
ಬೆಂಗಳೂರು (ಆ. 08): ಪಾಕಿಸ್ತಾನದ (Pakistan Cricket Team) ಯುವ ಬ್ಯಾಟ್ಸ್‌ಮನ್ ಹೈದರ್ ಅಲಿ ಇಂಗ್ಲೆಂಡ್‌ನಲ್ಲಿ ಕ್ರಿಮಿನಲ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಆಟಗಾರನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ ಎಂದು ನವಭಾರತ್ ಟೈಮ್ಸ್ ವರದಿ ಮಾಡಿದೆ. ಈ ಘಟನೆಯ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹೈದರ್ ಅಲಿ ಅನ್ನು ತಕ್ಷಣವೇ ಅಮಾನತುಗೊಳಿಸಿದೆ. ಸದ್ಯ ಹೈದರ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆಯಂತೆ. 24 ವರ್ಷದ ಹೈದರ್ ಅಲಿ ಪಾಕಿಸ್ತಾನ ಪರ ಎರಡು ಏಕದಿನ ಮತ್ತು 35 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ಸೋಮವಾರ ಬಂಧನ
ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಪೊಲೀಸರು, ‘ಆಗಸ್ಟ್ 4, 2025 ರಂದು ಅತ್ಯಾಚಾರದ ವರದಿಯನ್ನು ಸ್ವೀಕರಿಸಿದ ನಂತರ ನಾವು 24 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದೇವೆ. ಈ ಘಟನೆ ಜುಲೈ 23, 2025 ರ ಬುಧವಾರದಂದು ಮ್ಯಾಂಚೆಸ್ಟರ್‌ನ ಸಂಕೀರ್ಣವೊಂದರಲ್ಲಿ ನಡೆದಿತ್ತು ಎಂದು ಆರೋಪಿಸಲಾಗಿದೆ. ಹೆಚ್ಚಿನ ತನಿಖೆ ಬಾಕಿ ಇರುವ ಕಾರಣ ಆ ವ್ಯಕ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪೊಲೀಸರು ಸಂತ್ರಸ್ತೆಗೆ ಸಹಾಯ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ತನಿಖೆ ಮುಗಿಯುವವರೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹೈದರ್ ಅಲಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಪಿಸಿಬಿ ಹೇಳಿಕೆಯಲ್ಲಿ, “ಯುನೈಟೆಡ್ ಕಿಂಗ್‌ಡಂನ ಕಾನೂನು ಪ್ರಕ್ರಿಯೆಗಳು ಮತ್ತು ಕಾರ್ಯವಿಧಾನಗಳನ್ನು ಪಿಸಿಬಿ ಸಂಪೂರ್ಣವಾಗಿ ಗೌರವಿಸುತ್ತದೆ ಮತ್ತು ತನಿಖೆಯನ್ನು ತನ್ನ ಹಾದಿಯಲ್ಲಿ ನಡೆಸಲು ಅನುಮತಿಸುವ ಮಹತ್ವವನ್ನು ಅರ್ಥಮಾಡಿಕೊಂಡಿದೆ. ಆದ್ದರಿಂದ, ನಡೆಯುತ್ತಿರುವ ತನಿಖೆಯ ಫಲಿತಾಂಶ ಬರುವವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹೈದರ್ ಅಲಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲು ಪಿಸಿಬಿ ನಿರ್ಧರಿಸಿದೆ” ಎಂದು ತಿಳಿಸಿದೆ.
Yashasvi Jaiswal: ರೋಹಿತ್ ಶರ್ಮಾ ಮಾತಿಗೆ ತಲೆಬಾಗಿದ ಯಶಸ್ವಿ ಜೈಸ್ವಾಲ್
2023 ರಿಂದ ತಂಡದಿಂದ ಹೊರಗಿರುವ ಅಲಿ
ಹೈದರ್ ಅಲಿ ಪಾಕಿಸ್ತಾನದ ‘ಎ’ ತಂಡದ ಶಾಹೀನ್ ಟೀಮ್ ಜೊತೆ ಇಂಗ್ಲೆಂಡ್ ಪ್ರವಾಸದಲ್ಲಿದ್ದರು. ಆ ಪ್ರವಾಸದಲ್ಲಿ ಅವರು 5 ಪಂದ್ಯಗಳನ್ನು ಆಡಿದ್ದಾರೆ ಮತ್ತು ಇದರಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿದರು. ಅವರು 2023 ರಲ್ಲಿ ಪಾಕಿಸ್ತಾನ ಪರ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದಾರೆ. ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ, ಹೈದರ್ ಅಲಿ ಟಿ20ಯಲ್ಲಿ 505 ರನ್ ಮತ್ತು ಏಕದಿನದಲ್ಲಿ 42 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ ಮೂರು ಅರ್ಧಶತಕಗಳಿವೆ. 2020 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ಅವರು ಪಾಕಿಸ್ತಾನ ತಂಡದ ಭಾಗವಾಗಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ