ಕ್ರಿಕೆಟ್ ಅಂಗಳವು ನಾಟಕೀಯ ತಿರುವುಗಳಿಗೆ ಹಲವು ಬಾರಿ ಸಾಕ್ಷಿಯಾಗಿದೆ. ಕೆಲವೊಮ್ಮೆ ಇಂತಹ ತಿರುವುಗಳು ಇಡೀ ಪಂದ್ಯದ ಫಲಿತಾಂಶವನ್ನೇ ಬದಲಿಸಿಬಿಡುತ್ತದೆ. ಅಂತಹದೊಂದು ಪಂದ್ಯಕ್ಕೆ ಸಾಕ್ಷಿಯಾಗಿ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಲೀಗ್. ಈ ಪಂದ್ಯದಲ್ಲಿ ಗ್ಲೌಸೆಸ್ಟರ್‌ಶೈರ್ ಮತ್ತು ಸಸೆಕ್ಸ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಸಸೆಕ್ಸ್ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಗ್ಲೌಸೆಸ್ಟರ್‌ಶೈರ್ ಉತ್ತಮ ಆರಂಭ ಪಡೆದಿರಲಿಲ್ಲ. ಪಂದ್ಯದ ಮೊದಲ ಎಸೆತದಲ್ಲೇ ಹಮ್ಮೊಂಡ್ ಶೂನ್ಯಕ್ಕೆ ಔಟಾಗಿದ್ದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಫಿಲಿಪ್ಸ್ 53 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 8 ಬೌಂಡರಿಗಳೊಂದಿಗೆ 66 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನಿಂದ ಗ್ಲೌಸೆಸ್ಟರ್‌ಶೈರ್ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಕಲೆಹಾಕಿತು.
146 ರನ್ಗಳ ಸಾಧಾರಣ ಸವಾಲು ಪಡೆದ ಸಸೆಕ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಗ್ಲೌಸೆಸ್ಟರ್‌ಶೈರ್ ತಂಡವು ಯಶಸ್ವಿಯಾಗಿತ್ತು. ಆರಂಭಿಕ ಆಟಗಾರ ಟಿಮ್ ಸೀಫರ್ಟ್ ಐದನೇ ಎಸೆತದಲ್ಲಿ ಖಾತೆ ತೆರೆಯದೆ ಪೆವಿಲಿಯನ್ಗೆ ಮರಳಿದರು. ಇದಾದ ಬಳಿಕ ನಾಯಕ ರವಿ ಬೋಪಾರ (10) ಕೂಡ ಔಟಾದರು. ಈ ಹಂತದಲ್ಲಿ ಜೊತೆಯಾದ ಟಾಮ್ ಅಲ್ಸೋಪ್ ಮತ್ತು ಫಿನ್ ಹಡ್ಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ಮೂರನೇ ವಿಕೆಟ್‌ಗೆ 70 ರನ್ ಸೇರಿಸಿದರು. ಅದರಂತೆ 14ನೇ ಓವರ್ ವೇಳೆಗೆ ಸಸೆಕ್ಸ್ ತಂಡವು 2 ವಿಕೆಟ್ ನಷ್ಟಕ್ಕೆ 118 ರನ್ಗಳಿಸಿ ಗೆಲುವಿನತ್ತ ಮುನ್ನಡೆದಿತ್ತು.
ಇತ್ತ ಸಸೆಕ್ಸ್ ತಂಡಕ್ಕೆ ಗೆಲುವು ನಿಶ್ಚಿತ ಎಂದು ಅಭಿಮಾನಿಗಳ ಹರ್ಷೋದ್ಘಾರ ಕೂಡ ಮುಗಿಲು ಮುಟ್ಟಿತ್ತು. ಆದರೆ ಈ ಹಂತದಲ್ಲಿ ಶುರುವಾದ ನಾಟಕೀಯ ತಿರುವು ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. 118 ರನ್ ಆಗಿದ್ದ ವೇಳೆ ಹಡ್ಸನ್ ಔಟಾದರು. 119 ರನ್ ವೇಳೆ 52 ಎಸೆರಗಳಲ್ಲಿ 82 ರನ್ ಬಾರಿಸಿದ್ದ ಟಾಮ್ ಅಲ್ಸೊಪ್ ಕೂಡ ವಿಕೆಟ್ ಕೈಚೆಲ್ಲಿದರು. ಪ್ರಮುಖ 2 ವಿಕೆಟ್ ಸಿಗುತ್ತಿದ್ದಂತೆ ಗ್ಲೌಸೆಸ್ಟರ್‌ಶೈರ್ ತಂಡದ ನಾಯಕ ಬೌಲಿಂಗ್ನಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದರು.
ಈ ಹಂತದಲ್ಲಿ ಸಸೆಕ್ಸ್ ತಂಡಕ್ಕೆ ಗೆಲ್ಲಲು ಬೇಕಿದದ್ದು ಕೇವಲ 28 ರನ್ ಮಾತ್ರ. ಅತ್ತ 6 ವಿಕೆಟ್ಗಳಿದ್ದವು. ಆದರೆ 118 ರನ್ನಿಂದ ಶುರುವಾದ ವಿಕೆಟ್ ಪತನ ಬಂದು ನಿಂತಿದ್ದು 141 ರನ್ಗೆ. ಅಂದರೆ 28 ರನ್ಗಳಿಸುವಷ್ಟರಲ್ಲಿ ಸಸೆಕ್ಸ್ ತಂಡದ 8 ವಿಕೆಟ್ಗಳು ಪತನಗೊಂಡವು. ಅದರಲ್ಲೂ ಕೊನೆಯ 3 ಎಸೆತಗಳಲ್ಲಿ 5 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಸ್ಟೀವ್ ಫಿನ್ ಕ್ಯಾಚ್ ನೀಡಿದ ಪರಿಣಾಮ ಗ್ಲೌಸೆಸ್ಟರ್‌ಶೈರ್ ತಂಡವು 4 ರನ್ಗಳ ರೋಚಕ ಜಯ ಸಾಧಿಸಿತು. ಗ್ಲೌಸೆಸ್ಟರ್‌ಶೈರ್ ಪರ ಡೇವಿಡ್ ಪೇನ್ ಹಾಗೂ ಝ್ಯಾಕ್ ಚಾಪೆಲ್ ತಲಾ 3 ವಿಕೆಟ್ ಕಬಳಿಸಿದರೆ, ಟಾಮ್ ಸ್ಮಿತ್ 2 ವಿಕೆಟ್ ಉರುಳಿಸಿ ಮಿಂಚಿದರು. ಈ ಗೆಲುವಿನೊಂದಿಗೆ ಗ್ಲೌಸೆಸ್ಟರ್‌ಶೈರ್ ತಂಡವು ಸೌತ್ ಗ್ರೂಪ್ ಪಾಯಿಂಟ್ಸ್ ಟೇಬಲ್ನಲ್ಲಿ 4ನೇ ಸ್ಥಾನಕ್ಕೇರಿದೆ.
Turnaround = Complete ?
What. A. Match.#Blast22 pic.twitter.com/P8vLB7vlqT
— Vitality Blast (@VitalityBlast) June 10, 2022
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:05 pm, Sat, 11 June 22