ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಇನ್ನು ಎಷ್ಟು ವರ್ಷ ಆಡ್ತಾರೆ? ಹರ್ಭಜನ್ ಸಿಂಗ್ ಉತ್ತರ ಹೀಗಿದೆ

|

Updated on: Aug 13, 2024 | 8:32 AM

Virat Kohli - Rohit Sharma: 2024ರ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟಿ20 ಇಂಟರ್​ನ್ಯಾಷನಲ್ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಇನ್ನು 37 ವರ್ಷದ ರೋಹಿತ್ ಶರ್ಮಾ ಹಾಗೂ 35 ವರ್ಷದ ವಿರಾಟ್ ಕೊಹ್ಲಿ ಮುಂಬರುವ ಏಕದಿನ ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಹೀಗಾಗಿಯೇ ಟೀಮ್ ಇಂಡಿಯಾದ ಇಬ್ಬರು ದಿಗ್ಗಜರ ನಿವೃತ್ತಿಯ ವಿಚಾರ ಇದೀಗ ಚರ್ಚೆಗೆ ಕಾರಣವಾಗಿದೆ.

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಇನ್ನು ಎಷ್ಟು ವರ್ಷ ಆಡ್ತಾರೆ? ಹರ್ಭಜನ್ ಸಿಂಗ್ ಉತ್ತರ ಹೀಗಿದೆ
Virat Kohli-Rohit Sharma
Follow us on

ಟೀಮ್ ಇಂಡಿಯಾ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಚಾಂಪಿಯನ್ಸ್ ಟ್ರೋಫಿ ಬಳಿಕ ಏಕದಿನ ಕ್ರಿಕೆಟ್​ಗೆ ಹಿಟ್​ಮ್ಯಾನ್ ವಿದಾಯ ಹೇಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅತ್ತ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದರೆ, ವಿರಾಟ್ ಕೊಹ್ಲಿ ಕೂಡ ಅವರ ಹಾದಿ ತುಳಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿಯೇ ಟೀಮ್ ಇಂಡಿಯಾ ದಿಗ್ಗಜರ ನಿವೃತ್ತಿ ವಿಚಾರ ಇದೀಗ ಚರ್ಚಾ ವಿಷಯವಾಗಿದೆ.

ಇದಾಗ್ಯೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸದ್ಯಕ್ಕಂತು ನಿವೃತ್ತಿ ನೀಡಲ್ಲ ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್. ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಭಜ್ಜಿ, ರೋಹಿತ್ ಶರ್ಮಾ ಅವರು ಇನ್ನೂ ಎರಡು ವರ್ಷಗಳ ಕಾಲ ಆಡಲಿದ್ದಾರೆ. ಹೀಗಾಗಿ ಸದ್ಯಕ್ಕೆ ಅವರ ನಿವೃತ್ತಿ ನಿರೀಕ್ಷಿಸಬೇಡಿ ಎಂದಿದ್ದಾರೆ.

ಹಾಗೆಯೇ ವಿರಾಟ್ ಕೊಹ್ಲಿಯ ಫಿಟ್​ನೆಸ್ ಗಮನಿಸಿದರೆ, ಅವರು ಇನ್ನೂ ಐದು ವರ್ಷಗಳ ಕಾಲ ಅಂಗಳದಲ್ಲಿ ಉಳಿಯುವುದನ್ನು ಎದುರು ನೋಡಬಹುದು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ನೀವು ವಿರಾಟ್‌ನೊಂದಿಗೆ ಸ್ಪರ್ಧಿಸುವ ಯಾವುದೇ 19 ವರ್ಷದ ಯುವಕನನ್ನು ಫಿಟ್‌ನೆಸ್ ಕುರಿತು ಕೇಳಿ. ವಿರಾಟ್ ಅವರನ್ನು ಸೋಲಿಸುತ್ತಾರೆ. ಅವರು ಅಷ್ಟು ಫಿಟ್ ಆಗಿದ್ದಾರೆ. ವಿರಾಟ್ ಮತ್ತು ರೋಹಿತ್ ಅವರಲ್ಲಿ ಸಾಕಷ್ಟು ಕ್ರಿಕೆಟ್ ಉಳಿದಿದೆ ಎಂದು ನಾನು ನಂಬುತ್ತೇನೆ. ಇಬ್ಬರೂ ಸಾಕಷ್ಟು ಫಿಟ್ ಆಗಿದ್ದರೆ, ಉತ್ತಮ ಪ್ರದರ್ಶನ ನೀಡುತ್ತಿದ್ದರ ಮತ್ತು ತಂಡವು ಗೆಲ್ಲುತ್ತಿದ್ದರೆ ಅವರಿಬ್ಬರೂ ತಮ್ಮ ಆಟವನ್ನು ಮುಂದುವರಿಸಬೇಕು ಎಂದು ನಾನು ಆಶಿಸುತ್ತೇನೆ.

ಕೆಂಪು ಚೆಂಡಿನ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಅಗತ್ಯತೆಯಿದೆ. ಸೀಮಿತ ಓವರ್‌ಗಳ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ ಆಗಿರಲಿ ನಿಮಗೆ ಎಲ್ಲಾ ಸ್ವರೂಪಗಳಲ್ಲಿ ಅನುಭವದ ಅಗತ್ಯವಿರುತ್ತವೆ. ಮುಂದೆ ಬರುತ್ತಿರುವ ಪ್ರತಿಭೆಯನ್ನು ಪೋಷಿಸಲು ಅನುಭವಿ ಕ್ರಿಕೆಟಿಗರು ತಂಡದಲ್ಲಿರಬೇಕು. ಹೀಗಾಗಿಯೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಂಡದಲ್ಲಿದ್ದರೆ ಅದು ಭಾರತೀಯ ಕ್ರಿಕೆಟ್​ಗೆ ಉತ್ತಮ ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಹರಾಜಿನಲ್ಲಿ ಕಾಣಿಸಿಕೊಂಡರೆ 30 ಕೋಟಿ ರೂ. ಗ್ಯಾರಂಟಿ..!

ನನ್ನ ಪ್ರಕಾರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರಲ್ಲಿ ಸಾಕಷ್ಟು ಕ್ರಿಕೆಟ್ ಅಂತು ಉಳಿದಿದೆ. ಹೀಗಾಗಿ ಇವರಿಬ್ಬರು ಒಂದಷ್ಟು ವರ್ಷಗಳ ಕಾಲ ಭಾರತ ತಂಡದಲ್ಲಿ ಮುಂದುವರೆಯಬೇಕೆಂದು ಬಯಸುತ್ತೇನೆ. ಹೀಗಾಗಿ ಇವರಿಬ್ಬರು ಶೀಘ್ರದಲ್ಲಿ ನಿವೃತ್ತಿ ಘೋಷಿಸುವುದಿಲ್ಲ ಎಂಬುದು ನನ್ನ ಅನಿಸಿಕೆ. ಅದರಂತೆ ಇನ್ನೂ 2 ರಿಂದ 5 ವರ್ಷಗಳ ಕಾಲ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.