ಕ್ರಿಕೆಟಿಗನಾಗಿ ಬದಲಾದ ಇಂಜಿನಿಯರ್: ಟೀಮ್ ಇಂಡಿಯಾದ ವೇಗದ ಅಸ್ತ್ರವಾಗಿದ್ದ ಕನ್ನಡಿಗ
Happy Birthday Javagal Srinath: ಟೀಮ್ ಇಂಡಿಯಾ ಪರ 67 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಜಾವಗಲ್ ಶ್ರೀನಾಥ್ ಒಟ್ಟು 236 ವಿಕೆಟ್ಗಳನ್ನು ಕಬಳಿಸಿದ್ದರು. ಹಾಗೆಯೇ 229 ಏಕದಿನ ಪಂದ್ಯಗಳಿಂದ 315 ವಿಕೆಟ್ ಪಡೆದಿದ್ದಾರೆ.
ಭಾರತ ಕಂಡಂತಹ ಅತ್ಯುತ್ತಮ ವೇಗಿಗಳ ಪಟ್ಟಿಯನ್ನು ಸಿದ್ಧಪಡಿಸಿದರೆ ಅದರಲ್ಲಿ ಕನ್ನಡಿಗನ ಹೆಸರಂತು ಇದ್ದೇ ಇರುತ್ತೆ. ಹೀಗೆ ಕಾಣಿಸಿಕೊಳ್ಳುವ ಹೆಸರು ಮತ್ಯಾರದ್ದೂ ಅಲ್ಲ, ಅವರೇ ಜಾವಗಲ್ ಶ್ರೀನಾಥ್. ಪ್ರಸ್ತುತ ಭಾರತದ ವೇಗದ ಬೌಲಿಂಗ್ ಲೈನಪ್ ಹಲವು ತಂಡಗಳಿಗೆ ಮಾದರಿಯಾಗಿರಬಹುದು. ಇಂದು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಅವರಂತಹ ಬೌಲರ್‌ಗಳನ್ನು ಟೀಮ್ ಇಂಡಿಯಾ ಹೊಂದಿರಲೂ ಬಹುದು. ಆದರೆ ಒಂದು ಕಾಲದಲ್ಲಿ ಭಾರತೀಯ ಬೌಲಿಂಗ್ ಶ್ರೀನಾಥ್ ಅವರ ಏಕೈಕ ಜವಾಬ್ದಾರಿಯಾಗಿತ್ತು ಎಂದರೆ ನಂಬಲೇಬೇಕು. ಏಕೆಂದರೆ ಒಂದು ಕಾಲದಲ್ಲಿ ಭಾರತದ ವೇಗದ ಬೌಲಿಂಗ್ ವಿಭಾಗದಲ್ಲಿ ಸಂಚಲನ ಸೃಷ್ಟಿಸಿದ್ದ ಕಪಿಲ್ ದೇವ್ ಬಳಿಕ ಯಾರು ಎಂಬ ಪ್ರಶ್ನೆಗೆ ಸಿಕ್ಕ ಉತ್ತರವೇ ಜಾವಗಲ್ ಶ್ರೀನಾಥ್.
ವಿಶೇಷ ಎಂದರೆ ಟೀಮ್ ಇಂಡಿಯಾದ ವೇಗಿಯಾಗಿ ಕಾಣಿಸಿಕೊಂಡಿದ್ದ ಮೈಸೂರಿನ ಶ್ರೀನಾಥ್ ಅವರು ಉನ್ನತ ಶಿಕ್ಷಣ ಪಡೆದ ಕೆಲವೇ ಆಟಗಾರರಲ್ಲಿ ಒಬ್ಬರು. ಅವರು ಇಂಜಿನಿಯರಿಂಗ್ನಲ್ಲಿ ಪದವಿ ಮಾಡಿದ್ದರು. ಆದರೆ ಕ್ರಿಕೆಟ್ ಮೇಲಿನ ಪ್ರೀತಿಯೇ ಶ್ರೀನಾಥ್ ಅವರನ್ನು ಆ ಬಳಿಕ ಟೀಮ್ ಇಂಡಿಯಾವರೆಗೂ ತಲುಪಿಸಿತು. ಅಂದು ಶ್ರೀನಾಥ್ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿದ್ದು ಮತ್ತೋರ್ವ ಕರ್ನಾಟಕದ ಶ್ರೇಷ್ಠ ಆಟಗಾರ ಗುಂಡಪ್ಪ ವಿಶ್ವನಾಥ್ ಅವರು ಎಂಬುದು ಇಲ್ಲಿ ಉಲ್ಲೇಖಾರ್ಹ.
ಶ್ರೀನಾಥ್ ಅವರು ಕರ್ನಾಟಕದಲ್ಲಿ ಕ್ಲಬ್ ಮ್ಯಾಚ್ ಆಡುತ್ತಿದ್ದಾಗ ಭಾರತದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಗುಂಡಪ್ಪ ವಿಶ್ವನಾಥ್ ಅವರನ್ನು ನೋಡಿದರು. ಅಲ್ಲದೆ ಅವರ ಬೌಲಿಂಗ್ನಿಂದ ಪ್ರಭಾವಿತರಾದರು. ಹೀಗಾಗಿ ಶ್ರೀನಾಥ್ ಅವರ ಹೆಸರನ್ನು ಕರ್ನಾಟಕ ತಂಡಕ್ಕೆ ಸೂಚಿಸಿದ್ದರು.
1989-90 ರಲ್ಲಿ ಕರ್ನಾಟಕ ಪರ ಪದಾರ್ಪಣೆ ಮಾಡಿದ್ದ ಶ್ರೀನಾಥ್ ಅವರು ಹೈದಾರಾಬಾದ್ ವಿರುದ್ದದ ಚೊಚ್ಚಲ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಉರುಳಿಸಿದ್ದರು. ಅಲ್ಲದೆ ಆ ಇನಿಂಗ್ಸ್ನಲ್ಲಿ ಒಟ್ಟು 5 ವಿಕೆಟ್ ಪಡೆದು ಮಿಂಚಿದ್ದರು. 1991 ರಲ್ಲಿ ಟೀಮ್ ಇಂಡಿಯಾದಲ್ಲೂ ಅವಕಾಶ ಪಡೆದ ಶ್ರೀನಾಥ್ ಅವರು ಆ ಬಳಿಕ ಹಿಂತಿರುಗಿ ನೋಡಿರಲಿಲ್ಲ ಎಂದರೆ ತಪ್ಪಾಗಲಾರದು.
ವಿಶೇಷ ಎಂದರೆ ಶ್ರೀನಾಥ್ ಅವರು 2002 ರಲ್ಲೇ ನಿವೃತ್ತಿಯಾಗಿದ್ದರು. ಆದರೆ ಅಂದಿನ ಟೀಮ್ ಇಂಡಿಯಾ ನಾಯಕ ಸೌರವ್ ಗಂಗೂಲಿ ಅವರ ಮನವೊಲಿಸಿ ಅವರನ್ನು 2003 ರ ವಿಶ್ವಕಪ್ನಲ್ಲಿ ಮತ್ತೆ ಆಡಿಸಿದ್ದರು. ಇಲ್ಲಿ ಮತ್ತೊಂದು ಪ್ರಮುಖ ಅಂಶ ಎಂದರೆ 2003 ರ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿದ್ದ ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದಿದ್ದು ಕೂಡ ಶ್ರೀನಾಥ್ ಅವರಾಗಿತ್ತು. ಅಂದರೆ ವರ್ಷಗಳ ಹಿಂದೆಯೇ ನಿವೃತ್ತಿ ನೀಡಲು ಮುಂದಾಗಿದ್ದ ಶ್ರೀನಾಥ್ ಅವರನ್ನು ಟೀಮ್ ಇಂಡಿಯಾ ಎಷ್ಟು ಅವಲಂಬಿಸಿತ್ತು ಎಂಬುದನ್ನು ಊಹಿಸಬಹುದು.
ಟೀಮ್ ಇಂಡಿಯಾ ಪರ 67 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಜಾವಗಲ್ ಶ್ರೀನಾಥ್ ಒಟ್ಟು 236 ವಿಕೆಟ್ಗಳನ್ನು ಕಬಳಿಸಿದ್ದರು. ಹಾಗೆಯೇ 229 ಏಕದಿನ ಪಂದ್ಯಗಳಿಂದ 315 ವಿಕೆಟ್ ಪಡೆದಿದ್ದಾರೆ. ವಿಶೇಷ ಎಂದರೆ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಶ್ರೀನಾಥ್ ಹೆಸರು 2ನೇ ಸ್ಥಾನದಲ್ಲಿದೆ. ಇನ್ನು ಮೊದಲ ಸ್ಥಾನದಲ್ಲಿರುವುದು ಅವರ ಸ್ನೇಹಿತ ಅನಿಲ್ ಕುಂಬ್ಳೆ (334) ಎಂಬುದು ಇಲ್ಲಿ ಮತ್ತೊಂದು ವಿಶೇಷ. ಅಂದಹಾಗೆ ಇಂದು (ಆಗಸ್ಟ್ 31) ಕನ್ನಡಿಗರ ಹೆಮ್ಮೆ ಜಾವಗಲ್ ಶ್ರೀನಾಥ್ ಅವರ ಹುಟ್ಟುಹಬ್ಬ. ಎನಿವೇ ಹ್ಯಾಪಿ ಹುಟ್ದಬ್ಬ ಲೆಜೆಂಡ್.