ 1 ರನ್ ಮಾತ್ರ. ಇನ್ನು 2 ಎಸೆತಗಳಲ್ಲಿ 1 ರನ್ ಬೇಕಿದ್ದ ವೇಳೆ ಜಾನ್ ಫ್ರೈಲಿಂಕ್ ಫೋರ್ ಬಾರಿಸಿದರು. ಈ ಮೂಲಕ ಬ್ರಾಂಪ್ಟನ್ ವೊಲ್ವ್ಝ್ ತಂಡವು 19.5 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಬಾರಿಸಿ 1 ವಿಕೆಟ್ನಿಂದ ರೋಚಕ ಗೆಲುವು ತಮ್ಮದಾಗಿಸಿಕೊಂಡರು.
ಬ್ರಾಂಪ್ಟನ್ ವೊಲ್ವ್ಝ್ ಪ್ಲೇಯಿಂಗ್ 11: ಉಸ್ಮಾನ್ ಖಾನ್ (ವಿಕೆಟ್ ಕೀಪರ್) , ಆರನ್ ಜಾನ್ಸನ್ , ಮಾರ್ಕ್ ಚಾಪ್ಮ್ಯಾನ್ , ಕಾಲಿನ್ ಡಿ ಗ್ರ್ಯಾಂಡ್ಹೋಮ್ , ಕ್ರಿಸ್ ಗ್ರೀನ್ , ಹುಸೇನ್ ತಲತ್ , ಲೋಗನ್ ವ್ಯಾನ್ ಬೀಕ್ , ಜಾನ್ ಫ್ರಿಲಿಂಕ್ , ಟಿಮ್ ಸೌಥಿ (ನಾಯಕ) , ಶಾಹಿದ್ ಅಹ್ಮದ್ಜಾಯ್ , ರಿಜ್ವಾನ್ ಚೀಮಾ.
ಇದನ್ನೂ ಓದಿ: Virat Kohli: ಭರ್ಜರಿ ಸೆಂಚುರಿ ಸಿಡಿಸಿ 8 ದಾಖಲೆ ಬರೆದ ಕಿಂಗ್ ಕೊಹ್ಲಿ
ಟೊರೊಂಟೊ ನ್ಯಾಷನಲ್ಸ್ ಪ್ಲೇಯಿಂಗ್ 11: ಹಮ್ಝಾ ತಾರಿಕ್ (ನಾಯಕ) , ನಿಕೋಲಸ್ ಕಿರ್ಟನ್ , ಕಾಲಿನ್ ಮನ್ರೋ , ಗೆರ್ಹಾರ್ಡ್ ಎರಾಸ್ಮಸ್ , ಫಹೀಮ್ ಅಶ್ರಫ್ , ಶಾಹಿದ್ ಅಫ್ರಿದಿ , ಸಾದ್ ಬಿನ್ ಜಾಫರ್ , ಜೆಜೆ ಸ್ಮಿತ್ , ಜಮಾನ್ ಖಾನ್ , ಫಜಲ್ಹಕ್ ಫಾರೂಕಿ , ಫರ್ಹಾನ್ ಮಲಿಕ್.