ಆಯ್ಕೆ ಮಂಡಳಿ ವಜಾ, ಟಿ20 ಮಾದರಿಗೆ ಹೊಸ ನಾಯಕ.. ಹಿರಿಯರಿಗೆ ಟಿ20 ತಂಡದಿಂದ ಕೋಕ್!
BCCI: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್ ಅಶ್ವಿನ್, ದಿನೇಶ್ ಕಾರ್ತಿಕ್ ಅವರಂತಹ ದೊಡ್ಡ ಹೆಸರುಗಳು ಟಿ20 ತಂಡದಿಂದ ಡಿಲೀಟ್ ಆಗುವ ಎಲ್ಲಾ ಸಾಧ್ಯತೆಗಳಿವೆ.
ಟಿ20 ವಿಶ್ವಕಪ್‌ನಲ್ಲಿ (T20 World Cup 2022) ನೀರಸ ಪ್ರದರ್ಶನ ನೀಡಿದ ರೋಹಿತ್ (Rohit Sharma) ಪಡೆ ಆಸ್ಟ್ರೇಲಿಯಾದಿಂದ ಬರಿಗೈಯಲ್ಲಿ ವಾಪಸ್ಸಾಗಿತ್ತು. ಇದರಿಂದ ಟೀಂ ಇಂಡಿಯಾ ಅಭಿಮಾನಿಗಳು ಬಿಸಿಸಿಐ (BCCI) ನಿರ್ಧಾರದ ಬಗ್ಗೆ ಕೋಪಗೊಂಡಿದ್ದರು. ನೂರಾರು ಪ್ರತಿಭೆಗಳಿದ್ದರು ಕೇವಲ ಹೆಸರಿಗಷ್ಟೇ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಬಿಸಿಸಿಐ ಮೇಲೆ ಆರೋಪಗಳು ಕೇಳಿಬಂದಿದ್ದವು. ಹೀಗಾಗಿ ಮಂಡಳಿಯಲ್ಲಿ ಬದಲಾವಣೆ ಗಾಳಿ ಬೀಸಲಾರಂಭಿಸಿದ್ದು, ಬಿಸಿಸಿಐ ಸಂಪೂರ್ಣ ಆಯ್ಕೆ ಸಮಿತಿಯನ್ನೇ ಬದಲಾಯಿಸಲು ಮುಂದಾಗಿದೆ. ಹೊಸ ಸಮಿತಿಯ ರಚನೆಯ ಬಗ್ಗೆ ಘೋಷಣೆ ಮಾಡುವುದರೊಂದಿಗೆ ಮಂಡಳಿಯು ಚೇತನ್ ಶರ್ಮಾ ನೇತೃತ್ವದ ಸಮಿತಿಯನ್ನು ವಜಾ ಮಾಡಿದೆ. ಈ ಬದಲಾವಣೆಯೊಂದಿಗೆ, ಭಾರತೀಯ ಕ್ರಿಕೆಟ್‌ನಲ್ಲಿಯೂ ದೊಡ್ಡ ಬದಲಾವಣೆಯಾಗುವ ಊಹಾಪೋಹಗಳು ಕೇಳಿಬರುತ್ತಿವೆ. ಬಹುಶಃ ಈ ದೊಡ್ಡ ಬದಲಾವಣೆ ಜನವರಿಯಲ್ಲಿ ನಡೆಯುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಗೋಚರಿಸುವ ಸಾಧ್ಯತೆಗಳಿವೆ.
ವಾಸ್ತವವಾಗಿ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ನಿರ್ವಹಿಸಿದ ನಾಯಕತ್ವದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೆ ಮೈದಾನದಲ್ಲಿಯೇ ಅಸಮಾಧಾನಗೊಳ್ಳುವ ರೋಹಿತ್ ವರ್ತನೆಯ ಬಗ್ಗೆ ಹಲವು ಹಿರಿಯ ಆಟಗಾರರು ಪ್ರಶ್ನೆ ಎತ್ತಿದ್ದರು. ರೋಹಿತ್ ಅವರ ಈ ವರ್ತನೆ ಯುವ ಆಟಗಾರರ ಪ್ರದರ್ಶನದ ಮೇಲೆ ಹೊಡೆತ ನೀಡಲಿದೆ ಎಂದು ಆರೋಪಿಸಿದ್ದರು. ಅಲ್ಲದೆ 3 ಮಾದರಿಗೂ ಒಬ್ಬನನ್ನೇ ನಾಯಕನಾಗಿ ಮಾಡಿರುವುದು ರೋಹಿತ್ಗೆ ಒತ್ತಡವನ್ನುಂಟು ಮಾಡುತ್ತಿದೆ ಎಂದಿದ್ದರು. ಈಗ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೋತ ಬಳಿಕ ಬಿಸಿಸಿಐ ಟಿ20 ತಂಡಕ್ಕೆ ಹೊಸ ನಾಯಕನನ್ನು ನೇಮಿಸಲು ಮುಂದಾಗಿದೆ.
ಏಕದಿನ ಮತ್ತು ಟಿ20 ತಂಡಕ್ಕೆ ವಿಭಿನ್ನ ನಾಯಕರು
ಏಕದಿನ ಮತ್ತು ಟಿ20 ತಂಡಕ್ಕೆ ಇಬ್ಬರು ವಿಭಿನ್ನ ನಾಯಕರನ್ನು ನೇಮಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಇಲ್ಲಿಯವರೆಗೆ ಎಲ್ಲಾ ಮೂರು ಸ್ವರೂಪಗಳಿಗೆ ಅಥವಾ ಕೆಂಪು ಮತ್ತು ಬಿಳಿ ಚೆಂಡಿನ (ಏಕದಿನ- ಟಿ20, ಟೆಸ್ಟ್) ಮಾದರಿಗೆ ಒಬ್ಬನೇ ನಾಯಕನನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ ಈಗ ಮಂಡಳಿಯು ಬಿಳಿ ಚೆಂಡಿನ ಮಾದರಿಗೆ (ಏಕದಿನ- ಟಿ20) ಇಬ್ಬರು ನಾಯಕರನ್ನು ಆಯ್ಕೆ ಮಾಡಲು ಬಯಸಿದೆ. ಇನ್ಸೈಡ್‌ಸ್ಪೋರ್ಟ್‌ನ ಸುದ್ದಿ ಪ್ರಕಾರ, ಜನವರಿಯಲ್ಲಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯುವ ಟಿ20 ಸರಣಿಯಿಂದ ಇದನ್ನು ಜಾರಿಗೆ ತರಲು ಯೋಜಿಸಲಾಗಿದೆ.
ಪಾಂಡ್ಯ ನೂತನ ಟಿ20 ನಾಯಕ
ಸುದ್ದಿ ಪ್ರಕಾರ, ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧದ 3 ಏಕದಿನ ಮತ್ತು 3 ಟಿ20 ಪಂದ್ಯಗಳ ಸರಣಿಯನ್ನು ಇಬ್ಬರು ವಿಭಿನ್ನ ನಾಯಕರೊಂದಿಗೆ ಆಡಲಿದೆ. ರೋಹಿತ್ ಏಕದಿನ ನಾಯಕತ್ವವನ್ನು ಉಳಿಸಿಕೊಳ್ಳಲಿದ್ದು, ಹಾರ್ದಿಕ್ ಪಾಂಡ್ಯ ಟಿ20 ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದು, ಪಾಂಡ್ಯ ಟಿ20 ತಂಡವನ್ನು ಮುನ್ನಡೆಸುತ್ತಿದ್ದು, ಶಿಖರ್ ಧವನ್ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬಾಂಗ್ಲಾದೇಶ ಪ್ರವಾಸಕ್ಕೆ ಮರಳಲಿದ್ದಾರೆ.
ರೋಹಿತ್, ಕೊಹ್ಲಿ, ಅಶ್ವಿನ್ ಭವಿಷ್ಯದ ಬಗ್ಗೆ ಚಿಂತನೆ
ಆಯ್ಕೆ ಸಮಿತಿ ಬದಲಾವಣೆ ಜತೆಗೆ ಹಲವು ಹಿರಿಯ ಆಟಗಾರರನ್ನು ಟಿ20 ತಂಡದಿಂದ ಕೈಬಿಡಬಹುದು ಎಂಬ ಮಾತುಗಳು ಸಹ ಕೇಳಿಬರುತ್ತಿದೆ. ವಾಸ್ತವವಾಗಿ ಬಿಸಿಸಿಐನ ಮುಂದಿನ ಗುರಿ ಈಗ 2024 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಆಗಿದೆ. ಹೀಗಾಗಿ ಭವಿಷ್ಯದ ಬಗ್ಗೆ ತೀರ್ಮಾನ ಕೈಗೊಳ್ಳಲು ಮುಂದಾಗಿರುವ ಬಿಸಿಸಿಐ ಇಡೀ ತಂಡದಲ್ಲಿಯೇ ಬದಲಾವಣೆ ತರಲು ಯೋಚಿಸುತ್ತಿದೆ. ಅಂದರೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್ ಅಶ್ವಿನ್, ದಿನೇಶ್ ಕಾರ್ತಿಕ್ ಅವರಂತಹ ದೊಡ್ಡ ಹೆಸರುಗಳು ಟಿ20 ತಂಡದಿಂದ ಡಿಲೀಟ್ ಆಗುವ ಎಲ್ಲಾ ಸಾಧ್ಯತೆಗಳಿವೆ.