Hardik Pandya: ಜಸ್ಪ್ರೀತ್ ಬುಮ್ರಾ ಶೈಲಿಯಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್..!
Asia Cup 2022: ಏಷ್ಯಾಕಪ್ ಟೂರ್ನಿಯಿಂದ ಟೀಮ್ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಗಾಯದ ಕಾರಣ ಹೊರಗುಳಿದಿದ್ದಾರೆ.
ಏಷ್ಯಾ ಕಪ್ 2022 (Asia Cup 2022) ಪಂದ್ಯಾವಳಿಗೆ ವೇದಿಕೆ ಸಿದ್ಧವಾಗಿದೆ. ಶನಿವಾರದಿಂದ ಆರಂಭವಾಗಲಿರುವ ಟೂರ್ನಿಯ 2ನೇ ಪಂದ್ಯದಲ್ಲಿ ಭಾರತ-ಪಾಕ್ (India vs Pakistan) ಮುಖಾಮುಖಿಯಾಗಲಿದೆ. ಆಗಸ್ಟ್ 28 ರಂದು ನಡೆಯಲಿರುವ ಈ ಪಂದ್ಯಕ್ಕೆ ಟೀಮ್ ಇಂಡಿಯಾ (Team india) ವೇಗಿ ಜಸ್ಪ್ರೀತ್ ಬುಮ್ರಾ ಅಲಭ್ಯರಾಗಿದ್ದಾರೆ. ಅಂದರೆ ಬೆನ್ನು ನೋವಿನ ಕಾರಣ ಬುಮ್ರಾ ಏಷ್ಯಾಕಪ್ನಿಂದ ಹೊರಗುಳಿದಿದ್ದಾರೆ. ಇತ್ತ ಟೀಮ್ ಇಂಡಿಯಾ ಪರ ವೇಗಿಗಳಾಗಿ ಭುವನೇಶ್ವರ್ ಕುಮಾರ್, ಅವೇಶ್ ಖಾನ್ ಹಾಗೂ ಅರ್ಷದೀಪ್ ಸಿಂಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ.
ಇತ್ತ ಬುಮ್ರಾ ಹೊರಗುಳಿಯುತ್ತಿದ್ದಂತೆ ಅತ್ತ ಹಾರ್ದಿಕ್ ಪಾಂಡ್ಯ ಬೌಲಿಂಗ್ ಕಡೆ ಹೆಚ್ಚಿನ ಗಮನಹರಿಸುತ್ತಿದ್ದಾರೆ. ಏಕೆಂದರೆ ಅನುಭವಿ ವೇಗಿಗಳ ಅನುಪಸ್ಥಿತಿಯಲ್ಲಿ ಪಾಂಡ್ಯ ಪ್ರಮುಖ ಬೌಲರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅತ್ತ ನೆಟ್ಸ್ನಲ್ಲಿ ಹಾರ್ದಿಕ್ ಪಾಂಡ್ಯ ಜಸ್ಪ್ರೀತ್ ಬುಮ್ರಾ ಶೈಲಿಯನ್ನು ಅನುಕರಿಸುತ್ತಿರುವುದು ಕಂಡು ಬಂದಿದೆ.
ಅಂದರೆ ಬುಮ್ರಾ ಬೌಲಿಂಗ್ ಶೈಲಿಯನ್ನು ಅನುಕರಿಸಿ ಬೌಲಿಂಗ್ ಮಾಡಿದ ಪಾಂಡ್ಯ, ಯಾರ್ಕರ್ ಕಿಂಗ್ ವಿಕೆಟ್ ಸಿಕ್ಕಾಗ ಸಂಭ್ರಮಿಸುವಂತೆ ಕೈ ತೋರಿಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಏಷ್ಯಾಕಪ್ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ಸ್ಥಾನವನ್ನು ನೀವು ತುಂಬಬೇಕೆಂದು ಹಲವು ಅಭಿಮಾನಿಗಳು ಹಾರೈಸಿದ್ದಾರೆ.
ಪ್ರಸ್ತುತ ಸನ್ನಿವೇಶದಲ್ಲಿ ಪಾಕಿಸ್ತಾನ್ ವಿರುದ್ದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಭುವನೇಶ್ವರ್ ಕುಮಾರ್ ಜೊತೆ ಪವರ್ಪ್ಲೇ ಓವರ್ ಎಸೆಯುವ ಸಾಧ್ಯತೆಯಿದೆ. ಇದೇ ಕಾರಣಕ್ಕಾಗಿ ಪಾಂಡ್ಯ ಬೌಲಿಂಗ್ ಅಭ್ಯಾಸದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.
View this post on Instagram
ಟೀಮ್ ಇಂಡಿಯಾಗೆ ಬೌಲಿಂಗ್ ಸಮಸ್ಯೆ:
ಏಷ್ಯಾಕಪ್ ಟೂರ್ನಿಯಿಂದ ಟೀಮ್ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಗಾಯದ ಕಾರಣ ಹೊರಗುಳಿದಿದ್ದಾರೆ. ಇನ್ನು ಹಿರಿಯ ವೇಗಿ ಮೊಹಮ್ಮದ್ ಶಮಿಯನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಇತ್ತ ತಂಡಕ್ಕೆ ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಹಾಗೂ ಅವೇಶ್ ಖಾನ್ ಆಯ್ಕೆಯಾಗಿದ್ದಾರೆ. ಆದರೆ ಇಲ್ಲಿ ಭುವಿಯನ್ನು ಹೊರತುಪಡಿಸಿ ಇಬ್ಬರು ವೇಗಿಗಳು ಅನಾನುಭವಿಗಳು ಎಂಬುದು ವಿಶೇಷ. ಹೀಗಾಗಿಯೇ ಟೀಮ್ ಇಂಡಿಯಾ ವೇಗದ ಬೌಲಿಂಗ್ ಲೈನಪ್ ಬಲಿಷ್ಠವಾಗಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಏಷ್ಯಾಕಪ್ಗೆ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್.